ತುಮಕೂರು ಜಿಲ್ಲೆಯಲ್ಲಿ ಕಾಂಗ್ರೆಸ್‍ನಿಂದ ಮಾದಿಗರ ಕಡೆಗಣನೆ

ತುಮಕೂರು :ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದು 2 ವರ್ಷ ಕಳೆಯುತ್ತಾ ಬಂದಿದ್ದರೂ ತುಮಕೂರು ಜಿಲ್ಲೆಯಲ್ಲಿ ಇದುವರೆಗೂ ಮಾದಿಗ ಸಮುದಾಯದ ಕಾರ್ಯಕರ್ತರಿಗೆ, ಮುಖಂಡರಿಗೆ ಪಕ್ಷದಲ್ಲಿಯಾಗಲಿ, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳಲ್ಲಾಗಲಿ, ಸ್ಥಾನ ಮಾನ ನೀಡದೆ ಕಡೆಗಣಿಸಲಾಗುತ್ತಿದೆ ಎಂದು ಡಿಎಸ್‍ಎಸ್ ಗುಬ್ಬಿ ತಾಲೂಕು ಸಂಚಾಲಕ ಮಾರಶೆಟ್ಟಿಹಳ್ಳಿ ಬಸವರಾಜು ಆರೋಪಿಸಿದ್ದಾರೆ.

ನಗರದ ಎಂ.ಜಿ.ರಸ್ತೆಯ ಅಂಬೇಡ್ಕರ್ ಭವನದಲ್ಲಿ ಮಾದಿಗ ಪರ ಸಂಘಟನೆಗಳ ಒಕ್ಕೂಟದಿಂದ ಆಯೋಜಿಸಿದ್ದ ಸಭೆಯಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ಮಾದಿಗರನ್ನು ತೀವ್ರವಾಗಿ ನಿರ್ಲಕ್ಷ ಮಾಡಿದ್ದಾರೆ. ಮಾದಿಗರ ಮತಗಳಿಂದಲೇ ಗೆದ್ದು ಹತ್ತಾರು ವರ್ಷಗಳಿಂದ ಅಧಿಕಾರದಲ್ಲಿರುವ ಡಾ.ಜಿ.ಪರಮೇಶ್ವರ್ ಆಗಲಿ, ದಲಿತರ ಬಗ್ಗೆ ಕಾಳಜಿ ತೋರುವ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರಾಗಲಿ ಮಾದಿಗ ಸಮುದಾಯದ ಯುವಕರಿಗೆ ಮನ್ನಣೆ ನೀಡುತ್ತಿಲ್ಲ.ಕೆ.ಎಸ್.ಆರ್.ಟಿ.ಸಿ. ಅಧ್ಯಕ್ಷರಾಗಿರುವ ಶಾಸಕರಾದ ಎಸ್.ಆರ್.ಶ್ರೀನಿವಾಸ್ ದಲಿತಪರ ಮಾತುಗಳಿಗೆ ಸ್ವಾಗತ ಕೋರುತ್ತೇವೆ.ಈಗಲಾದರೂ ಪಕ್ಷಕ್ಕೆ ದುಡಿದ ಮಾದಿಗ ಸಮುದಾಯದ ಮುಖಂಡರನ್ನು ಗುರುತಿಸಿ ಎಂ.ಎಲ್.ಸಿ. ಮಾಡಲಿ ಎಂದು ಒತ್ತಾಯಿಸಿದರು.

ತಲೆ ತಲಾಂತರದಿಂದಲೂ ಮಾದಿಗ ಸಮುದಾಯ ಅಧಿಕಾರದಿಂದ ವಂಚಿತರಾಗುತ್ತಲೇ ಬಂದಿದ್ದಾರೆ.ಜಿಲ್ಲೆಯ ಕಾಂಗ್ರೆಸ್ ಪಕ್ಷದ ಹುದ್ದೆಗಳಲ್ಲಿ ಮಾದಿಗರನ್ನು ಕಡೆಗಣಿಸಲಾಗಿದೆ. ಎರಡು ವರ್ಷದಿಂದಲು ಎಪಿಎಂಸಿ ಮತ್ತು ಟೂಡಾ ಅಧ್ಯಕ್ಷ ಸ್ಥಾನಗಳು ಖಾಲಿ ಇವೆ. ಅಲ್ಲದೆ ಈಗ ವಿಧಾನಪರಿಷತ್ ಸ್ಥಾನಗಳು ಖಾಲಿ ಇದ್ದು ಸರಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರುಗಳು ಈ ಹುದ್ದೆಗಳನ್ನು ತುಂಬುವಾಗ ಮಾದಿಗ ಸಮುದಾಯದ ಮುಖಂಡರನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಮಾದಿಗರು ಬೀದಿಗಿಳಿದು ಹೋರಾಟ ನಡೆಸುವುದು ಅನಿವಾರ್ಯವಾಗಿದೆ ಎಂದು ಮಾರಶೆಟ್ಟಿಹಳ್ಳಿ ಬಸವರಾಜು ಎಚ್ಚರಿಕೆ ನೀಡಿದರು.

ಮುಖಂಡರಾದ ಹಬ್ಬತ್ತನಹಳ್ಳಿ ಶ್ರೀನಿವಾಸ ಮಾತನಾಡಿ,ಸರಕಾರ ಬಂದು ಎರಡು ವರ್ಷಗಳಾಗಿದೆ.ಮಾದಿಗ ಸಮುದಾಯದ ಯುವಕರಿಗೆ ಅಧಿಕಾರ ಸಿಕ್ಕಿಲ್ಲ. ಚುನಾವಣೆ ಸಂದರ್ಭದಲ್ಲಿ ಇವರಿಗೆ ಓಟ್ ಕೇಳಲು, ಇವರ ಹಿಂದೆ, ಮುಂದೆ ಜೈಕಾರ ಹಾಕಲು ಮಾತ್ರ ನಾವು ಬೇಕು. ಅಧಿಕಾರ ಬೇಡವೇ ಎಂದು ಪ್ರಶ್ನಿಸಿದ ಅವರು, ಮುಂಬರುವ ಎಂ.ಎಲ್.ಸಿ. ಚುನಾವಣೆಗಳಲ್ಲಿ ಜಿಲ್ಲೆಯಲ್ಲಿರುವ ಇಬ್ಬರು ಸಚಿವರುಗಳು ಮಾದಿಗ ಸಮುದಾಯದ ವ್ಯಕ್ತಿಗಳಿಗೆ ಎಂ.ಎಲ್.ಸಿ. ಸ್ಥಾನ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ಶೀಘ್ರವೇ ಇಬ್ಬರು ಸಚಿವರನ್ನು ಭೇಟಿಯಾಗಿ ಮನವಿ ಸಲ್ಲಿಸಲಾಗುವುದು ಎಂದರು.

ದಲಿತ ಮುಖಂಡರಾದ ಜಯಣ್ಣ ಮಾತನಾಡಿ,ಕಾಂಗ್ರೆಸ್ ಪಕ್ಷದಿಂದ ಎಡಗೈ ಸಮುದಾಯಕ್ಕೆ ಯಾವುದೇ ರೀತಿಯ ಸಹಾಯ ಆಗಿಲ್ಲ. ತಲ ತಲಾಂತರದಿಂದಲೂ ಎಡಗೈ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತಾ ಬಂದಿದ್ದರೂ, ಮಾದಿಗರನ್ನು ತುಳಿಯುವ ಕೆಲಸ ನಿರಂತರವಾಗಿ ನಡೆದಿದೆ.ಚುನಾವಣೆಯಲ್ಲಿ ಅವಿರತ ದುಡಿದವರನ್ನು ಕಡೆಗಣಿಸಲಾಗಿದೆ.ಇದು ಯಾವುದೇ ಪಕ್ಷಕ್ಕೆ ಶೋಭೆ ತರುವಂತಹದಲ್ಲ. ಈಗಲೇ ಕಾಂಗ್ರೆಸ್ ಪಕ್ಷದ ಮುಖಂಡರು, ಅದರಲ್ಲಿಯೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ಮತ್ತು ಸಹಕಾರಿ ಸಚಿವರು ಎಡಗೈ ಸಮುದಾಯದಕ್ಕೆ ಅಧಿಕಾರ ನೀಡದಿದ್ದರೆ ಮುಂಬರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ, ಪಾಲಿಕೆ ಚುನಾವಣೆಗಳಲ್ಲಿ ಮಾದಿಗ ಸಮುದಾಯ ತಕ್ಕ ಪಾಠ ಕಲಿಸಲಿದೆ ಎಂದರು.

ಮಾದಿಗ ದಂಡೋರ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಜಿ.ಸಾಗರ್ ಮಾತನಾಡಿ,ಹಲವು ದಶಕಗಳಿಂದಲೂ ಅಧಿಕಾರಕ್ಕಾಗಿ ಇನ್ನಿಲ್ಲದ ಹೋರಾಟ ನಡೆಸುತಿದ್ದರೂ ಕಾಂಗ್ರೆಸ್ ಪಕ್ಷ ನಮ್ಮನ್ನು ಕಡೆಗಣಿಸಿದೆ.ಒಳಮೀಸಲಾತಿ ಸೇರಿದಂತೆ ಯಾವ ಸಮಸ್ಯೆಗಳು ಬಗೆಹರಿದಿಲ್ಲ. ಸಮಸ್ಯೆಗಳನ್ನು ಇನ್ನೂ ಜೀವಂತವಾಗಿಡುವ ಪ್ರಕ್ರಿಯೆ ಕಾಂಗ್ರೆಸ್ ಪಕ್ಷದಿಂದ ನಡೆದಿದೆ.ಮುಂದಿನ ದಿನಗಳಲ್ಲಿ ಮಾದಿಗ ಸಮುದಾಯ ಕಾಂಗ್ರೆಸ್ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದೆ ಎಂದರು.

ವೇದಿಕೆಯಲ್ಲಿ ಮಾದಿಗ ಪರ ಸಂಘಟನೆಗಳ ಒಕ್ಕೂಟದ ಗೂಳರಿವೆ ನಾಗರಾಜು, ಸಣ್ಣಭೂತಣ್ಣ, ಸುರೇಶ್‍ಕುಮಾರ್, ರಂಗಯ್ಯ.ಎಲ್. ಕೆಸ್ತೂರು ನರಸಿಂಹಮುರ್ತಿ, ಯೋಗಾನಂದ್ ಮಾಗೋಡು, ಹೆಬ್ಬೂರು ಗಾಂಧಿರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *