ವಿಶೇಷ ಪ್ರಕರಣದಡಿ ಗಂಗರಾಜುಗೆ ನಿವೇಶನ ಭಾಗ್ಯ

ತುಮಕೂರು : ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಹೊಸಹಳ್ಳಿ ಗ್ರಾಮದ ಗಂಗರಾಜುಗೆ ವಿಶೇಷ ಪ್ರಕರಣದಡಿ ನಿವೇಶನ ಕಲ್ಪಿಸಬೇಕೆಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜಿ. ಪ್ರಭು ಅವರಿಗೆ ಸೂಚನೆ ನೀಡಿದರು.

ನಗರದಲ್ಲಿಂದು ಸಚಿವರ ಭೇಟಿಗಾಗಿ ಕಾದು ಕುಳಿತಿದ್ದ ವಿಕಲಚೇತನ ಗಂಗರಾಜು ಅವರನ್ನು ಕಂಡ ಸಚಿವರು ಹತ್ತಿದ್ದ ಕಾರಿನಿಂದಿಳಿದು ಗಂಗರಾಜು ಬಳಿ ತೆರಳಿ ಮನವಿ ಅರ್ಜಿ ಸ್ವೀಕರಿಸಿ ವಿಚಾರಿಸಿದರು.

ಹುಟ್ಟುವಾಗಲೇ ಶೇ.80ರಷ್ಟು ಅಂಗವೈಕಲ್ಯ ಹೊಂದಿರುವ ಗಂಗರಾಜು ಅವರು ತುಮಕೂರು ತಾಲೂಕು ಕೋರ ಹೋಬಳಿ ಅರಕೆರೆ ಗ್ರಾಮ ಪಂಚಾಯತಿ ಹೊಸಹಳ್ಳಿ ಗ್ರಾಮದಲ್ಲಿ 20 x 15 ಜಾಗದಲ್ಲಿ ಸುಮಾರು 20 ವರ್ಷಗಳಿಂದ ಅಂಗಡಿಯನ್ನಿಟ್ಟುಕೊಂಡು ಬದುಕಿಗಾಗಿ ಆಸರೆ ಪಡೆದುಕೊಂಡಿದ್ದೇನೆ. ಸದರಿ ಜಾಗವನ್ನು ನನ್ನ ಹೆಸರಿಗೆ ಖಾತೆ ಮಾಡಿಕೊಡಬೇಕೆಂದು ಸಚಿವರಲ್ಲಿ ಮನವಿ ಮಾಡಿದರು.

ಮನವಿಗೆ ಸ್ಪಂದಿಸಿದ ಸಚಿವರು ಸ್ಥಳದಲ್ಲಿದ್ದ ಜಿಲ್ಲಾ ಪಂಚಾಯತಿ ಸಿಇಓ ಅವರಿಗೆ ಕೂಡಲೇ ಕ್ರಮ ಕೈಗೊಂಡು ವರದಿ ನೀಡಬೇಕೆಂದು ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮರಿಯಪ್ಪ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *