ಪಶ್ಚಿಮ ಘಟ್ಟ ಆರೋಗ್ಯ ಸಸ್ಯಗಳ ನಿಧಿ: ಪ್ರೊ. ಜಿ.ಆರ್. ಶಿವಮೂರ್ತಿ

ತುಮಕೂರು: ಪಶ್ಚಿಮ ಘಟ್ಟಗಳ ಪ್ರತಿಯೊಂದು ಸಸ್ಯ ರಾಶಿಯು ಕೂಡ ಹೆಚ್ಚಿನ ಸಂಶೋಧನೆ ಮತ್ತು ವೈದ್ಯಕೀಯ ಕಾರ್ಯಗಳಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತವೆ ಎಂದು ಮೈಸೂರು ವಿಶ್ವವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಸಂದರ್ಶಕ ಪ್ರಾಧ್ಯಾಪಕ ಪ್ರೊ. ಜಿ. ಆರ್. ಶಿವಮೂರ್ತಿ ಹೇಳಿದರು.

ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಸ್ನಾತಕೋತ್ತರ ಪರಿಸರ ವಿಜ್ಞಾನ ವಿಭಾಗ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಪಶ್ಚಿಮಘಟ್ಟಗಳ ಸಸ್ಯವೈವಿಧ್ಯ’ ಕುರಿತು ಮಾತನಾಡಿದರು.

ಪಶ್ಚಿಮ ಘಟ್ಟಗಳಲ್ಲಿನ ಸಸ್ಯ ವೈವಿಧ್ಯತೆಯನ್ನು ರಕ್ಷಿಸಬೇಕು ಮತ್ತು ತಳಿಗಳ ಹೆಚ್ಚಿನ ಸಂಶೋಧನೆ ನಡೆಯಬೇಕು. ವೈದ್ಯಕೀಯ ಸಸ್ಯ ನಿಧಿಗಳನ್ನು ಸಂಗ್ರಹ ಮಾಡುವ ಯೋಜನೆಗಳನ್ನು ರೂಪಿಸಬೇಕು ಎಂದರು.

ಪರಿಸರ ವಿಜ್ಞಾನದಲ್ಲಿ ಪಶ್ಚಿಮ ಘಟ್ಟಗಳ ಪಾತ್ರ ಅಮೂಲ್ಯವಾದದ್ದು. ಅದರಲ್ಲಿನ ಸಸ್ಯ ರಾಶಿ ಜೀವರಾಶಿಯನ್ನು ಉಳಿಸುವುದು ಪ್ರಮುಖ ಕರ್ತವ್ಯವಾಗಬೇಕು ಎಂದು ಹೇಳಿದರು.

ಭೌಗೋಳಿಕ ಮಾಹಿತಿ ವ್ಯವಸ್ಥೆಯಿಂದ ಮತ್ತು ರಿಮೋಟ್ ಸೆನ್ಸಿಂಗ್ ವ್ಯವಸ್ಥೆಯಿಂದ ಔಷಧೀಯ ಸಸಿಗಳ ಹಾಗೂ ಉಳಿದ ವಿವರಗಳ ಭೂ ಸಮೀಕ್ಷೆ ಮಾಡಬಹುದು. ಪಶ್ಚಿಮ ಘಟ್ಟಗಳು ಆರೋಗ್ಯ ಸಸಿಗಳ ನಿಧಿಯಾಗಿದೆ ಎಂದರು.

ಕಾರ್ಯಕ್ರಮದ ಕುರಿತು ಗುಬ್ಬಿ ಲ್ಯಾಬ್ಸ್‍ನ ಭೌಗೋಳಿಕ ಮಾಹಿತಿ ವ್ಯವಸ್ಥೆ ಮತ್ತು ರಿಮೋಟ್ ಸೆನ್ಸಿಂಗ್ ಸಂಸ್ಥೆಯ ನಿರ್ದೇಶಕರಾದ ಡಾ. ಸುಧೀರ್ ಹೆಚ್. ಎಸ್ ಮಾತನಾಡಿ, ಜಿಪಿಎಸ್ ಭೌಗೋಳಿಕ ಮಾಹಿತಿ ವ್ಯವಸ್ಥೆ ಹಾಗೂ ರಿಮೋಟ್ ಸೆನ್ಸಿಂಗ್ ಇತ್ಯಾದಿ ತಂತ್ರಜ್ಞಾನಗಳನ್ನು ಹಲವಾರು ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಈ ವ್ಯವಸ್ಥೆಯಿಂದ ಸುಲಭವಾಗಿ ಭೌಗೋಳಿಕ ವ್ಯವಸ್ಥೆಯ ಆಗುಹೋಗುಗಳನ್ನು ತಿಳಿಯಬಹುದು ಎಂದರು.

ವಿಶ್ವವಿದ್ಯಾನಿಲಯ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಶೇಟ್ ಪ್ರಕಾಶ್ ಎಂ. ಮಾತನಾಡಿ, ಮನುಷ್ಯ ಕುಲವು ಇಂದಿಗೂ ಜೀವಂತವಾಗಿದೆ ಎಂದರೆ ಅದಕ್ಕೆ ಪ್ರಕೃತಿಯ ವರದಾನ ಅಪಾರವಾದುದ್ದು. ಇಂತಹ ಕಾರ್ಯಕ್ರಮಗಳಿಂದ ವಿದ್ಯಾರ್ಥಿಗಳಲ್ಲಿ ಪರಿಸರ ಕಾಳಜಿ ಹಾಗೂ ಜೀವವೈವಿಧ್ಯತೆಯ ಬಗ್ಗೆ ಹೆಚ್ಚು ವಿಚಾರಗಳು ಬೆಳೆಯುತ್ತವೆ ಎಂದರು.

ವಿಭಾಗದ ಸಂಯೋಜಕಿ ಡಾ. ಪೂರ್ಣಿಮಾ ಡಿ., ಸಹಪ್ರಾಧ್ಯಾಪಕರಾದ ಡಾ. ಪರಿಮಳ ಬಿ., ಡಾ. ಕೃಷ್ಣ ಮತ್ತಿತರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *