ಹಸಿದು ಬಂದವರಿಗೆ ಅನ್ನಪೂರ್ಣೇಶ್ವರಿಯೇ ಆಗಿದ್ದ ಸಿದ್ದಗಂಗಮ್ಮ ಚೆನ್ನಿಗಪ್ಪ

ಅನ್ನದಾತರು ಅಂತ ಅನ್ನಿಸಿಕೊಳ್ಳಲು ತುಂಬಾ ತಾಳ್ಮೆ ಮತ್ತು ಅನ್ನ ನೀಡುವ ದಾತರಾಗಿರಬೇಕು, ಅನ್ನ ನೀಡುವ ಗುಣ ಎಲ್ಲರಿಗೂ ಬರುವುದಿಲ್ಲ, ಹಸಿವಿದ್ದವನಿಗೆ ಅನ್ನ ನೀಡಿದಾಗ ಅನ್ನದಲ್ಲಿ ಮತ್ತು ಅನ್ನ ನೀಡಿದವರಲ್ಲಿ ದೇವರನ್ನು ಕಾಣುತ್ತಾನೆ.

ನಾವು ಧರ್ಮಸ್ಥಳವನ್ನು ಅನ್ನದಾನದ ಕ್ಷೇತ್ರವೆಂದು ಕರೆಯುತ್ತೇವೆ, ಅದು ದೇವರ ಸನ್ನಿಧಿಯಾಗಿರುವುದರಿಂದ ಭಕ್ತರ ಸಹಾಯವಿರುತ್ತದೆ, ಭಕ್ತರಿಗೆ ಅನ್ನದಾನ ಮಾಡಬೇಕಾದ ಅನಿವಾರ್ಯ ಅಲ್ಲಿರುತ್ತದೆ.
ನಾನು ಕಂಡಂತೆ ಈ ಹಿಂದೆ ಶ್ರೀಮಂತರು ತಮ್ಮ ಮನೆ, ತೋಟ, ಗದ್ದೆಗಳಲ್ಲಿ ಕೆಲಸ ಮಾಡುವವರಿಗೆ ಅನ್ನ ಹಾಕುತ್ತಿದ್ದರಂತೆ, ಆಳುಗಳು ಅನ್ನ ಹಾಕುವ ಧಣಿಗಳು ಎನ್ನುತ್ತಿದ್ದರಂತೆ, ಆದರೆ ಯಾವ ಫಲಾಪೇಕ್ಷೆಯು ಇಲ್ಲದೆ, ತಮ್ಮನ್ನು ಕಾಣಲು ಬರುವ ಜನರು ಹಸಿವಿನಿಂದ ಹೋಗಬಾರದು ಎಂಬ ಮನೋಭಾವ ಕೆಲ ರಾಜಕಾರಣಿಗಳಲ್ಲಿ ನಾನು ಸ್ವತಃ ಕಂಡಿದ್ದೇನೆ.

ಇಂತಹ ರಾಜಕಾರಣಿಗಳಲ್ಲಿ ಮುಂಚೂಣಿಯಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಇದ್ದಾರೆ, ಅವರು ಶಾಸಕರಾಗಿರಲಿ, ಮಂತ್ರಿಯಾಗಿರಲಿ, ಮುಖ್ಯಮಂತ್ರಿಯಾಗಿರಲಿ ಅವರು ತಮ್ಮ ಮನೆಯ ಒಂದು ಭಾಗದಲ್ಲಿ ದಿನದ 12ಗಂಟೆ ಪರ ಊರುಗಳಿಂದ ಬಂದವರಿಗೆ ಮೊದಲು ಊಟೋಪಚಾರ ನಡೆಯುತ್ತಿತ್ತು. ಊಟವಾದ ನಂತರ ಸ್ವತಃ ಬಂಗಾರಪ್ಪನವರೇ ಬಂದಂತಹ ಜನರ ಕುಶಲೋಪರಿ ವಿಚಾರಿಸಿ ಅವರ ಕಷ್ಟಸುಖ, ಅವರು ಬಂದ ಕೆಲಸವನ್ನು ಮಾಡಿ ಕೊಡಲು ಪ್ರಯತ್ನಿಸುತ್ತಿದ್ದರು.

ಕೆಲಸ ಮಾಡಿ ಕೊಡಬಹುದು ಆದರೆ ಬಂದಂತಹ ಜನರಿಗೆ ತಿಂಡಿ, ಊಟದ ವ್ಯವಸ್ಥೆ ಮಾಡುವುದಿದೆಯಲ್ಲಾ ಅದು ಒಂದು ತರಹ ತ್ರಾಸದಾಯಕವಾದ ಕೆಲಸ. ಮಾಜಿ ಸಚಿವ ಸಿ.ಚೆನ್ನಿಗಪ್ಪನವರನ್ನು ಕಾಣಲು ಅವರ ಮನೆಯಾದ ಬೈರನಾಯಕನಹಳ್ಳಿಯ ತೋಟದ ಮನೆಗೆ ಹೋದಾಗ ಮೊದಲು ತಿಂಡಿ-ಊಟ ಮಾಡಿ ಎಂದು ಹೇಳುತ್ತಿದ್ದರು.

ಈ ಊಟದ ಜವಾಬ್ದಾರಿಯನ್ನು ಅವರ ಧರ್ಮಪತ್ನಿಯಾದ ಸಿದ್ದಗಂಗಮ್ಮ ಯಾವುದೇ ಬೇಸರ ಮಾಡಿಕೊಳ್ಳದೆ ಬಂದಂತಹ ಜನರಿಗೆ ಊಟದ ವ್ಯವಸ್ಥೆ ಮಾಡುತ್ತಿದ್ದರು, ಯಾರು ಎಷ್ಟೇ ಹೊತ್ತಿಗೆ ಹೋದರು ಒಂದು ಹಾಲ್‍ನಲ್ಲಿ ಊಟದ ವ್ಯವಸ್ಥೆ ಸದಾ ಇರುತ್ತಿತ್ತು.

ಚೆನ್ನಿಗಪ್ಪನವರು ಬಂದವರ ಕಷ್ಟಸುಖ ಕೇಳಿದರೆ, ಸಿದ್ದಗಂಗಮ್ಮನವರು ಊಟದ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ಮಾಡಿ ಅನ್ನದಾತೆ, ಅನ್ನಪೂರ್ಣೇಶ್ವರಿ ಆಗಿದ್ದರು.

ನಾನು ಸಹ ಚೆನ್ನಿಗಪ್ಪನವರ ಮನೆಗೆ ಹೋದಾಗ ತಾಯಿ ಸಿದ್ದಗಂಗಮ್ಮನವರೆ ನಿಂತು ಊಟ ಬಡಿಸಿದ್ದನ್ನು ಮರೆಯಲಾಗದು, ಅಂತಹ ಸಿದ್ದಗಂಗಮ್ಮ ಚೆನ್ನಿಗಪ್ಪ ಅವರು ಕಳೆದ ಜನವರಿ 4ರಂದು ಅಗಲಿದ್ದು ದುಃಖ ತಂದಿತು.
ಹಣ ನೀಡಬಹುದು, ಆದರೆ ಹಸಿದು ಬದವರಿಗೆ ಅನ್ನ ನೀಡುವುದು ಇದೆಯಲ್ಲಾ ಅದು ಅನ್ನದಾತರಿಂದ ಮಾತ್ರ ಸಾಧ್ಯ, ಅಂತಹ ಅನ್ನದಾತೆ ಸಿದ್ದಗಂಗಮ್ಮ ಚೆನ್ನಿಗಪ್ಪ ಅವರು ಡಿ.ಸಿ.ಗೌರಿಶಂಕರ್ ಅಂತಹ ಮಗನಲ್ಲೂ ಆ ಗುಣಗಳನ್ನು ಬೆಳಸಿರುವುದು ಒಂದು ತಾಯಿಯ ಗುಣವಾಗಿದೆ.

ಮಾಜಿ ಶಾಸಕ ಡಿ.ಸಿ.ಗೌರಿಶಂಕರ್ ಸಹ ತಮ್ಮ ತಾಯಿ-ತಂದೆಯರಂತೆ ಮನೆಗೆ ಬಂದವರಿಗೆ ಮೊದಲಿಗೆ ಊಟ ಮಾಡುವಂತೆ, ಊಟದ ವ್ಯವಸ್ಥೆಯನ್ನು ಮಾಡಿರುತ್ತಾರೆ. ತಮ್ಮ ತಾಯಿ-ತಂದೆಯ ಅನ್ನದಾನದ ಗುಣಗಳು ಗೌರಿಶಂಕರ್ ಅವರಲ್ಲಿಯೂ ಬಂದಿರುವುದು ಡಾ||ಶ್ರೀ ಶಿವಕುಮಾರಸ್ವಾಮಿಗಳ ದೈವ ಭಕ್ತಿಯು ಅವರಲ್ಲಿದೆ.

-ವೆಂಕಟಾಚಲ.ಹೆಚ್.ವಿ.

Leave a Reply

Your email address will not be published. Required fields are marked *