ಗೌರಿಶಂಕರ್ ಹೊಂದಾಣಿಕೆ ರಾಜಕರಾಣದ ನಿಸ್ಸೀಮರು-ಡಾ.ಜಿ.ಪರಮೇಶ್ವರ್ ಅವರ ಜಗದ್ಗುರುಗಳು-ಶಾಸಕ ಬಿ.ಸುರೇಶ್‍ಗೌಡ ಲೇವಡಿ

ತುಮಕೂರು : ಚುನಾವಣೆಯಲ್ಲಿ ಹೊಂದಾಣಿಕೆ ರಾಜಕಾರಣ ಮಾಡುವುದರಲ್ಲಿ ಗೌರಿಶಂಕರ್ ನಿಸ್ಸೀಮರು. ಅವರು ಮೂರೂ ಪಕ್ಷಗಳನ್ನು ಕಂಡು ಬಂದಿದ್ದಾರೆ. ಇಂಥ ಹೊಂದಾಣಿಕೆ ರಾಜಕಾರಣಕ್ಕೆ ಡಾ.ಜಿ.ಪರಮೇಶ್ವರ್ ಅವರು ಗೌರಿಶಂಕರ್ ಅವರ ಜಗದ್ಗುರುಗಳು ಎಂದು ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‍ಗೌಡ ಲೇವಡಿ ಮಾಡಿದರು.

ಅವರಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತಾ ಹೌದು ನಾನು ಪರಮೇಶ್ವರ್ ಅವರನ್ನು ಟೀಕೆ ಮಾಡಿದ್ದೇನೆ. ನನ್ನ ಟೀಕೆಗೆ ಅವರು ಉತ್ತರ ಕೊಡಬೇಕು. ಇಲ್ಲವಾದರೆ ತಪ್ಪುಗಳನ್ನು ಸರಿ ಮಾಡಬೇಕು. ಅವರಿಗೆ ಧೈರ್ಯವಿದ್ದರೆ ನೇರವಾಗಿ ಬಂದು ನನ್ನ ವಿರುದ್ಧ ಪತ್ರಿಕಾಗೋಷ್ಠಿ ನಡೆಸಬೇಕು. ಅದನ್ನು ಬಿಟ್ಟು ತಮ್ಮ ಚೇಲಾಗಳನ್ನು ಅದಕ್ಕೆ ಬಳಸಿಕೊಳ್ಳಬಾರದು. ಇದು ವೀರರ ಲಕ್ಷಣ ಅಲ್ಲ. ಇದು ಹೇಡಿಗಳ ಲಕ್ಷಣ ಎಂದು ನಾನು ಹೇಳುವುದಿಲ್ಲ ಹೇಳಿದರು.

ಗೌರಿಶಂಕರ್ ನನ್ನ ವಿರುದ್ಧ ವೈಯಕ್ತಿಕ ಆರೋಪ ಮಾಡಿದ್ದಾರೆ. ಅವರಂತೆ ಅದೇ ಭಾಷೆಯಲ್ಲಿ ಮಾತನಾಡಬಹುದು. ಆಗ ನನಗೂ ಅವರಿಗೂ ಯಾವ ವ್ಯತ್ಯಾಸ ಇರುವುದಿಲ್ಲ. ರಾಜಕೀಯದಲ್ಲಿ ಇರುವ ನಾವು ಸಮಾಜಕ್ಕೆ ಮಾದರಿ ಹಾಕಿಕೊಡಬೇಕು. ರೌಡಿಗಳ ಹಾಗೆ ಕಾಣಿಸಿಕೊಳ್ಳಬಾರದು, ಮಾತನಾಡಬಾರದು ಎಂದು ಶಾಸಕ ಬಿ.ಸುರೇಶ್ ಗೌಡ ಅವರು ಗೌರಿಶಂಕರ್ ವಿರುದ್ಧ ವಾಗ್ದಾಳಿ ನಡೆಸಿದರು.

ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದಲ್ಲಿ ನನಗೆ ಲಂಚ ಸಿಕ್ಕಿಲ್ಲ ಎಂದು ಆ ಮಹಾನುಭಾವರು ನನ್ನ ವಿರುದ್ಧ ಆರೋಪ ಮಾಡಿದ್ದಾರೆ. ಇದರ ವಿರುದ್ಧ ನಾನು ಅವರ ಮೇಲೆ ಮಾನನಷ್ಟ ಮೊಕದ್ದಮೆ ಹೂಡಬಹುದು. ಗೌರಿಶಂಕರ್ ಅವರಿಗೆ ಹತಾಶೆಯಾಗಿದೆ ಎಂದು ಹೇಳಿದರು.

ಗೌರಿಶಂಕರ್ ತಂದೆ ಚೆನ್ನಿಗಪ್ಪ ಅವರ ಬಗ್ಗೆ ನಾವು ಅನೇಕ ಕಥೆಗಳನ್ನು ಕೇಳಿದ್ದೇವೆ. ಅವರು ಕಾನ್ಸ್‍ಟೇಬಲ್ ಆಗಿದ್ದರು. ಆಗ ಹೆದ್ದಾರಿಯಲ್ಲಿ ನಿಂತು ಹೋಗುವ, ಬರುವ ಲಾರಿಗಳಿಂದ ಹಪ್ತಾ ವಸೂಲು ಮಾಡುತ್ತಿದ್ದರು ಎಂದು ನಾನು ಕೇಳಿದ್ದೇನೆ. ಬಹುಶಃ ಗೌರಿಶಂಕರ್‍ಗೆ ತಮ್ಮ ತಂದೆಯ ಈ ಕಥೆಗಳು ಮರೆತು ಹೋಗಿರಬಹುದು. ಅವರು ಗಾಜಿನ ಮನೆಯಲ್ಲಿ ಇದ್ದಾರೆ. ನನ್ನ ವಿರುದ್ಧ ಮಾತನಾಡಿದರೆ ನಾನೂ ಮಾತನಾಡುತ್ತೇನೆ. ಅವರು ನಾಲಿಗೆ ಬಿಗಿಹಿಡಿದು ಮಾತನಾಡಬೇಕು ಎಂದು ತಾಕೀತು ಮಾಡಿದರು.

ನಾನು ಪ್ರಯಾಗ್ ರಾಜ್‍ಗೆ ಹೋಗಿ ಪುಣ್ಯ ಸ್ನಾನ ಮಾಡಿದ್ದನ್ನೂ ಈ ಮಹನೀಯರು ಟೀಕಿಸಿದ್ದಾರೆ. ನಾನು ಪ್ರಯಾಗ್ ರಾಜ್‍ಗೂ ಹೋಗುತ್ತೇನೆ. ತಿರಮಕೂಡಲಿಗೂ ಹೋಗುತ್ತೇನೆ. ಆದರೆ ಗೌರಿಶಂಕರ್ ಗಳಿಸಿದ ಪಾಪದ ಹಣದಲ್ಲಿ ಹೋಗುವುದಿಲ್ಲ. ದೇವರು ಅಲ್ಲಿಗೆ ಹೋಗಿ ಬರುವಷ್ಟು ಸಂಪತ್ತನ್ನು ನನಗೆ ಕೊಟ್ಟಿದ್ದಾನೆ ಎಂದು ಗೇಲಿ ಮಾಡಿದರು.

ಗೌರಿಶಂಕರ್ ಅವರೇ, ಶಿವಕುಮಾರ್ ಅವರೂ ತಮ್ಮ ಪಾಪ ತೊಳೆದುಕೊಳ್ಳಲು ಅಲ್ಲಿಗೆ ಹೋಗಿದ್ದರೇ ಎಂದು ನಾನು ಕೇಳಲು ಆಗುತ್ತದೆಯೇ? ಆಗ ನನಗೂ ನಿಮಗೂ ಯಾವ ವ್ಯತ್ಯಾಸವೂ ಇರುವುದಿಲ್ಲ. ನಾನು ನಿಮ್ಮ ಮಟ್ಟಕ್ಕೆ ಇಳಿಯುವುದಿಲ್ಲ ಎಂದು ಹೇಳಿದರು.

ಮುರುಳೀಧರ ಹಾಲಪ್ಪ ಪರಮೇಶ್ವರ್ ಹಿಂದೆ ಓಡಾಡುವುದೇ ರೋಮಾಂಚನ :

ಮುರಳೀಧರ ಹಾಲಪ್ಪ ಅವರು ಪಾಪ ಇನ್ನೂ ಎಳಸು. ಅವರಿಗೆ ಪರಮೇಶ್ವರ್ ಅವರ ಹಿಂದೆ ಓಡಾಡುವುದರಲ್ಲಿಯೇ ರೋಮಾಂಚನ. ಅವರಿಗೆ ನಾನು ವಿಧಾನಸಭೆಯಲ್ಲಿ ತುಮಕೂರು ವಿಶ್ವವಿದ್ಯಾಲಯದ ಸೌಲಭ್ಯಗಳ ಬಗ್ಗೆ ಪ್ರಶ್ನೆ ಕೇಳಿರುವುದು ಗೊತ್ತಿಲ್ಲ ಎಂದು ಗೇಲಿ ಮಾಡಿದ್ದಾರೆ.

ಎತ್ತಿನಹೊಳೆ ನೀರಾವರಿ ಯೋಜನೆ ಬಗ್ಗೆ ಚರ್ಚೆ ಮಾಡಿರುವುದು, ದಲಿತ ಮಹಿಳೆಗೆ ಶವ ಸಂಸ್ಕಾರಕ್ಕೆ ಜಾಗ ಇಲ್ಲದೇ ಇರುವುದನ್ನು ಪ್ರಸ್ತಾಪ ಮಾಡಿರುವುದು ಗೊತ್ತಿಲ್ಲ. ಇವು ಕೇವಲ ಮೂರು ಸ್ಯಾಂಪಲ್ ಕೊಟ್ಟಿರುವ, ಸದನದಲ್ಲಿ ನಾನು ಏನು ಕೇಳಿದೆ. ಏನು ಹೇಳಿದೆ ಎಂದೆಲ್ಲ ಬಂದು ಮುರಳೀಧರ ಹಾಲಪ್ಪ ಅವರಿಗೆ ಹೇಳಲು ಆಗುತ್ತದೆಯೇ? ಅವರು ಇನ್ನಾದರೂ ಪತ್ರಿಕೆಗಳನ್ನು ಓದಲು ಕಲಿಯಬೇಕು. ಅಥವಾ ವಿಧಾನಸಭೆಯ ಲೈಬ್ರರಿಗೆ ಹೋಗಿ ಅಲ್ಲಿ ಕಲಾಪಗಳನ್ನು ಓದಿದರೆ ಯಾರು ಏನು ಮಾತನಾಡಿದ್ದಾರೆ ಎಂದು ಅವರಿಗೆ ಗೊತ್ತಾಗುತ್ತದೆ. ಸುಮ್ಮನೆ ಯಾರೋ ಹೇಳಿಕೊಟ್ಟುದನ್ನು ಮಾಧ್ಯಮಗಳ ಮುಂದೆ ಗಿಣಿಪಾಠ ಮಾಡಿದರೆ ಅವರೇ ನಗೆಪಾಟಲಿಗೆ ಈಡಾಗುತ್ತಾರೆ. ಅವರ ಬಗ್ಗೆ ನನಗೆ ಅಯ್ಯೋ ಅನಿಸುತ್ತದೆ. ಅವರ ತಲೆ ಕೂದಲು ಬಿಳಿಯಾಗಿವೆ. ಆದರೆ, ಬುದ್ಧಿ ಬಲಿತಂತೆ ಕಾಣುವುದಿಲ್ಲ ಎಂದು ಟೀಕಿಸಿದ್ದಾರೆ.

ಮಾಧ್ಯಮಗೋಷ್ಟಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ರವಿ ಹೆಬ್ಬಾಕ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಮುಖಂಡರಾದ ಸದಾನಂದ, ಜಗದೀಶ್, ಮತ್ತಿತರರು ಹಾಜರಿದ್ದರು.

Leave a Reply

Your email address will not be published. Required fields are marked *