ಪಂಪ್‍ಸೆಟ್‍ಗಳಿಗೆ ನಿರಂತರ ವಿದ್ಯುತ್ ಗೆ ರೈತ ಸಂಘ ಬೇಡಿಕೆ

ತುಮಕೂರು:ಇಂದು ವಿಧಾನ ಸೌಧದಲ್ಲಿ ನಡೆದ 2025-26ನೇ ಸಾಲಿನ ಕರ್ನಾಟಕ ಬಜೆಟ್ ಪೂರ್ವ ಸಭೆಯಲ್ಲಿ ಕೃಷಿ ಸಂಬಂಧಿಸಿದ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಹಾಗೂ ತುಮಕೂರು ಜಿಲ್ಲೆಯ ನೀರಾವರಿ, ರೈತರ ಪಂಪ್‍ಸೆಟ್‍ಗಳಿಗೆ ನಿರಂತರ ವಿದ್ಯುತ್ ನೀಡಬೇಕೆಂದು ಒತ್ತಾಯಿಸಿದ ಮನವಿ ಪತ್ರವನ್ನು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಖ್ಯ ಮಂತ್ರಿಗಳಿಗೆ ಸಲ್ಲಿಸಿದ್ದಾರೆ.

ಪ್ರಮುಖವಾಗಿ ತುಮಕೂರು ಜಿಲ್ಲೆಯಲ್ಲಿ ಬಹುನಿರೀಕ್ಷಿತ ಎತ್ತಿನ ಹೊಳೆ ಭದ್ರ, ಗುಬ್ಬಿ ತಾಲೂಕಿನ ಬಿಕ್ಕೆಗುಡ್ಡ ಹಾಗೂ ಹಾಗಲವಾಡಿ ಕುಡಿಯುವ ನೀರಿನ ಯೋಜನೆಗಳು ಸೇರಿದಂತೆ ನೀರಾವರಿ ಯೋಜನೆಗಳು ಕಳೆದ 10 ವರ್ಷಗಳಿಂದ ಕುಂಟುತ್ತಾ ಸಾಗಿವೆ.ಕೃಷಿ ಪಂಪುಸೆಟ್ಟುಗಳಿಗೆ ದಿನಕ್ಕೆ 4 ಗಂಟೆ ವಿದ್ಯುತ್ ದೊರೆಯುತ್ತಿಲ್ಲ, ಕೊಬ್ಬರಿಗೆ ವೈಜ್ಞಾನಿಕ ಬೆಲೆ ದೊರೆಯುತ್ತಿಲ್ಲ,ಮಳೆಯಾಶ್ರಿತ ಪ್ರದೇಶಗಳಾದ ಕೊರಟಗೆರೆ,ಮಧುಗಿರಿ, ಸಿರಾ, ಪಾವಗಡ ತಾಲೂಕುಗಳ ಅಭಿವೃದ್ಧಿ ಪಡಿಸಲು ಬಯಲು ಸೀಮೆ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಬಹುನಿರೀಕ್ಷಿತ ನೀರಾವರಿ ಯೋಜನೆಗಳಾದ ಎತ್ತಿನ ಹೊಳೆ, ಭದ್ರ ಯೋಜನೆಗಳಿಗೆ ಸಂಬಂಧಪಟ್ಟಂತೆ ಕಾಮಗಾರಿಗಳು ಹಣವಿಲ್ಲದೇ ಕುಂಟುತ್ತಾ ಸಾಗುತ್ತಿದ್ದು ಬಜೆಟ್ ನಲ್ಲಿ 1000 ಕೋಟಿ ಮೀಸಲಿಡಬೇಕೆಂದು ರೈತ ಸಂಘ ಒತ್ತಾಯಿಸುತ್ತದೆ.ತುಮಕೂರು ಜಿಲ್ಲೆಯಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿದ್ದು,ಕೃಷಿ ಪಂಪುಸೆಟ್ಟುಗಳಿಗೆ ದಿನಕ್ಕೆ 4 ಗಂಟೆ ವಿದ್ಯುತ್ ಸಿಗುತ್ತಿಲ್ಲ, ಹಾಲಿ ಮಂಜೂರು ಆಗಿರುವ ಉಪ ಸ್ಥಾವರಗಳ ಕೆಲಸಗಳನ್ನು ತುರ್ತಾಗಿ ಮುಗಿಸುವುದು. ತೋಟದ ಮನೆಗಳಲ್ಲಿ ವಾಸವಿರುವವರಿಗೆ ರಾತ್ರಿ ವೇಳೆ ಮಕ್ಕಳು ಓದಲು,ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯಲು ವಿದ್ಯತ್ ಸಂಪರ್ಕ ಕಲ್ಪಿಸುವುದು.

ಗುಬ್ಬಿ ತಾಲೂಕಿನ ನೀರಾವರಿ ಯೋಜನೆಗಳಾದ ಬಿಕ್ಕೆಗುಡ್ಡ ಹಾಗೂ ಹಾಗಲವಾಡಿ ಕುಡಿಯುವ ನೀರಿನ ವೀರಾವರಿ ಯೋಜನೆಗಳ ಕಾಮಗಾರಿಗಳನ್ನು ತುರ್ತಾಗಿ ಮುಗಿಸಿ ಆ ಭಾಗಕ್ಕೆ ನೀರು ಒದಗಿಸುವುದು.ಅವೈಜ್ಞಾನಿಕ ಹೇಮಾವತಿ ಲಿಂಕ್ ಎಕ್ಸ್‍ಪ್ರೇಸ್ ಕೆನಾನ್ ಯೋಜನೆ ಕೈ ಬಿಡದಿದ್ದರೆ ಐದಾರು ತಾಲೂಕುಗಳು ನೀರಾವರಿಯಿಂದ ವಂಚಿತವಾಗುತ್ತವೆ. ಕೂಡಲೇ ಕಾಮಗಾರಿ ನಿಲ್ಲಿಸಿ ಮೂಲ ನಾಲೆಯ ಮುಖಾಂತರವೇ ನೀರು ತೆಗೆದುಕೊಂಡು ಹೋಗಲು ನಮ್ಮ ಅಬ್ಯಂತರವಿಲ್ಲ ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.

ದೇಶದಲ್ಲಿ ಅತಿ ಹೆಚ್ಚು ಕೊಬ್ಬರಿ ಬೆಳೆಯುವ ರಾಜ್ಯ ಕೇರಳ ಬಿಟ್ಟರೆ ಕರ್ನಾಟಕದಲ್ಲಿ ತುಮಕೂರು ಜಿಲ್ಲೆ ಮಾತ್ರ. ಸರಕಾರ ಈ ಕೊಬ್ಬರಿಗೆ ಕೇವಲ 12,100/-ರೂ ಬೆಲೆ ನಿಗಧಿ ಮಾಡಿದ್ದು ಉತ್ಪಾದನ ವೆಚ್ಚವೇ 18,630/-ರೂಗಳಾಗಿದ್ದು ಸರಕಾರ 25,000/-ರೂಗಳನ್ನು ಎಂಎಸ್‍ಪಿ ಯಾಗಿ ನಿಗಧಿ ಮಾಡಬೇಕೆಂದು ರೈತ ಸಂಘ ಒತ್ತಾಯಿಸುತ್ತದೆ.ಹಿಂದುಳಿದ ಮತ್ತು ಮಳೆ ಆಶ್ರಿತ ಪ್ರದೇಶವಾದ ಹಾಗೂ ಜಿಲ್ಲೆ ಕೇಂದ್ರವಾಗಲು ಎಲ್ಲಾ ಅವಕಾಶಗಳು ಹೊಂದಿರುವ ಮಧುಗಿರಿ ತಾಲೂಕನ್ನು ಜಿಲ್ಲೆಯನ್ನಾಗಿ ಘೋಷಿಸಬೇಕೆಂದು ರೈತ ಸಂಘ ಒತ್ತಾಯಿಸುತ್ತದೆ.ತುಮಕೂರು ಜಿಲ್ಲೆಯ ಮಧುಗಿರಿ, ಕೊರಟಗೆರೆ, ಸಿರಾ ಮತ್ತು ಪಾವಗಡ ತಾಲೂಕುಗಳು ಮಳೆ ಆಶ್ರಿತ ಬಯಲು ಸೀಮೆ ಪ್ರದೇಶಗಳಾಗಿದ್ದು,ಈ ತಾಲೂಕುಗಳ ಅಭಿವೃದ್ಧಿಯಾಗಲು ಬಯಲು ಸೀಮೆ ಅಭಿವೃದ್ಧಿ ನಿಗಮಕ್ಕೆ ಹೆಚ್ಚಿನ ಅನುದಾನ ನೀಡಬೇಕೆಂದು ರೈತ ಸಂಘ ಮನವಿ ಮಾಡಿದೆ.

ನೆನೆಗುದಿಗೆ ಬಿದ್ದಿರುವ ತುಮಕೂರು-ರಾಯದುರ್ಗ ರೈಲ್ವೆ ಕಾಮಗಾರಿಯನ್ನು ಮುಂದುವರಿಸಲು ಅಗತ್ಯವಿರುವಷ್ಟು ಅನುದಾನವನ್ನು ಕೇಂದ್ರದಿಂದ ತರಿಸಿ ತುರ್ತಾಗಿ ಕಾಮಗಾರಿ ಪೂರ್ಣ ಗೊಳಿಸಬೇಕು.ತುಮಕೂರು ಜಿಲ್ಲೆಯಲ್ಲಿ ಸರ್ವರ್ ಸಮಸ್ಯೆ ತೀವ್ರವಾಗಿದ್ದು ಎಲ್ಲಾ ಇಲಾಖೆಗಳಲ್ಲಿ ಸರಕಾರಿ ಕೆಲಸಗಳು ಕುಂಟುತ್ತಾ ಸಾಗುತ್ತಿವೆ. ಕೂಡಲೇ ಸರ್ವರ್ ಸಮಸ್ಯೆ ಬಗೆಹರಿಸಬೇಕೆಂದು ರೈತ ಸಂಘ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಶಂಕರಪ್ಪ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

Leave a Reply

Your email address will not be published. Required fields are marked *