ರಾಗಿ ಖರೀದಿ ಕೇಂದ್ರ : ರೈತರಿಗೆ ನೆರಳಿನ ವ್ಯವಸ್ಥೆ ಮಾಡಲು ಡಿಸಿ ಸೂಚನೆ

ತುಮಕೂರು : ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ತುಮಕೂರು ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆರೆದಿರುವ ರಾಗಿ ಖರೀದಿ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದರು.

ನಂತರ ಮಾತನಾಡಿದ ಅವರು, ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಗಾಗಿ ಪ್ರಾರಂಭಿಸಿರುವ ನೋಂದಣಿ ಕೇಂದ್ರದಲ್ಲಿ ನೋಂದಣಿಗಾಗಿ ಬಿಸಿಲಿನಲ್ಲಿಯೇ ಸಾಲುಗಟ್ಟಿ ನಿಂತಿದ್ದ ರೈತರಿಗೆ ಕೂಡಲೇ ನೆರಳಿನ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಸ್ಥಳದಲ್ಲಿಯೇ ಕೃಷಿ ಉತ್ಪನ್ನ ಮಾರುಕಟ್ಟೆ ಉಪನಿರ್ದೇಶಕ ರಾಜಣ್ಣ ಹಾಗೂ ಖರೀದಿ ಅಧಿಕಾರಿ ರುದ್ರಪ್ಪ ಅವರಿಗೆ ಸೂಚನೆ ನೀಡಿದರು. 

ರಾಗಿ ಖರೀದಿಗಾಗಿ ತೆರೆದಿರುವ ನೋಂದಣಿ ಕೇಂದ್ರದಲ್ಲಿ ನೋಂದಣಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಆಗಮಿಸುತ್ತಿರುವುದರಿಂದ ಖರೀದಿ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಿರ್ವಹಿಸುವ ನಿಟ್ಟಿನಲ್ಲಿ ಹೆಚ್ಚುವರಿ ಅಧಿಕಾರಿಗಳನ್ನು ನಿಯೋಜಿಸಬೇಕು. ರೈತರನ್ನು ಕಾಯಿಸದೆ ನೋಂದಣಿ ಕಾರ್ಯವನ್ನು ಚುರುಕುಗೊಳಿಸಬೇಕು. ಸರ್ಕಾರ ನಿಗಧಿಪಡಿಸಿದ ಮಾನದಂಡಗಳನ್ವಯ ರಾಗಿಯನ್ನು ಖರೀದಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ ಮಾತನಾಡಿ, ಸರ್ಕಾರವು ಕನಿಷ್ಠ ಬೆಂಬಲಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ರಾಗಿ ಖರೀದಿ ದರವನ್ನು 4,290 ರೂ.ಗಳಿಗೆ ನಿಗಧಿಪಡಿಸಿದೆ. ರೈತರಿಂದ ನೇರವಾಗಿ ರಾಗಿ ಖರೀದಿಸಲು ಈಗಾಗಲೇ ಜಿಲ್ಲೆಯಲ್ಲಿ 10 ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ. ಖರೀದಿಗಾಗಿ ಈವರೆಗೂ 51,000 ರೈತರು 7,61,000 ಕ್ವಿಂಟಾಲ್ ರಾಗಿಯನ್ನು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.

ರಾಗಿಯಲ್ಲಿರುವ ತೇವಾಂಶ ಪ್ರಮಾಣವನ್ನು ಪರಿಶೀಲಿಸುವ ಪ್ರಕ್ರಿಯೆಯನ್ನು ಜಿಲ್ಲಾಧಿಕಾರಿಗಳು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ವ್ಯವಸ್ಥಾಪಕ ಶ್ರೀಧರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *