ಬೆಳಿಗ್ಗೆ ಬೆಳಿಗ್ಗೇನೆ ವೈದ್ಯಾಧಿಕಾರಿ ಮನೆ ಮೇಲೆ ಲೋಕಾ ದಾಳಿ

ತುಮಕೂರು- ಆದಾಯಕ್ಕಿಂತ ಹೆಚ್ಚು ಅಕ್ರಮವಾಗಿ ಆಸ್ತಿ ಗಳಿಸಿದ್ದಾರೆ ಎಂಬ ಆರೋಪದ ಮೇರೆಗೆ ಬೆಳ್ಳಂಬೆಳಗ್ಗೆ ತುಮಕೂರು ಲೋಕಾಯುಕ್ತ ಪೆÇಲೀಸರು ಸಿರಾ ತಾಲ್ಲೂಕಿನ ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಜಗದೀಶ್ ರವರ ಮನೆ ಸೇರಿದಂತೆ ಒಟ್ಟು ಆರು ಕಡೆ ಏಕಕಾಲದಲ್ಲಿ ದಾಳಿ ನಡೆಸಿದರು.

ಸಿರಾ ತಾಲೂಕು ತಾವರೆಕೆರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರಾಗಿರುವ ಡಾ. ಜಗದೀಶ್ ರವರ ತುಮಕೂರಿನ ಬಟವಾಡಿ ಬಳಿಯ ಮನೆ, ಸಿರಾ ತಾಲ್ಲೂಕಿನ ಫಾರಂ ಹೌಸ್, ಬರಗೂರಿನಲ್ಲಿರುವ ವಾಣಿಜ್ಯ ಕಟ್ಟಡ ಸೇರಿದಂತೆ ಆರು ಕಡೆ ಲೋಕಾಯುಕ್ತ ಪೆÇಲೀಸರು ಏಕಕಾಲದಲ್ಲಿ ದಾಳಿ ನಡೆಸಿ ದಾಖಲಾತಿಗಳನ್ನು ಪರಿಶೀಲನೆ ನಡೆಸಿದರು.

ಆದಾಯಕ್ಕಿಂತ ಹೆಚ್ಚಿಗೆ ಆಸ್ತಿ ಗಳಿಸಿದ್ದಾರೆ ಹಾಗೂ ಅಕ್ರಮ ಆಸ್ತಿ ಗಳಿಕೆ ಆರೋಪದಡಿ ಲೋಕಾಯುಕ್ತ ಅಧಿಕಾರಿಗಳು ಬರಗೂರಿನಲ್ಲಿರುವ ವಾಣಿಜ್ಯ ಕಟ್ಟಡ, ತುಮಕೂರಿನ ಬಟವಾಡಿ ಬಳಿ ಇರುವ ಮನೆ, ಮಂಜುನಾಥ್ ನಗರದಲ್ಲಿರುವ ಕಾಂಪ್ಲೆಕ್ಸ್ ಮೇಲೆ ದಾಳಿ ನಡೆಸಿದ್ದಾರೆ. ಯಲ್ಪೆನಹಳ್ಳಿ ಗ್ರಾಮದ ವಾಸದ ಮನೆ, ಸಹೋದರ ಕಾಂತರಾಜ್ ಹಾಗೂ ಡಾ. ಜಗದೀಶ್ ಪತ್ನಿ ರೂಪ ಹೆಸರಿನಲ್ಲಿರುವ ಮನೆ ಜಮೀನಿನ ಮೇಲೂ ದಾಳಿ ಮಾಡಿ ದಾಖಲಾತಿಗಳ ಪರಿಶೀಲನೆ ನಡೆಸಿದಾಗ ಸಿರಾ ತಾಲ್ಲೂಕಿನ ಬರಗೂರಿನಲ್ಲಿ ತನ್ನ ತಾಯಿ ಹೆಸರಿನಲ್ಲಿ ಆಸ್ತಿ ಪತ್ತೆಯಾಗಿದೆ ಎಂದು ಹೇಳಲಾಗಿದೆ.

ಬರಗೂರಿನಲ್ಲಿ ಮೂರು ಕಡೆ, ತುಮಕೂರು ಸೇರಿದಂತೆ ಒಟ್ಟು 6 ಕಡೆ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳಿಗೆ ಮಹತ್ತರವಾದ ದಾಖಲೆಗಳನ್ನು ದೊರೆತಿದ್ದು, ಮತ್ತಷ್ಟು ತಪಾಸಣಾ ಕಾರ್ಯ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ತುಮಕೂರು ಲೋಕಾಯುಕ್ತ ಎಸ್ಪಿ ಲಕ್ಷ್ಮೀನಾರಾಯಣ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್ಪಿ ರಾಮಕೃಷ್ಣ ಕೆ.ಜಿ., ಇನ್ಸ್‍ಪೆಕ್ಟರ್‍ಗಳಾದ ಶಿವರುದ್ರಪ್ಪ ಮೇಟಿ, ಸುರೇಶ್, ಸಲೀಂ ಅಹಮದ್ ಮತ್ತು ಸಿಬ್ಬಂದಿಗಳು ಪಾಲ್ಗೊಂಡಿದ್ದು, ದಾಖಲಾತಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ. ಸಂಜೆ ವೇಳೆಗೆ ಸ್ಪಷ್ಟ ಮಾಹಿತಿ ದೊರೆಯಲಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *