ರಾಗಿ ಖರೀದಿ : ಅಧಿಕಾರಿಗಳು ಮಾರ್ಗಸೂಚಿ ಪಾಲಿಸಲು ಡೀಸಿ ಸೂಚನೆ

ತುಮಕೂರು : ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ 11 ಕೇಂದ್ರಗಳಲ್ಲಿ ರೈತರಿಂದ ರಾಗಿ ಖರೀದಿಸುವ ಪ್ರಕ್ರಿಯೆ ನಡೆಯುತ್ತಿದ್ದು, ರಾಗಿ ಖರೀದಿ ಪ್ರಕ್ರಿಯೆಯಲ್ಲಿ ಖರೀದಿ ಅಧಿಕಾರಿ-ಸಿಬ್ಬಂದಿಗಳು ಕಡ್ಡಾಯವಾಗಿ ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚನೆ ನೀಡಿದ್ದಾರೆ.

ರಾಗಿ ಖರೀದಿಸುವಾಗ ಸರಿಯಾಗಿ ತೂಕ ಪಡೆದುಕೊಳ್ಳದೇ ಹೆಚ್ಚಿನದಾಗಿ ಪಡೆಯುತ್ತಿರುವುದಾಗಿ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ರಾಗಿ ಖರೀದಿಗಾಗಿ ರೈತರಿಗೆ ಟೋಕನ್ ನೀಡುವಾಗ ರೈತರು ನೋಂದಣಿ ಮಾಡಿಸಿದ ದಿನಾಂಕವನ್ನು ಗಣನೆಗೆ ತೆಗೆದುಕೊಂಡು ಕ್ರಮ ಸಂಖ್ಯೆವಾರು ಟೋಕನ್ ಕೊಡಬೇಕು. ರೈತರು ರಾಗಿಯನ್ನು ಖರೀದಿ ಕೇಂದ್ರಕ್ಕೆ ತರಬೇಕಾದ ದಿನದ ಬಗ್ಗೆ ಸ್ಪಷ್ಟವಾಗಿ ಟೋಕನ್‍ನಲ್ಲಿ ನಮೂದಿಸಿರಬೇಕು.

ಮುಂಚಿತವಾಗಿಯೇ ಪ್ರತಿ 50 ಕೆ.ಜಿ. ಚೀಲದಲ್ಲಿ ರಾಗಿ ತರುವ ಬಗ್ಗೆ ಹಾಗೂ ಗೋಣಿಚೀಲ ಸೇರಿಸಿ ಪ್ರತಿ ಚೀಲದಲ್ಲಿ ಎಷ್ಟು ಪ್ರಮಾಣದಲ್ಲಿ ರಾಗಿ ತರಬೇಕು ಎಂಬುದನ್ನು ರೈತರಿಗೆ ತಿಳಿಸಬೇಕು. ಈ ಬಗ್ಗೆ ಎಲ್ಲರಿಗೂ ಕಾಣುವಂತೆ ಫಲಕ ಪ್ರದರ್ಶಿಸಬೇಕು. ಸರ್ಕಾರ ನಿಗಧಿಪಡಿಸಿರುವ ಪ್ರಮಾಣದಂತೆ ನಿಖರ ತೂಕದ ರಾಗಿ ಪಡೆದುಕೊಳ್ಳಬೇಕು. ಹೆಚ್ಚಿನ ತೂಕ ಪಡೆಯತಕ್ಕದಲ್ಲ.

ರೈತರು ತರುವ ರಾಗಿಯ ಗುಣಮಟ್ಟವನ್ನು ಪರಿಶೀಲಿಸಿ ಸರ್ಕಾರದ ಮಾನದಂಡಗಳನ್ವಯ ಉತ್ತಮ ಗುಣಮಟ್ಟದ ರಾಗಿಯನ್ನು ಮಾತ್ರ ಪಡೆದುಕೊಳ್ಳಬೇಕು. ಮೂರನೇ ವ್ಯಕ್ತಿ ಪರೀಕ್ಷಕ (Third Party Assayer) ಗುಣಮಟ್ಟ ದೃಢೀಕರಣ ಮಾಡುವಾಗ ಎಚ್ಚರಿಕೆಯಿಂದ ದೃಢೀಕರಣ ಮಾಡಬೇಕು.

ಕಳಪೆ ಗುಣಮಟ್ಟದ ರಾಗಿ ಖರೀದಿಯಾದರೆ ಮುಂದೆ ಎಫ್.ಸಿ.ಐ ನಿಂದ ತಿರಸ್ಕøತವಾದರೆ ಅದಕ್ಕೆ ಮೂರನೇ ವ್ಯಕ್ತಿ ಪರೀಕ್ಷಕ ಮತ್ತು ಖರೀದಿ ಅಧಿಕಾರಿಗಳು ಜವಾಬ್ದಾರರಾಗುತ್ತಾರೆ. ತಿರಸ್ಕøತಗೊಂಡ ರಾಗಿಯ ಮೊತ್ತವನ್ನು ಸಂಬಂಧಿಸಿದವರಿಂದ ವಸೂಲಿ ಮಾಡಲಾಗುವುದು ಮತ್ತು ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು.

ರಾಗಿ ಖರೀದಿ ಮಾಡಿದ ತಕ್ಷಣ ಗ್ರೈನ್ ಓಚರ್ ಅನ್ನು ಕೊಡಬೇಕು. ಮರು ದಿನ ಬರುವಂತೆ ಹೇಳತಕ್ಕದ್ದಲ್ಲ. ರೈತರು ತಂದ ರಾಗಿಯನ್ನು ಇಳಿಸಿಕೊಂಡು ಗುಣಮಟ್ಟ ಪರಿಶೀಲಿಸಿ ಕಳಪೆ ಇದ್ದರೆ ರೈತರಿಗೆ ಅಲ್ಲಿಯೇ ಹಿಂತಿರುಗಿಸಬೇಕು. ತೂಕ ಮಾಡಿ ಪ್ರತಿ ಚೀಲಕ್ಕೆ ನಿವ್ವಳ 50 ಕೆ.ಜಿ.ಯಂತೆ ಪ್ರಮಾಣೀಕರಿಸಿ(Standardise) ಸಂಗ್ರಹಣಾ ಕೇಂದ್ರಕ್ಕೆ ಅದೇ ದಿನ ರವಾನಿಸಬೇಕು.

ಆಯಾ ದಿನ ಖರೀದಿ ಮಾಡಿ ಸಂಗ್ರಹಣಾ ಕೇಂದ್ರಕ್ಕೆ ರವಾನಿಸಿದ ಬಗ್ಗೆ ಎಸ್.ಡಬ್ಲೂ.ಸಿ ಗೋದಾಮು ವ್ಯವಸ್ಥಾಪಕರಿಂದ ಅದೇ ದಿನ ಸ್ವೀಕೃತಿ ಬಾಂಡ್ ಪಡೆದು ಕೆ.ಎಫ್.ಸಿ.ಎಸ್.ಸಿ ಜಿಲ್ಲಾ ಕಚೇರಿಗೆ ರವಾನಿಸಬೇಕು.

ಖರೀದಿ ಕೇಂದ್ರಗಳಲ್ಲಿ ರೈತರಲ್ಲದ ಅನಧಿಕೃತ ವ್ಯಕ್ತಿಗಳು, ಸಂಘಟನೆಯವರು, ಮಧ್ಯವರ್ತಿಗಳು ಬರದಂತೆ ಎಚ್ಚರ ವಹಿಸಬೇಕು.

ರಾಗಿ ತರುವ ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು. ಗೊಂದಲಗಳಿಗೆ ಅವಕಾಶ ಆಗದಂತೆ ಖರೀದಿ ಮಾಡಬೇಕು.

ಕಾಲಾವಕಾಶ ಕಡಿಮೆ ಇರುವ ಕಾರಣ ರಜಾ ದಿನವೂ ಸೇರಿದಂತೆ ಎಲ್ಲಾ ದಿನಗಳಲ್ಲಿ ಖರೀದಿ ಮಾಡಬೇಕು. ರಾಗಿ ಖರೀದಿ ಮಾಡುವ ಜಾಗದಲ್ಲಿ ನೆಲಕ್ಕೆ ಟಾರ್ಪಾಲೀನ್ ಹಾಕಿರಬೇಕು.

ರಾಗಿ ಖರೀದಿಗೆ ಸಂಬಂಧಿಸಿದಂತೆ ದೂರುಗಳು ಅಂದರೆ ರೈತರಿಂದ ಸರ್ಕಾರ ನಿಗಧಿಪಡಿಸಿರುವ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣ ಪಡೆಯುವುದು, ಕಳಪೆ ಗುಣಮಟ್ಟದ ರಾಗಿ ಪಡೆಯುವುದು, ಮಧ್ಯವರ್ತಿಗಳಿಗೆ ಅವಕಾಶ ನೀಡುವುದು, ರೈತರೊಂದಿಗೆ ಸೌಜನ್ಯದಿಂದ ವರ್ತಿಸದಿರುವುದು ಮುಂತಾದ ವಿಷಯಗಳ ಬಗ್ಗೆ ದೂರುಗಳು ಬಂದರೆ ಖರೀದಿ ಅಧಿಕಾರಿ ಮತ್ತು ಗ್ರೇಡರ್ ವಿರುದ್ಧ ಕ್ರಮ ತೆಗೆದುಕೊಳ್ಳುವುದಲ್ಲದೆ ಅಗತ್ಯ ವಸ್ತುಗಳ ಕಾಯ್ದೆ 1955ರಡಿ ಕ್ರಮ ಜರುಗಿಸಲಾಗುವುದು.

ಸಾಗಾಣಿಕೆ ಮತ್ತು ಹಸ್ತಾಂತರ ಗುತ್ತಿಗೆದಾರರು ಪ್ರತಿ ಖರೀದಿ ಕೇಂದ್ರಕ್ಕೆ ಅಗತ್ಯ ಇರುವಷ್ಟು ಸಂಖ್ಯೆಯ ಹಮಾಲಿ ಮತ್ತು ಸಾಗಾಣಿಕೆ ಲಾರಿಗಳನ್ನು ಒದಗಿಸಬೇಕು. ಆಯಾ ದಿನ ಖರೀದಿಸಿದ ರಾಗಿಯನ್ನು ಸ್ವಚ್ಛಗೊಳಿಸಿ ನಿವ್ವಳ ತೂಕ 50 ಕೆ.ಜಿ. ಪ್ರಕಾರ ಚೀಲಗಳನ್ನು ಪ್ರಮಾಣೀಕರಿಸಿ ತೂಕ ಮಾಡಿ ನಂತರ ಲೋಡ್ ಮಾಡಿ ಸಂಗ್ರಹಣ ಕೇಂದ್ರಕ್ಕೆ ಸಾಗಿಸಿ ಅಲ್ಲಿ ನಿಯಮ ಬದ್ಧವಾಗಿ ದಾಸ್ತಾನು ಮಾಡಬೇಕು. ಇದರಲ್ಲಿ ಲೋಪವಾದರೆ ಟೆಂಡರ್ ಷರತ್ತಿನ ಪ್ರಕಾರ ಸಾಗಾಣಿಕೆ ವಿರುದ್ಧ ಕ್ರಮ ಜರುಗಿಸಲಾಗುವುದು.

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕಾರ್ಯದ ಮೇಲ್ವಿಚಾರಣೆಗಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಿರುವುದರಿಂದ ಸದರಿ ಅಧಿಕಾರಿಗಳು ತಮ್ಮ ವ್ಯಾಪ್ತಿಯ ರಾಗಿ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿ ಲೋಪಗಳಿಗೆ ಅವಕಾಶವಾಗದಂತೆ ಖರೀದಿ ಪ್ರಕ್ರಿಯೆ ಸುಗಮವಾಗಿ ನಡೆಸಲು ಕ್ರಮ ತೆಗೆದುಕೊಳ್ಳಲು ಸೂಚಿಸಿದೆ.

ಆಹಾರ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರತಿ ದಿನದ ಖರೀದಿ ವಿವರಗಳನ್ನು ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಲು ಸೂಚಿಸಿದೆ. ಮೇಲಿಂದ ಮೇಲೆ ಖರೀದಿ ಕೇಂದ್ರಗಳಿಗೆ ಭೇಟಿ ನೀಡಿ ಲೋಪಗಳಿಗೆ ಅವಕಾಶವಾಗದಂತೆ ಖರೀದಿ ಪ್ರಕ್ರಿಯೆ ಸುಗಮವಾಗಿ ನಡೆಸಲು ಕ್ರಮ ತೆಗೆದುಕೊಳ್ಳಲು ಸೂಚಿಸಿದೆ.

ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕರು ಜಿಲ್ಲೆಯಲ್ಲಿ ರಾಗಿ ಖರೀದಿ ಪ್ರಕ್ರಿಯೆಯ ಬಗ್ಗೆ ವಿಶೇಷ ನಿಗಾವಹಿಸಿ ಕೆ.ಎಫ್.ಸಿ.ಎಸ್.ಸಿ ಜಿಲ್ಲಾ ವ್ಯವಸ್ಥಾಪಕರು, ಖರೀದಿ ಅಧಿಕಾರಿ ಮತ್ತು ಗ್ರೇಡರ್‍ಗಳಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು. ಕಾಲಕಾಲಕ್ಕೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಪ್ರಕ್ರಿಯೆ ಸುಗಮವಾಗಿ ನಡೆಯುವ ಬಗ್ಗೆ ಸಂಬಂಧಿಸಿದವರೆಲ್ಲರೂ ವಿಶೇಷ ಕಾಳಜಿ ವಹಿಸಿ ಕಾರ್ಯನಿರ್ವಹಿಸಲು ಅವರು ಸೂಚಿಸಿದ್ದಾರೆ.

Leave a Reply

Your email address will not be published. Required fields are marked *