ತುಮಕೂರು- ವಿಶ್ವ ಕ್ಷಯರೋಗ ದಿನದ ಅಂಗವಾಗಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಐಎಂಎ ಹಾಗೂ ಶ್ರೀದೇವಿ ಮೆಡಿಕಲ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಕ್ಷಯ ರೋಗ ನಿರ್ಮೂಲನೆಗಾಗಿ ಜನಜಾಗೃತಿ ಜಾಥಾವನ್ನು ನಗರದಲ್ಲಿ ನಡೆಸಲಾಯಿತು.
ಹೌದು..! ನಾವು ಕ್ಷಯ ರೋಗವನ್ನು ಕೊನೆಗೊಳಿಸಬಹುದು ಎಂಬ ಘೋಷವಾಕ್ಯದೊಂದಿಗೆ ಕ್ಷಯ ರೋಗ ನಿರ್ಮೂಲನೆಗಾಗಿ ಜನರಲ್ಲಿ ಜಾಗೃತಿ ಮೂಡಿಸಲು ನಗರದ ಜಿಲ್ಲಾಸ್ಪತ್ರೆ ಆವರಣದಿಂದ ಹಮ್ಮಿಕೊಂಡಿದ್ದ ಜಾಥಾಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚಂದ್ರಶೇಖರ್ ಬಿ.ಎಂ., ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಜ್ಗರ್ ಬೇಗ್ ಹಾಗೂ ಐಎಂಎ ಅಧ್ಯಕ್ಷ ಡಾ. ಭೂಷಣ್ ಕೆ.ಪಿ.ಎಸ್. ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ನಂತರ ಮಾತನಾಡಿದ ಡಿಹೆಚ್ಓ ಡಾ. ಚಂದ್ರಶೇಖರ್ ಬಿ.ಎಂ. ಮಾತನಾಡಿ, ಕ್ಷಯ ರೋಗವನ್ನು ಹತೋಟಿಗೆ ತರಲು ಆರೋಗ್ಯ ಇಲಾಖೆ ಮತ್ತು ಸಿಬ್ಬಂದಿಗಳು ಶ್ರಮ ವಹಿಸಿ ಕೆಲಸ ಮಾಡುತ್ತಿದ್ದೇವೆ ಎಂದರು.
ದೇಶದಲ್ಲಿ ಶೇ. 20 ರಷ್ಟು ಮಂದಿ ಕ್ಷಯ ರೋಗಿಗಳಾಗುತ್ತಿದ್ದಾರೆ. ಪ್ರತಿದಿನ 570 ಜನ ಕ್ಷಯರೋಗದಿಂದ ಸಾವನ್ನಪ್ಪುತ್ತಿದ್ದಾರೆ. ಹಾಗಾಗಿ ಈ ರೋಗ ತಡೆಗೆ ಐಎಂಎ, ಆಸ್ಪತ್ರೆಗಳು, ವೈದ್ಯರು, ಆರೋಗ್ಯ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ. ಈ ರೋಗಕ್ಕೆ ತುತ್ತಾದವರಿಗೆ ಆದಷ್ಟು ಬೇಗ ಔಷಧಿ ನೀಡಿ ಗುಣಮುಖರನ್ನಾಗಿಸುವ ಕೆಲಸ ಮಾಡಬೇಕಿದೆ ಎಂದರು.
ಜನರಿಗೆ ಕ್ಷಯ ರೋಗದ ಬಗ್ಗೆ ಅರಿವು ಮೂಡಿಸುವುದರಿಂದಲೇ ಒಬ್ಬರಿಂದ ಒಬ್ಬರಿಗೆ ಹರಡುವುದನ್ನು ತಡೆಗಟ್ಟಬಹುದು. ಇದು ಕೇವಲ ಶ್ವಾಸಕೋಶ ಮಾತ್ರವಲ್ಲ, ಕಣ್ಣು, ಕಿವಿ ಸೇರಿದಂತೆ ದೇಹದ ಎಲ್ಲ ಭಾಗಗಳಿಗೂ ಹರಡುತ್ತದೆ. ಆದ್ದರಿಂದ ಸರಿಯಾದ ಚಿಕಿತ್ಸೆ ನೀಡುವುದರಿಂದ ಈ ಕಾಯಿಲೆಯನ್ನು ಗುಣಪಡಿಸಬಹುದಾಗಿದೆ ಎಂದರು.
ಕ್ಷಯ ರೋಗದಿಂದ ಬಳಲುತ್ತಿರುವವರನ್ನು ಪತ್ತೆಹಚ್ಚಿ ಚಿಕಿತ್ಸೆ ನೀಡುವುದು ನಮ್ಮ ಉದ್ದೇಶವಾಗಿದೆ. ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದವರಲ್ಲಿ ಕ್ಷಯ ರೋಗ ಪತ್ತೆ ಮಾಡಿ ಸೂಕ್ತ ಚಿಕಿತ್ಸೆ ಕೊಡುವ ಕೆಲಸವನ್ನು ಆರೋಗ್ಯ ಇಲಾಖೆ ಮಾಡುತ್ತಿದೆ ಎಂದರು.
ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಮೋಹನ್ದಾಸ್ ಆರ್.ಬಿ. ಮಾತನಾಡಿ, ಕ್ಷಯ ರೋಗ ಹೊಸ ಕಾಯಿಲೆಯಲ್ಲ. ಸುಮಾರು ವರ್ಷಗಳಿಂದ ಇರುವ ಹಳೇ ರೋಗ. ಇದಕ್ಕೆ ನಿರ್ಧಿಷ್ಟವಾದ ಚಿಕಿತ್ಸೆ ಇದ್ದರೂ ಸಹ ಇದರಿಂದ ಆಗುವ ಸಾವು-ನೋವನ್ನು ತಡೆಗಟ್ಟುವಲ್ಲಿ ನಾವು ಹಿಂದೆ ಬಿದ್ದಿದ್ದೇವೆ. ಇದಕ್ಕೆ ಜನಸಾಮಾನ್ಯರಲ್ಲಿ ಇರುವ ನಿರ್ಲಕ್ಷ್ಯವೇ ಕಾರಣ ಎಂದರು.
ಈ ಕ್ಷಯ ರೋಗ ಬಂದವರು ನಿರ್ಲಕ್ಷ್ಯ ಮಾಡದೆ ಸಮಯಕ್ಕೆ ಸರಿಯಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಹೋಗಿ ಪರೀಕ್ಷೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದರು ಗುಣಮುಖರಾಗಿ ಈ ರೋಗವನ್ನು ತಡೆಗಟ್ಟಬಹುದು ಎಂದು ಅವರು ಹೇಳಿದರು.
ವಿಶ್ವಸಂಸ್ಥೆಯು ಪ್ರತಿ ವರ್ಷವೂ ಒಂದೊಂದು ಘೋಷವಾಕ್ಯದೊಂದಿಗೆ ವಿಶ್ವ ಕ್ಷಯರೋಗ ದಿನವನ್ನು ಆಚರಿಸಲಾಗುತ್ತಿದೆ. ಅದೇ ರೀತಿ ಈ ವರ್ಷ ಹೌದು..! ಕ್ಷಯ ರೋಗವನ್ನು ಕೊನೆಗೊಳಿಸಬಹುದು ಎಂಬ ಘೋಷ ವಾಕ್ಯದೊಂದಿಗೆ ಆಚರಿಸಲಾಗುತ್ತಿದೆ ಎಂದರು.
2024ನೇ ಸಾಲಿನಲ್ಲಿ ಯು.ಡಿ.ಎಸ್.ಟಿ. ಅಡಿಯಲ್ಲಿ 1890 ಕಫದಲ್ಲಿ ಕ್ಷಯ ರೋಗ ಪತ್ತೆ ಆಗಿರುವ 1780 ಕ್ಷಯ ರೋಗಿಗಳ ಕಫವನ್ನು ಸಿಬಿಬ್ಯಾಟ್ ಹಾಗೂ ಕಲ್ಚರ್ ಮತ್ತು ಸೆನ್ಸಿಟಿವಿಟಿ ಪರೀಕ್ಷೆಗೆ ಒಳಪಡಿಸಲಾಗಿದ್ದು. ಅದರಲ್ಲಿ 86 ರೋಗಿಗಳು ಡಿ.ಆರ್.ಟಿ.ಬಿ ಚಿಕಿತ್ಸೆಯನ್ನು ಪ್ರಾರಂಭಿಸಿದ್ದಾರೆ ಎಂದು ಅವರು ತಿಳಿಸಿದರು.
ನಗರದ ಜಿಲ್ಲಾ ಆಸ್ಪತ್ರೆ ಆವರಣದಿಂದ ಆರಂಭವಾದ ಕ್ಷಯ ರೋಗದ ಅರಿವು ಮೂಡಿಸುವ ಜಾಥಾವು ಅಶೋಕ ರಸ್ತೆ, ಜಿಲ್ಲಾಧಿಕಾರಿಗಳ ಕಚೇರಿ ಮುಖೇನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ತಲುಪಿತು.
ಜಾಥಾದಲ್ಲಿ ಡಿಹೆಚ್ಓ ಡಾ. ಚಂದ್ರಶೇಖರ್ ಬಿ.ಎಂ., ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಅಜ್ಗರ್ ಬೇಗ್, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಮೋಹನ್ದಾಸ್ ಆರ್.ಬಿ., ಐಎಂಎ ಅಧ್ಯಕ್ಷ ಡಾ. ಭೂಷಣ್ ಕೆ.ಪಿ.ಎಸ್., ಪ್ರಧಾನ ಕಾರ್ಯದರ್ಶಿ ಡಾ. ಪ್ರದೀಪ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಲಕ್ಷ್ಮೀಕಾಂತ್, ಗುಬ್ಬಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಬಿಂದುಮಾಧವ್, ಜಿಲ್ಲಾಸ್ಪತ್ರೆಯ ಮಕ್ಕಳ ತಜ್ಞರಾದ ಡಾ. ಲಕ್ಷ್ಮೀಕಾಂತ್, ಆರ್ಸಿಹೆಚ್ ಅಧಿಕಾರಿ ಡಾ. ಮೋಹನ್, ಸೂರ್ಯ ಆಸ್ಪತ್ರೆಯ ಡಾ. ಲಕ್ಷ್ಮೀಕಾಂತ್ ಸೇರಿದಂತೆ ನರ್ಸಿಂಗ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ವರ್ಗ ಪಾಲ್ಗೊಂಡಿದ್ದರು.