ತುಮಕೂರು: ವಿಶೇಷ ಚೇತನರು ಸರ್ಕಾರ ಹಾಗೂ ಸಂಸ್ಥೆಗಳ ಸೌಕರ್ಯಗಳನ್ನು ಬಳಸಿಕೊಂಡು ವಿದ್ಯಾಭ್ಯಾಸದ ಜೊತೆಗೆ ಪೂರಕ ತರಬೇತಿ ಪಡೆದು ದುಡಿಮೆ ಅನುಸರಿಸಿ, ಸ್ವಾವಲಂಬಿಗಳಾಗಿ ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಹೇಳಿದರು.
ನಗರದ ಜಯನಗರದ ಹೆಲನ್ ಕೆಲರ್ ಕಿವುಡ ಮಕ್ಕಳ ಸಂಸ್ಥೆಯ ಶಾಲೆಯಲ್ಲಿ ಚೆಶೈರ್ ಡಿಸೆಬಲಿಟಿ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಎಂಟು ಮಂದಿ ವಿಕಲಚೇತನರಿಗೆ ತಲಾ 1.2 ಲಕ್ಷ ರೂ. ಮೌಲ್ಯದ ಬ್ಯಾಟರಿ ಚಾಲಿತ ತ್ರಿಚಕ್ರ ವಾಹನ ವಿತರಿಸಿ ಮಾತನಾಡಿದ ಶಾಸಕರು, ಈ ಎರಡೂ ಸಂಸ್ಥೆಗಳು ಹಲವಾರು ವರ್ಷಗಳಿಂದ ವಿಶೇಷ ಚೇತನರಿಗೆ ಹಲವು ರೀತಿಯಲ್ಲಿ ಸಹಾಯ ಮಾಡಿಕೊಂಡು ಬರುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರವೂ ವಿಶೇಷ ಚೇತನರಿಗೆ ಚೈತನ್ಯ ತುಂಬುವ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಬಳಸಿಕೊಳ್ಳಬೇಕು ಎಂದರು.
ವಿಶೇಷ ಚೇತನರಿಗೆ ವಿದ್ಯಾಭ್ಯಾಸ ನೀಡುವ ಜೊತೆಗೆ ಅವರ ಜೀವನ ಭದ್ರತೆಗೆ ನೆರವಾಗುವಂತಹ ಉದ್ಯೋಗ ಆಧಾರಿತ ತರಬೇತಿ ನೀಡಿ, ಉದ್ಯೋಗ ಪಡೆಯಲು, ಸ್ವಯಂ ಉದ್ಯೋಗ ಅವಲಂಬಿಸಲು ಸಹಾಯವಾಗುವ ರೀತಿಯ ಚಟುವಟಿಕೆ ನಡೆಸುತ್ತಿರುವ ಸಂಸ್ಥೆಗಳ ಕಾರ್ಯ ಶ್ಲಾಘನೀಯ. ವಿಶೇಷ ಚೇತನರೂ ಸಾಮಾನ್ಯರಂತೆ ದುಡಿಮೆ ಮಾಡಿ ಬದುಕು ಕಟ್ಟಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಶಾಸಕ ಜ್ಯೋತಿಗಣೇಶ್ ಹೇಳಿದರು.
ವಿಶೇಷ ಚೇತನರಿಗೆ ನೆರವಾಗುವ ಕಾರ್ಯಕ್ರಮಗಳಿಗೆ ಶಾಸಕರ ಅನುದಾನವನ್ನು ಹೆಚ್ಚಿನ ಪ್ರಮಾಣದಲ್ಲಿ ನೀಡುವುದಾಗಿ ಹೇಳಿದ ಶಾಸಕರು, ವಿಶೇಷ ಚೇತನರು ಕೀಳರಿಮೆ ಬಿಟ್ಟು ಆತ್ಮವಿಶ್ವಾಸದಿಂದ ಬಾಳಬೇಕು ಅದಕ್ಕಾಗಿ ಸರ್ಕಾರ, ಸಮಾಜ ನಿಮ್ಮ ನೆರವಿಗೆ ಇರುತ್ತದೆ ಎಂದರು.
ಹೆಲನ್ ಕೆಲರ್ ಕಿವುಡ ಮಕ್ಕಳ ಸಂಸ್ಥೆ ಪ್ರಾಂಶುಪಾಲರಾದ ಗಾಯತ್ರಿ ರವೀಶ್ ಮಾತನಾಡಿ, 1997ರಲ್ಲಿ ಆರಂಭವಾದ ಸಂಸ್ಥೆ ಇದೂವರೆಗೂ 2-3 ಸಾವಿರ ವಿಕಲಚೇತನರಿಗೆ ವಿವಿಧ ಕಾರ್ಯಕ್ರಮಗಳ ಮೂಲಕ ನೆರವಾಗಿದೆ. 107 ಮಂದಿ ಕಿವುಡ ಮಕ್ಕಳಿಗೆ ಉನ್ನತ ಶಿಕ್ಷಣ ನೀಡಿ, ಅವರು ವಿವಿಧೆಡೆ ಉದ್ಯೋಗ ಪಡೆದು ಜೀವನ ಕಟ್ಟಿಕೊಳ್ಳಲು ನೆರವಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಚೆಶೈರ್ ಡಿಸೆಬಲಿಟಿ ಟ್ರಸ್ಟ್ ಸಹಯೋಗದಲ್ಲಿ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗುತ್ತಿದೆ ಎಂದರು.
ಚೆಶೈರ್ ಡಿಸೆಬಲಿಟಿ ಟ್ರಸ್ಟ್‍ನ ವ್ಯವಸ್ಥಾಪಕಿ ಅನುರಾಧ ಪಾಟೀಲ್, ಮನೆಯಿಂದ ಹೊರಗೆ ಉದ್ಯೋಗ, ವ್ಯವಹಾರ ಮಾಡುವ ವಿಕಲಚೇತನರು ಹೋಗಿಬರಲು ಅನುಕೂಲ ಆಗಲಿ ಎನ್ನುವ ಕಾರಣಕ್ಕೆ ಇಂದು 8 ಜನರಿಗೆ ಬ್ಯಾಟರಿ ಚಾಲಿತ ತ್ರಿಚಕ್ರ ವಾಹನ ನೀಡಲಾಗಿದೆ. ಇಂತಹ ವಾಹನಗಳನ್ನು ಬಳಸಿಕೊಂಡು ಹಲವರು ಫುಡ್ ಡೆಲಿವರಿಯಂತಹ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನೂ ಅನೇಕ ಕಡೆ ಉದ್ಯೋಗ ಮಾಡುತ್ತಿದ್ದಾರೆ ಎಂದರು.
ಹೆಲನ್ ಕೆಲರ್ ಸಂಸ್ಥೆ ಕಾರ್ಯದರ್ಶಿ ಹೆಚ್.ಎಂ.ರವೀಶಯ್ಯ ಮಾತನಾಡಿ, 28 ವರ್ಷಗಳಿಂದ ಸಾವಿರಾರು ವಿಕಲಚೇತನರಿಗೆ ಚೈತನ್ಯ ತುಂಬುವ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿರುವ ಈ ಸಂಸ್ಥೆಗೆ ಮಾಜಿ ಸಂಸದ ಜಿ.ಎಸ್.ಬಸವರಾಜು, ಶಾಸಕ ಜ್ಯೋತಿಗಣೇಶ್ ಅವರು ಹಲವು ರೀತಿಯಲ್ಲಿ ಸಹಕಾರ ನೀಡಿ ಸಂಸ್ಥೆ ಬೆಳವಣಿಗೆಗೆ ಕಾರಣರಾಗಿದ್ದಾರೆ. ಶಾಸಕರು ತಮ್ಮ ಅನುದಾನದಲ್ಲಿ ವಿಶೇಷ ಚೇತನರಿಗೆ ಸಾಧನಾ ಸಲಕರಣೆ ವಿತರಣೆಯ ಕಾರ್ಯಕ್ರಮ ಆಯೋಜಿಸಿ ನೆರವಾಗಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಅಂಗವಿಕಲ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಚಿದಾನಂದ್, ನಗರ ಪಾಲಿಕೆ ಮಾಜಿ ಸದಸ್ಯ ಸಿ.ಎನ್.ರಮೇಶ್, ಮುಖಂಡರಾದ ಹನುಮಂತಪ್ಪ, ಪ್ರಕಾಶ್ ಮೊದಲಾದವರು ಭಾಗವಹಿಸಿದ್ದರು.