ತುಮಕೂರು: ಕೇಂದ್ರ ಸರ್ಕಾರ ಎಲ್ಪಿಜಿ ಅನಿಲ ದರವನ್ನು ಏಕಾಏಕಿ 50 ರೂ. ಹೆಚ್ಚಳ ಮಾಡಿ 43000 ಕೋಟಿ ರೂ. ಹಣ ವಸೂಲಿ ಮಾಡಲು ಮುಂದಾಗಿದೆ. ಇದು ಜನಸಾಮಾನ್ಯರಿಗೆ ಮಾಡಿದ ದ್ರೋಹ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಟಿ.ಶ್ರೀನಿವಾಸ್ ಆರೋಪಿಸಿದ್ದಾರೆ.
ಈ ಸಂಬಂಧ ಹೇಳಿಕೆ ನೀಡಿರುವ ಅವರು, ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿ ಕಡುಬಡವರನ್ನೂ ಬಿಡದೆ ಲೂಟಿ ಮಾಡುವುದು ಯಾವ ನ್ಯಾಯ? ಎಂದು ಕೇಳಿದ್ದಾರೆ.
ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್ ಶಾಸಕರು ಮತ್ತೆ ಬೀದಿಗಿಳಿದು ಜನಸಾಮಾನ್ಯರ ಪರ ಹೋರಾಟ ಮಾಡುತ್ತಾರೋ ಅಥವಾ ತಮ್ಮನ್ನು ಆಯ್ಕೆ ಮಾಡಿದ ಜನರಿಗೆ ವಿಶ್ವಾಸ ದ್ರೋಹ ಮಾಡುತ್ತಾರೋ ಎಂಬ ಪ್ರಶ್ನೆ ಮಾಡುವುದು ಸೂಕ್ತ. ಅವರಿಗೆ ಜನಪರ ಕಾಳಜಿ ಇದ್ದಲ್ಲಿ ಈ ಎರಡೂ ಪಕ್ಷದವರು ಕೇಂದ್ರ ಸರ್ಕಾರದ ವಿರುದ್ಧ ಕನಿಷ್ಟ ಒಂದು ದಿನವಾದರೂ ಸಾಂಕೇತಿಕ ಪ್ರತಿಭಟನೆ ಮಾಡಿ ತೋರಿಸಲಿ ಎಂದು ಎಸ್.ಟಿ.ಶ್ರೀನಿವಾಸ್ ಸವಾಲು ಹಾಕಿದ್ದಾರೆ.