ತುಮಕೂರು:ವಿವಿಧೆತೆಯಲ್ಲಿ ಏಕತೆಯನ್ನು ಹೊಂದಿರುವ ಭಾರತಕ್ಕೆ ಸಮಾನತೆ, ಸ್ವಾತಂತ್ರ ಮತ್ತು ಭಾತೃತ್ವವೆಂಬ ಮೂರು ತತ್ವಗಳನ್ನು ಒಳಗೊಂಡ ಸಂವಿಧಾನವನ್ನು ಬಾಬಾ ಸಾಹೇಬ್ ಅಂಬೇಡ್ಡಕರ್ ನೀಡಿದ್ದು, ಇದಕ್ಕೆ ಧಕ್ಕೆ ತರುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ಎಸ್.ಟಿ.ಶ್ರೀನಿವಾಸ್ ದೂರಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಡಿಸಿಸಿ ಅಧ್ಯಕ್ಷ ಚಂದ್ರಶೇಖರಗೌಡ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ಅವರು 135ನೇ ಜನ್ಮ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು,ಜಾತಿ,ಧರ್ಮ, ಭಾಷೆಯ ಹೆಸರಿನಲ್ಲಿ ಜನರ ನಡುವೆ ಕಂದಕವನ್ನುಂಟು ಮಾಡಿ, ಇಡೀ ದೇಶದ ಶಾಂತಿಯನ್ನೇ ಕದಡುವ ಕೆಲಸ ಮಾಡುತ್ತಿದೆ. ಇದರ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಧ್ವನಿ ಎತ್ತಬೇಕಾಗಿದೆ ಎಂದರು.

ರಾಜ್ಯದಲ್ಲಿ ಹಾಲಿನ ದರ,ಇಂಧನಗಳ ಮೇಲಿನ ಸೆಸ್ ಹೆಚ್ಚಳವನ್ನೇ ದೊಡ್ಡದು ಮಾಡಿ ಬಿಜೆಪಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಸುತ್ತಿದೆ.ಆದರೆ ಕೇಂದ್ರ ಸರಕಾರ ಗ್ಯಾಸ್ ದರ ಹೆಚ್ಚಳ,ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣ, ಇಂಧನ ಬೆಲೆ ಹೆಚ್ಚಳದ ವಿರುದ್ದ ಕಾಂಗ್ರೆಸ್ ಕಾರ್ಯಕರ್ತರು ಸಹ ಹೋರಾಟ ನಡೆಸುವ ಬೆಲೆ ಹೆಚ್ಚಳದ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟವರಿಗೆ ತಿರುಗೇಟು ನೀಡುವ ಕೆಲಸ ಆಗಬೇಕಾಗಿದೆ. ಶೋಷಿತರ ಪರವಾಗಿ ಧ್ವನಿ ಎತ್ತ ಬೇಕಾಗಿದೆ. ತುಮಕೂರು ನಗರದಲ್ಲಿ ಡಾ.ಜಿ.ಪರಮೇಶ್ವರ ಅವರು ತಮ್ಮ ಸ್ವಂತ ಹಣದಲ್ಲಿ ಬಾಬಾ ಸಾಹೇಬರ ಮೂರ್ತಿ ಪ್ರತಿಷ್ಠಾಪಿಸುತಿದ್ದು, ಈ ಕಾರ್ಯಕ್ರಮದಲ್ಲಿ ನಾವೆಲ್ಲರೂ ಪಾಲ್ಗೊಂಡು, ಅವರ ಕೈ ಬಲಪಡಿಸುವ ಕೆಲಸ ಮಾಡಬೇಕಾಗಿದೆ ಎಂದು ಎಸ್.ಟಿ.ಶ್ರೀನಿವಾಸ್ ನುಡಿದರು.
ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಹೆಚ್.ಕೆಂಚಮಾರಯ್ಯ ಮಾತನಾಡಿ,ವಿಶ್ವಸಂಸ್ಥೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜನ್ಮ ದಿನವನ್ನು ಜ್ಞಾನದ ದಿನವನ್ನಾಗಿ ಆಚರಿಸುತ್ತಿದೆ.ಆದರೆ ಬಿಜೆಪಿ ಕ್ಷುಲ್ಲಕ ರಾಜಕಾರಣಕ್ಕೆ ಅಂಬೇಡ್ಕರ್ ಹೆಸರು ಎಳೆದು ತರುವ ಮೂಲಕ ಅವರ ಹೆಸರಿಗೆ ಮಸಿ ಬಳಿಯಲು ಹೊರಟಿದೆ. ಪ್ರತಿಮೆಗಳ ಸ್ಥಾಪನೆ ಒಂದು ಒಳ್ಳೆಯ ಕೆಲಸವಾದರೂ, ಅದಕ್ಕಿಂತ ತತ್ವ ಸಿದ್ದಾಂತಗಳು, ವಿಚಾರಧಾರೆಗಳನ್ನು ಜನರ ನಡುವೆ ತೆಗೆದುಕೊಂಡು ಹೋಗಿ, ಬಹುತ್ವದ ಭಾರತದ ಬಗ್ಗೆ ಅಂಬೇಡ್ಕರ್ ಅವರಿಗಿದ್ದ ಪರಿಕಲ್ಪನೆಯನ್ನು ತಿಳಿಸುವ ಮೂಲಕ ಜನರನ್ನು ಎಚ್ಚರಗೊಳಿಸುವ ಕೆಲಸ ಆಗಬೇಕಿದೆ. ಬಾಬಾ ಸಾಹೇಬರು ತಮ್ಮ ಹೋರಾಟಗಳ ಮೂಲಕ ಇಡೀ ಶೋಷಿತ ಸಮುದಾಯಕ್ಕೆ ಧ್ವನಿಯಾದರೆ, ಸಂವಿಧಾನದ ಮೂಲಕ ಭಾರತದ ಎಲ್ಲಾ ವರ್ಗಗಳಿಗೂ ದ್ವನಿ ನೀಡಿದ್ದಾರೆ.ರಾಹುಲ್ ಗಾಂಧಿ ಅವರು ಹೇಳಿದಂತೆ ಕಾಂಗ್ರೆಸ್ ಪಕ್ಷದ ಒಳಗಿರುವ ಆರ್.ಎಸ್.ಎಸ್. ಪರಿಚಾರಕರನ್ನು ತುಮಕೂರು ಜಿಲ್ಲೆಯೂ ಸೇರಿದಂತೆ ದೇಶದಾದ್ಯಂತ ಪಕ್ಷದಿಂದ ಹೊರ ಹಾಕಬೇಕಾಗಿದೆ ಎಂದರು.
ಮಹಿಳಾ ಘಟಕದ ಅಧ್ಯಕ್ಷೆ ಗೀತಾ ರಾಜಣ್ಣ ಮಾತನಾಡಿ,ಭಾರತದ ಸಂವಿಧಾನದ ಮೂಲಕ ಭಾರತದ ಎಲ್ಲಾ ಜನವರ್ಗಗಳಿಗೂ ಬದುಕು ನೀಡಿದ ಬಾಬಾ ಸಾಹೇಬರು ಈ ದೇಶದಿಂದ ಅಸ್ಪøಷ್ಯತೆ ಕೊನೆಯಾಗಬೇಕು ಎಂಬ ಕನಸು ಕಂಡಿದ್ದರು.ಅದರೆ ಇದುವರೆಗೂ ಅದು ಈಡೇರಿಲ್ಲ. ಇದರ ವಿರುದ್ದ ನಾವುಗಳು ಧ್ವನಿ ಎತ್ತಬೇಕಾಗಿದೆ. ಅದರಲ್ಲಿ ವಿಶೇಷವಾಗಿ ಮಹಿಳೆಯರು ಇದರ ವಿರುದ್ದ ಹೋರಾಟ ರೂಪಿಸ ಬೇಕಾಗಿದೆ. ಕಾಂಗ್ರೆಸ್ ವಿರುದ್ದ ಬಿಜೆಪಿ ನಡೆಸುತ್ತಿರುವ ಅಪಪ್ರಚಾರಗಳಿಗೆ ತಿರುಗೇಟು ನೀಡುವ ಕೆಲಸ ಆಗಬೇಕೆಂದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಅಹಮದ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಒಂದು ಸಮುದಾಯವನ್ನು ಗುರಿಯಾಗಿಟ್ಟುಕೊಂಡು, ಒಡೆದು ಆಳುವ ನೀತಿಯನ್ನು ಬಿಜೆಪಿ ಅನುಸರಿಸುತ್ತಿದೆ. ಮಾರಲ್ ಪೊಲೀಸ್ ಹೆಸರಿನಲ್ಲಿ ಜನರ ನಡುವೆ ಉಂಟಾಗಿದ್ದ ಕಂದಕವನ್ನು ಮತ್ತಷ್ಟು ವಿಸ್ತರಿಸುವ ಕೆಲಸ ಮಾಡುತ್ತಿದೆ. ಇದು ಸಂವಿಧಾನ ವಿರೋಧಿಯಾಗಿದ್ದು, ಬಾಬಾ ಸಾಹೇಬರ ಹೆಸರಿಗೆ ಮಸಿ ಬಳಿಯುವ ಕೆಲಸವಾಗಿದೆ. ಸಂವಿಧಾನದ ಮೇಲಿನ ಪರೋಕ್ಷ ದಾಳಿಯಾಗಿದೆ. ದೇಶದಲ್ಲಿ ಶಾಂತಿ ನೆಲಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ್ದ ಜಿಲ್ಲಾಕಾಂಗ್ರೆಸ್ಅಧ್ಯಕ್ಷಚಂದ್ರಶೇಖರ್ಗೌಡ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಡಾ..ಎಸ್.ಷಪಿ ಅಹಮದ್,ರೇವಣ್ಣಸಿದ್ದಯ್ಯ, ಬಿ.ಜಿ.ಲಿಂಗರಾಜು, ಆರ್.ರಾಮಕೃಷ್ಣಪ್ಪ, ನಟರಾಜಶೆಟ್ಟಿ ಅವರುಗಳು ಮಾತನಾಡಿದರು.ಮುಖಂಡರಾದ ಮಾಜಿ ಎಂ.ಎಲ್.ಸಿ ವೇಣುಗೋಪಾಲ್, ನಾರಾಯಣ ಮೂರ್ತಿ,ವಾಲೆಚಂದ್ರಯ್ಯ,ಜಯಮೂರ್ತಿ,ನರಸೀಯಪ್ಪ, ಉಪಾಧ್ಯಕ್ಷರಾದ ವೀರೇಶಕುಮಾರ್ ಹಾಲೆನೂರು,ಷಣ್ಮುಖಪ್ಪ, ಹೆಚ್.ಸಿ.ಹನುಮಂತಯ್ಯ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಮಹೇಶ್, ಫಯಾಜ್, ಪಾಲಿಕೆ ಮಾಜಿ ಸದಸ್ಯರಾದ ನಯಾಜ್,ನಾಗಮಣಿ, ಸುಜಾತ, ಸಿಮೆಂಟ್ ಮಂಜಣ್ಣ, ಅನಿಲ್ಕುಮಾರ್, ಕೆಂಪರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.
.