ತುಮಕೂರು- ಡೀಸೆಲ್ ಮೇಲಿನ ಸೆಸ್ ಕಡಿತ, ಅಂತಾರಾಜ್ಯ ಆರ್.ಟಿ.ಓ. ಚೆಕ್ ಪೆÇೀಸ್ಟ್ ರದ್ದು, ರಾಜ್ಯ ಹೆದ್ದಾರಿಗಳಲ್ಲಿನ ಟೋಲ್ ಪ್ಲಾಜ್ ಮುಚ್ಚುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಲಾರಿ ಮಾಲೀಕರು ಲಾರಿಗಳನ್ನು ರಸ್ತೆಗಿಳಿಸದೆ ಇಂದಿನಿಂದ ಮುಷ್ಕರ ಆರಂಭಿಸಿದ್ದು, ಸರಕು ಸಾಗಣೆ ವಾಹನಗಳ ಸಂಚಾರ ಸ್ಥಬ್ದವಾಗಿದೆ.
ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಡೀಸೆಲ್ ಬೆಲೆ ಇಳಿಕೆ ಮಾಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಲಾರಿ ಮಾಲೀಕರು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಮುಷ್ಕರ ಕೈಗೊಂಡಿದ್ದಾರೆ.
ಲಾರಿ ಮಾಲೀಕರ ಮುಷ್ಕರದಿಂದಾಗಿ ಲಾರಿಗಳು, ಸರಕು ಸಾಗಣೆ ವಾಹನಗಳು ರಸ್ತೆಗಿಳಿಯದೆ ನಗರದ ರಿಂಗ್ ರಸ್ತೆಯಲ್ಲಿರುವ ಲಾರಿ ನಿಲ್ದಾಣ ಸೇರಿದಂತೆ ರಸ್ತೆ ಬದಿಗಳಲ್ಲಿ ಸಂಚಾರ ಸ್ಥಗಿತಗೊಳಿಸಿ ಸಾಲು ಸಾಲಾಗಿ ನಿಂತಿವೆ.
ಲಾರಿ ಮಾಲೀಕರು ಮುಷ್ಕರ ಕೈಗೊಂಡಿರುವುದರಿಂದ ನಗರ ಸೇರಿದಂತೆ ಹೊರ ಭಾಗದ ಯಾವುದೇ ರಸ್ತೆಗಳಲ್ಲಿ ಲಾರಿ ಸಂಚಾರ ಕಂಡು ಬರುತ್ತಿಲ್ಲ. ಬದಲಾಗಿ ಲಾರಿಗಳು ಅಲ್ಲಲ್ಲೆ ಸಂಚಾರ ಸ್ಥಗಿತಗೊಳಿಸಿ ನಿಂತಿರುವ ದೃಶ್ಯಗಳು ಕಂಡು ಬರುತ್ತಿವೆ.
ಲಾರಿ ಮಾಲೀಕರು ಮುಷ್ಕರ ನಡೆಸುತ್ತಿರುವುದರಿಂದ ಈಗಾಗಲೇ ರಾಜ್ಯ ಸರ್ಕಾರ ನೀಡಿರುವ ಬೆಲೆ ಏರಿಕೆ ಜತೆಗೆ ಮತ್ತಷ್ಟು ಬೆಲೆ ಏರಿಕೆಯನ್ನು ಜನಸಾಮಾನ್ಯರು ಹೊರ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೂಡಲೇ ರಾಜ್ಯ ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಬೇಕು, ಇಲ್ಲದಿದ್ದರೆ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಲಾರಿ ಮಾಲೀಕರ ಸಂಘ ಎಚ್ಚರಿಕೆ ನೀಡಿದೆ.