ತುಮಕೂರು: ನಾವು ಮಾಡುವ ಕೆಲಸ ನಿಖರವಾಗಿದ್ದರೆ ಎಲ್ಲವೂ ಸಾಧ್ಯವಾಗುತ್ತದೆ. ನಿರ್ದಿಷ್ಟ ಗುರಿಗಳನ್ನು ಇಟ್ಟುಕೊಂಡು ಕೆಲಸ ಮಾಡಿ ಎಂದು ರಾಮಕೃಷ್ಣಾಶ್ರಮದ ಜಪಾನಂದ ಸ್ವಾಮೀಜಿಗಳು ಕರೆ ನೀಡಿದರು.
ಶ್ರೀ ರಾಮಕೃಷ್ಣ ಸೇವಾಶ್ರಮ ಪಾವಗಡ, ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಸಮಿತಿ, ಮತ್ತು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ತುಮಕೂರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿನಿಯರಿಗೆ ಮಧ್ಯಾಹ್ನದ ಭೋಜನದ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಶ್ರೀಗಳು ಆಶೀರ್ವಚನ ನೀಡಿ ಅವರು ಮಾತನಾಡಿದರು.
ಈಗಾಗಲೇ ತುಮಕೂರು ವಿಶ್ವವಿದ್ಯಾಲಯ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಭೋಜನವನ್ನು ವಿತರಿಸಲಾಗುತ್ತಿದ್ದು, ಇಲ್ಲಿಯವರೆಗೂ ಎರಡು ಲಕ್ಷದ 65,000 ಜನ ಊಟವನ್ನು ಮಾಡಿದ್ದಾರೆ. ನಾವು ಮಾಡುತ್ತಿರುವ ಈ ಸಣ್ಣ ಸೇವಾ ಕಾರ್ಯಕ್ಕೆ ನನ್ನೊಡನೆ ಕೆಲವು ನಿಸ್ವಾರ್ಥ ಜೀವಿಗಳು ಬೆಂಬಲ ನೀಡಿದ್ದಾರೆ. ಈ ಕಾರ್ಯದಿಂದ ಅದೆಷ್ಟು ವಿದ್ಯಾರ್ಥಿಗಳು ಹೊಟ್ಟೆ ತುಂಬಾ ಊಟ ಮಾಡಿ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ. ಯಾರು ಇತರರಿಗಾಗಿ ಬದುಕುತ್ತಾರೋ ಅವರ ಬದುಕು ನಿಜವಾದ ಬದುಕು ಎಂದು ನುಡಿದರು.
ವಿದ್ಯಾರ್ಥಿಗಳು ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ. ಪ್ರಪಂಚದಲ್ಲಿ ಹಣದಿಂದ ದೇಶವನ್ನು ಕಟ್ಟುವುದಕ್ಕೆ ಆಗಲ್ಲ, ಕೇವಲ ಗುಣದಿಂದ ಮಾತ್ರ ದೇಶವನ್ನ ಕಟ್ಟುವುದಕ್ಕೆ ಸಾಧ್ಯ. ಅನ್ನ ದೇವರ ಮುಂದೆ ಇನ್ನದೇವರ ಇಲ್ಲ ಎಂದು ತಿಳಿದು ಈ ಸೇವಾ ಕಾರ್ಯದಲ್ಲಿ ತೊಡಗಿದ್ದೇವೆ. ತುಮಕೂರು ಜಿಲ್ಲೆಯ ಹಸಿವಿಗೆ ಸಿದ್ದಗಂಗಾ ಶ್ರೀಗಳು ಹಾಕಿಕೊಟ್ಟಂತ ಮಾರ್ಗದಲ್ಲಿ ಇಂದು ನಾವು ಸುಮಾರು 2000 ಮಕ್ಕಳಿಗೆ ಪ್ರತಿದಿನ ಊಟವನ್ನು ನೀಡುತ್ತಿದ್ದೇವೆ. ಯಾವುದೇ ಜಾಹೀರಾತು ಇಲ್ಲದೆ ಕೇವಲ ಇದು ಸೇವೆಗೋಸ್ಕರ.
ಮೇರಾ ಭಾರತ್ ಮಹಾನ್ ಎಂದು ಹೇಳುತ್ತೇವೆ. ಆದರೆ, ನಮ್ಮ ದೇಶದಲ್ಲಿ ಸರ್ಕಾರಿ ಶಾಲೆ ಮಕ್ಕಳಿಗೆ ಸರಿಯಾಗಿ ಅಭ್ಯಾಸ ಮಾಡಲು ಕೊಠಡಿಗಳು, ತರಗತಿಗಳು ಇಲ್ಲ. ನಿಮ್ಮಿಂದ ಎಷ್ಟು ಸಹಾಯ ಮಾಡುವುದಕ್ಕ ಸಾಧ್ಯವಾಗುತ್ತದೆ ಅಷ್ಟು ಮಾಡಿದರೆ ಸಾಕು, ಅದೇ ಬದಲಾವಣೆ ಮಾರ್ಗ. ಬಾಯಿಯಲ್ಲಿ ಸ್ಮಾರ್ಟ್ ಆಗಿದ್ದರೆ ಸಾಲುವುದಿಲ್ಲ. ಮನಸ್ಸಿನಲ್ಲಿ ಸ್ಮಾರ್ಟ್ ಆಗಬೇಕು. ಅಂದಾಗ ಮಾತ್ರ ಎಲ್ಲವೂ ಸಾಧ್ಯ. ಕಾಲೇಜಿನಲ್ಲಿ ಸುಮಾರು 15 ವರ್ಷಗಳ ಹಳೆಯ ಕಂಪ್ಯೂಟರ್ ಗಳಿವೆ. ಯಾವೂ ಕೂಡ ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ನಮ್ಮ ವಿದ್ಯಾರ್ಥಿಗಳು ಸರಿಯಾಗಿ ಶಿಕ್ಷಣವನ್ನು ಪಡೆದುಕೊಳ್ಳಲು ಆಗುತ್ತಿಲ್ಲ ಎಂದು ಕಾಲೇಜಿನ ದುಸ್ಥಿತಿಗಳನ್ನು ನೋಡಿ ಬೇಸರ ವ್ಯಕ್ತಪಡಿಸಿದ್ದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನ್ಯಾ.ನೂರ್ ಉನ್ನೀಸ್ ಮಾತನಾಡಿ ಉನ್ನತ ಅಧಿಕಾರದ ಹುದ್ದೆ ಒದಗಿ ಬಂದಾಗ ಸಹಜವಾಗಿ ಸ್ವಾರ್ಥ ಗುಣಗಳು ಮೂಡುತ್ತವೆ. ಮಾನವೀಯ ಸ್ವರೂಪ, ಮೌಲ್ಯಗಳು ಬೆಳೆದಾಗ ಸಮಾಜ ಸೇವೆಯ ಮಾಡುವ ಮನೋಭಾವಗಳು ಮೂಡುತ್ತವೆ. ಸಮಾಜದಿಂದ ನಾವು ಏನೆಲ್ಲಾ ಪಡೆದಿರುತ್ತೇವೆ. ಅದೆ ತರಹ ಸಮಾಜದ ಋಣವನ್ನ ತೀರಿಸುವುದು ಪ್ರತಿಯೊಬ್ಬರ ಕೆಲಸ. ದಾಸೋಹಕ್ಕೆ ಸರ್ಕಾರಕ್ಕೆ ಮನವಿ ಮಾಡಿದರೆ ವರ್ಷಗಳು ಕಾಯಬೇಕಿತ್ತು. ಆದರೆ ಎಲ್ಲರ ಸಹಕಾರದಿಂದ ಇಂದು ಉಚಿತವಾಗಿ ಸೇವಾ ಮನೋಭಾವದಿಂದ ವಿದ್ಯಾರ್ಥಿಗಳಿಗೆ ಊಟದ ವ್ಯವಸ್ಥೆಯನ್ನು ಮಾಡಿರುವುದು ನಿಜಕ್ಕೂ ಅಭಿನಂದನೀಯ ಎಂದು ಹೇಳಿದರು.
ಯಾರಿಗೂ ಕೂಡ ತೊಂದರೆ ಮಾಡಬಾರದು. ನಿಮಗಾಗಿ ನೀವು ಸೋಲಬೇಡಿ. ಹಸಿದವನಿಗೆ ಒಂದು ಹಿಡಿ ಅನ್ನ ನೀಡುವ ದಾನಿಗಳಾಗಿ ಎಂದರು.
ತುಮಕೂರು ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಪ್ರೊ.ವೆಂಕಟೇಶ್ವರಲು ಮಾತನಾಡಿ, ಊಟ ಅಲ್ಲ ಪ್ರಸಾದ
ನಮ್ಮ ವಿವಿ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಈ ಅನ್ನದ ಸೇವೆ ತುಂಬಾ ಸಹಕಾರಿಯಾಗಿದೆ. ಆಗುಗೆಯನ್ನು ಶ್ರೀ ಶಿರಡಿ ಸಾಯಿಬಾಬಾರ ಮಂದಿರದಲ್ಲಿ ತಯಾರಿಸಲಾಗುತ್ತದೆ. ಹಾಗಾಗಿ ಇದು ಕೇವಲ ಊಟವಲ್ಲ ಪ್ರಸಾದ ಎಂದು ನಾನು ಭಾವಿಸುತ್ತೇನೆ. ಕಾಲೇಜಿನ ದುಸ್ಥಿತಿ ಕುರಿತು ಸ್ವಾಮೀಜಿ ಅವರ ಆಕ್ರೋಶ ಮುಂದೊಂದು ದಿನ ಫಲ ನೀಡುತ್ತದೆ. ಮುಂದಿನ ಏಪ್ರಿಲ್ 16 ಗೋಲ್ಡನ್ ಡೇ ಇದು ನಿಶ್ಚಿತ. ನಾಲ್ಕು ಜನರ ನೇತೃತ್ವದಲ್ಲಿ ಈ ಸೇವಾ ಕಾರ್ಯ ನಡಿತಾ ಇದ್ದು ಇದರ ನಂತರ ನಾಗಣ್ಣ ಅವರ ಪ್ರಸ್ತಾಪದಂತೆ ಇಂದು ಸರಕಾರಿ ಮಹಿಳಾ ಕಾಲೇಜಿನಲ್ಲಿ ಸೇವೆ ಮಾಡಲಾಗಿದೆ. ಇಂತಹ ಸೇವಾ ಮನೋಭಾವ ನಿಜಕ್ಕೂ ಶ್ಲಾಘನೀಯ ಎಂದರು.
ಪ್ರಜಾ ಪ್ರಗತಿ ಸಂಪಾದಕರಾದ ಎಸ್ ನಾಗಣ್ಣ ಮಾತನಾಡಿದರು.
ಈ ವೇಳೆ ಶ್ರೀ ಶಿರಡಿ ಸಾಯಿ ಬಾಬ ಟ್ರಸ್ಟ್ ಅಧ್ಯಕ್ಷ ನಟರಾಜ ಶೆಟ್ಟಿ ಬಿ.ಆರ್, ಶ್ರೀ ರಾಮಕೃಷ್ಣ ಸೇವಾಶ್ರಮದ ಸಂಯೋಜಕರುಗಳಾದ ಎಂ.ಎಸ್. ನಾಗರಾಜು, ವೀರೇಶ್, ನಿವೃತ್ತ ಪ್ರಾಂಶುಪಾಲರಾದ ಪ್ರೊ.ಸಿದ್ದಪ್ಪ, ಕಾಲೇಜಿನ ಪ್ರಾಂಶುಪಾಲರು ಸೇರಿದಂತೆ ಬೋಧಕ ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.