ತುಮಕೂರು : ನಗರದಲ್ಲಿ ಅನಧಿಕೃತವಾಗಿ ಓಡಿಸುತ್ತಿರುವ ಬೈಕ್ ಟ್ಯಾಕ್ಸಿಗಳ ವಿರುದ್ಧ ಕಾನೂನು ರೀತ್ಯಾ ಕ್ರಮ ತೆಗೆದುಕೊಳ್ಳಬೇಕು, ಹೊಸದಾಗಿ ಆಟೋ ಪರವಾನಗಿ ತಡೆಹಿಡಿಯಬೇಕು ಎಂದು ಒತ್ತಾಯಿಸಿ ಜಿಲ್ಲಾ ಆಟೋ ಚಾಲಕ, ಮಾಲೀಕರ ಸಂಘಗಳ ಒಕ್ಕೂಟ ಹಾಗೂ ಕರ್ನಾಟಕ ಆಟೋ ಚಾಲಕರ ಕಲ್ಯಾಣ ಜಂಟಿಕ್ರಿಯಾ ಸಮಿತಿ ನೇತೃತ್ವದಲ್ಲಿ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ತುಮಕೂರು ಮಹಾನಗರ ಪಾಲಿಕೆ ಆವರಣದ ಡಾ.ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಆಟೋ ಚಾಲಕರು, ಮಾಲೀಕರು ಹೋರಾಟ ಆರಂಭಿಸಿದರು. ತಮ್ಮ ಆಟೋಗಳನ್ನು ನಗರಪಾಲಿಕೆ ಆವರಣದಲ್ಲಿ ನಿಲ್ಲಿಸಿ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆಯಲ್ಲಿ ತೆರಳಿ, ಅಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆಟೋ ಚಾಲಕ, ಮಾಲೀಕರ ಸಂಘಗಳ ಒಕ್ಕೂಟದ ಅಧ್ಯಕ್ಷ ವಿ.ಪ್ರತಾಪ್ ಮದಕರಿ, ನಗರದಲ್ಲಿ ನಗರ ಸಾರಿಗೆ ಸೇವೆ ಆರಂಭವಾದಾಗಿನಿಂದ ಆಟೋಗಳ ವ್ಯವಹಾರ ಕುಸಿತಗೊಂಡು ಆಟೋ ಚಾಲಕರು ತಮ್ಮ ಕುಟುಂಬ ನಿರ್ವಹಣೆ ಮಾಡಲಾಗದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ನಗರದಲ್ಲಿ ದಿನೇದಿನೆ ಆಟೋಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ನಮ್ಮಲ್ಲೇ ಬದುಕಿಗಾಗಿ ಪೈಪೋಟಿ ಶುರುವಾಗಿದೆ. ಈ ಪರಿಸ್ಥಿತಿಯಲ್ಲಿ ಹೊಸದಾಗಿ ಆಟೋ ಪರವಾನಗಿ ನೀಡಬಾರದು ಎಂದು ಮನವಿ ಮಾಡಿದರು.
ಸ್ಮಾರ್ಟ್ ಸಿಟಿ ಕಾಮಗಾರಿಗಾಗಿ ನಗರದ ಸುಮಾರು 150ಕ್ಕೂ ಹೆಚ್ಚು ಆಟೋ ನಿಲ್ದಾಣಗಳನ್ನು ಕಿತ್ತುಹಾಕಿ ಆಟೋಗಳಿಗೆ ನೆಲೆ ಇಲ್ಲದಂತೆ ಮಾಡಲಾಗಿದೆ. ಈ ನಿಲ್ದಾಣಗಳನ್ನು ಪುನರ್ ನಿರ್ಮಾಣ ಮಾಡಬೇಕು. ಈ ಎಲ್ಲಾ ಸಮಸ್ಯೆಗಳ ಜೊತೆಗೆ ಇತ್ತೀಚೆಗೆ ನಗರದಲ್ಲಿ ಬೈಕ್ ಟ್ಯಾಕ್ಸಿಗಳು ಆರಂಭವಾಗಿ ಆಟೋ ಚಾಲಕರ ವ್ಯವಹಾರ ಮತ್ತಷ್ಟು ಮಾರಕವಾಗಿದೆ. ಬೈಕ್ ಟ್ಯಾಕ್ಸಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಆಟೋ ಚಾಲಕರ ರಕ್ಷಣೆಯನ್ನು ಜಿಲ್ಲಾಡಳಿತ ಹಾಗೂ ಸರ್ಕಾರ ಮಾಡಬೇಕಾಗಿದೆ. ಮಾನವೀಯ ದೃಷ್ಟಿಯಿಂದ ಆಟೋ ಚಾಲಕರಿಗೆ ಸರ್ಕಾರ ನೆರವಾಗಬೇಕು. ಅಸಂಘಟಿತ ಕಾರ್ಮಿಕರಿಗೆ ಸಿಗುವ ಸೌಲಭ್ಯಗಳನ್ನು ಕಾರ್ಮಿಕ ಇಲಾಖೆ ಆಟೋ ಚಾಲಕರಿಗೂ ನೀಡಬೇಕು ಎಂದು ಒತ್ತಾಯಿಸಿದರು.
ನಂತರ ಜಿಲ್ಲಾಧಿಕಾರಿಗಳಿಗೆ ಮನವಿಪತ್ರ ಸಲ್ಲಿಸಿ ತಮ್ಮ ಬೇಡಿಕೆ ಈಡೇರಿಸಿ ಸಮಸ್ಯೆ ನಿವಾರಣೆ ಮಾಡಬೇಕು ಎಂದು ಕೋರಿದರು. ಈ ವೇಳೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಆಟೋ ಸಂಘಟನೆಯ ಪ್ರಮುಖರ ಸಭೆ ನಡೆಸಿ, ಸಂಬAಧಿಸಿದ ಅಧಿಕಾರಿಗಳೊಂದಿಗೆ ಚರ್ಚೆ ಮಾಡಿ ಅತಿ ಶೀಘ್ರವಾಗಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಆಟೋ ಸಂಘಟನೆಯ ಮುಖಂಡರಾದ ಕುಮಾರಸ್ವಾಮಿ, ಇಂತಿಯಾಜ್, ರಾಮಸ್ವಾಮಿಗೌಡ, ಹನುಮಂತಪುರ ಬಾಬು, ಗಡ್ಡ ಮಂಜು, ಉಪ್ಪಾರಹಳ್ಳಿ ಮಂಜುನಾಥ್, ನವೀನ್‌ಕುಮಾರ್, ಕೋರಾಕುಮಾರ್, ನಾಗರಾಜು, ಶಮೀಉಲ್ಲಾ, ರಮೇಶ್, ಫೈರೋಜ್, ತಿಪ್ಪೇಸ್ವಾಮಿ, ಜಾವಿದ್, ಗೋಪಾಲ್, ಜಗದೀಶ್ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.