ತುಮಕೂರು: ಕಾಶ್ಮೀರದ ಪಹಲ್ಗಾಮ್‍ನಲ್ಲಿ ಉಗ್ರರ ದಾಳಿ ಖಂಡಿಸಿ ಜಿಲ್ಲಾ ಬಿಜೆಪಿಯಿಂದ ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ಹಿಂದೂಗಳನ್ನೇ ಗುರಿಯಾಗಿಸಿಕೊಂಡು ಗುಂಡು ಹಾರಿಸಿ ಅಮಾನುಷವಾಗಿ ಹತ್ಯೆ ಮಾಡಿರುವುದನ್ನು ಮುಖಂಡರು ಖಂಡಿಸಿ, ಮೃತರ ಆತ್ಮಕ್ಕೆ ಶಾಂತಿ ಕೋರಿದರು.
ನಗರದ ಬಿಜಿಎಸ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಶಾಸಕ ಜಿ.ಬಿ.ಜ್ಯೋತಿಗಣೇಶ್, ಪ್ರವಾಸಕ್ಕೆ ತೆರಳಿದ್ದ ಹಿಂದೂಗಳನ್ನು ಇಸ್ಲಾಮಿಕ್ ಜಿಹಾದಿ ಶಕ್ತಿಯ ಉಗ್ರರು ಅಮಾನುಷವಾಗಿ ಹತ್ಯೆ ಮಾಡಿರುವುದು ಹೇಯಕೃತ್ಯ. ಇಂತಹ ಭಯೋತ್ಪಾದನೆ ದಾಳಿಗಳಿಂದ ಈ ದೇಶದ ಸಮಗ್ರತೆ, ಏಕತೆಗೆ ಧಕ್ಕೆ ತರಬಹುದು ಎಂದು ಯಾರಾದರೂ ಭಾವಿಸಿದ್ದರೆ ಅವರು ಮೂರ್ಖರು ಎಂದರು.
ಭಯೋತ್ಪಾದನಾ ಕೃತ್ಯಗಳಿಗೆ ತಕ್ಕ ಉತ್ತರ ಕೊಡಲು ನಮ್ಮ ದೇಶ ಮತ್ತು ನಮ್ಮ ಸೈನ್ಯ ಸಮರ್ಥವಾಗಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರು ಇದಕ್ಕೆ ತಕ್ಕ ಪ್ರತ್ಯುತ್ತರ ನೀಡಲಿದ್ದಾರೆ. ಕಾಶ್ಮೀರದಲ್ಲಿ ಚುನಾವಣೆ ಆದ ನಂತರ ಹಾಗೂ 370ನೇ ವಿಧಿ ರದ್ದತಿಯಾದ ನಂತರ ಅಲ್ಲಿ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಇದನ್ನು ನೆರೆಯ ಪಾಕಿಸ್ತಾನಕ್ಕೆ ಸಹಿಸಿಕೊಳ್ಳಲಾಗುತ್ತಿಲ್ಲ. ದಿವಾಳಿ ಎದ್ದಿರುವ ಪಾಕಿಸ್ತಾನ ಸರ್ಕಾರ ಅಲ್ಲಿನ ಜನರ ಮನಸ್ಸನ್ನು ಬೇರೆಕಡೆ ತಿರುಗಿಸಲು ಇಂತಹ ಭಯೋತ್ಪಾದಕ ಕೃತ್ಯಗಳಿಗೆ ಬೆಂಬಲ ನೀಡುತ್ತಿದೆ. ಕಾಶ್ಮೀರದ ಜನರು ಭಯೋತ್ಪಾದನೆ ವಿರೋಧಿ ಹೋರಾಟದಲ್ಲಿ ಕೇಂದ್ರ ಸರ್ಕಾರದ ಜೊತೆ ನಿಲ್ಲಬೇಕು. ದೇಶದ ಪ್ರತಿ ಪ್ರಜೆಯೂ ಭಾರತ ಸರ್ಕಾರವನ್ನು ಬೆಂಬಲಿಸಬೇಕು ಎಂದು ಶಾಸಕ ಜಿ.ಬಿ.ಜ್ಯೋತಿಗಣೇಶ್ ಮನವಿ ಮಾಡಿದರು.
ತುಮಕೂರು ಗ್ರಾಮಾಂತರ ಕ್ಷೇತ್ರ ಶಾಸಕ ಬಿ.ಸುರೇಶ್‍ಗೌಡ ರವರು ಪಹಲ್ಗಾಮ್ ಉಗ್ರ ದಾಳಿಯನ್ನು ಖಂಡಿಸಿ, ದೇವರ ಹೆಸರಿನಲ್ಲಿ ಜನರನ್ನು ಕೊಲ್ಲುವುದನ್ನು ಯಾವ ಧರ್ಮವೂ ಬೆಂಬಲಿಸುವುದಿಲ್ಲ. ಯಾವ ಧರ್ಮೀಯರೂ ಬೆಂಬಲಿಸಬಾರದು. ಇದು ಪಕ್ಕದ ಪಾಕಿಸ್ತಾನ ದೇಶದಿಂದ ಪ್ರಾಯೋಜಿತವಾದ ಭಯೋತ್ಪಾದನಾ ಕೃತ್ಯವಿದು. ಹಿಂದೂಗಳನ್ನು ಗುರಿಯಾಗಿಸಿಕೊಂಡು ಹತ್ಯೆ ಮಾಡಲಾಗಿದೆ ಎಂದರು.
ಕಾಶ್ಮೀರದಲ್ಲಿ 370ನೇ ವಿಧಿ ರದ್ದಾದ ನಂತರ ಅಲ್ಲಿನ ಪರಿಸ್ಥಿತಿ ಶಾಂತಿಯುತವಾಗಿತ್ತು, ಪ್ರವಾಸೋದ್ಯಮ ಅಭಿವೃದ್ಧಿಯಾಗಿ ಆರ್ಥಿಕ ಚಟುವಟಿಕೆ ವೃದ್ಧಿಸಿತ್ತು. ಈ ಬೆಳವಣಿಗೆ ಸಹಿಸಲಾಗದ ಉಗ್ರರು ದಾಳಿ ಮಾಡಿ ಶಾಂತಿ ಕದಡುವ ಪ್ರಯತ್ನ ಮಾಡಿದ್ದಾರೆ. ಪ್ರಧಾನಿ ಮೋದಿ ಸರ್ಕಾರ ಭಯೋತ್ಪಾದಕನ್ನು ಸದೆಬಡಿಯಲು ತಕ್ಕ ಕ್ರಮ ಕೈಗೊಳ್ಳುತ್ತದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ, ಹಿರಿಯ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ರಾಜ್ಯ ಕಾರ್ಯದರ್ಶಿ ವಿನಯ್ ಬಿದರೆ ಮೊದಲಾದವರು ಭಯೋತ್ಪಾದನಾ ದಾಳಿ ಖಂಡಿಸಿ ಮಾತನಾಡಿದರು.
ಮುಖಂಡರಾದ ಎಸ್.ಶಿವಪ್ರಸಾದ್, ಸಂದೀಪ್‍ಗೌಡ, ಟಿ.ಹೆಚ್.ಹನುಮಂತರಾಜು, ಸುಮಿತ್ರಮ್ಮ, ನವಚೇತನ್, ರುದ್ರೇಶ್, ಹೆಚ್.ಎಂ.ರವೀಶಯ್ಯ, ಬಿ.ಎಸ್.ನಾಗೇಶ್, ಮಲ್ಲಿಕಾರ್ಜುನ್, ಪುಟ್ಟರಾಜು, ಇಂದ್ರಕುಮಾರ್, ಧನುಷ್, ಗಣೇಶ್‍ಪ್ರಸಾದ್, ಜ್ಯೋತಿ ತಿಪ್ಪೇಸ್ವಾಮಿ, ಬನಶಂಕರಿ ಬಾಬು, ಬಂಬೂ ಮೋಹನ್, ವೆಂಕಟೇಶಾಚಾರ್, ಲತಾ ಬಾಬು, ರಾಜಶೇಖರ್ ಹನುಮಂತರಾಜು, ಕೃಷ್ಣಪ್ಪ ಮೊದಲಾದವರು ಭಾಗವಹಿಸಿದ್ದರು.