ತುಮಕೂರು : ಕನ್ನಡ ಭಾಷೆ ಸಾಹಿತ್ಯ ಕಲೆ ಜಾನಪದ ಸಂಸ್ಕøತಿಗಳ ಸಂವರ್ಧನೆ ಮತ್ತು ಸಂರಕ್ಷಣೆಯ ಮಹದಾಶಯದೊಂದಿಗೆ 1915ರಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ರವರಿಂದ ಸ್ಥಾಪಿತಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಇಂದು ನಾಲ್ಕು ಲಕ್ಷಕ್ಕೂ ಮೀರಿ ಆಜೀವ ಸದಸ್ಯರನ್ನು ಹೊಂದಿದ್ದು, ಕನ್ನಡ ಭಾಷಿಕರ ನುಡಿಗುಡಿಯಾಗಿದೆ ಎಂದು ಸಂಶೋಧಕ ಡಾ. ಡಿ.ಎನ್.ಯೋಗೀಶ್ವರಪ್ಪ ಹೇಳಿದರು.
ಅವರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಕನ್ನಡ ಭವನದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ ಮತ್ತು ಮಡಿವಾಳ ಮಾಚಿದೇವ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಇಡೀ ದೇಶದಲ್ಲಿಯೇ ಶತಮಾನ ಏಕೈಕ ಭಾಷಿಕ ಸಂಘಟನೆಯಾದ ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕದ ಏಕೀಕರಣಕ್ಕೆ ಅಪಾರ ಕೊಡುಗೆ ನೀಡಿದೆ. ಭಾಷಿಕ ಜಾಗೃತಿಗಾಗಿ ಹಲವಾರು ಸಮ್ಮೇಳನಗಳನ್ನು ಏರ್ಪಡಿಸಿರುವ ಈ ಪರಿಷತ್ತು ಪುಸ್ತಕ ಪ್ರಕಟಣೆಯಂತಹ ಕಾರ್ಯಕ್ರಮ ನಡೆಸುತ್ತಾ ಹಲವಾರು ಉದಯೋನ್ಮುಖ ಲೇಖಕರನ್ನು ಪ್ರೋತ್ಸಾಹಿಸುತ್ತಿದೆ. ಜಾಗತೀಕರಣದ ಸುಳಿಗಾಳಿಗೆ ಸಿಲುಕಿ ನಲುಗುತ್ತಿರುವ ಕನ್ನಡ ಭಾಷೆಯ ಸಾಹಿತ್ಯವನ್ನು ಡಿಜಿಟಲೀಕರದ ಮೂಲಕ ಜಗತ್ತಿನ ಕನ್ನಡಿಗರಿಗೆ ಪರಿಚಯಿಸುತ್ತಿರುವುದು ಪರಿಷತ್ತಿನ ಉತ್ತಮ ಬೆಳವಣಿಗೆ ಎಂದೇ ಭಾವಿಸಬೇಕು ಎಂದರು.
ಮಡಿವಾಳ ಮಾಚಿದೇವರ ಕುರಿತು ದತ್ತಿ ಉಪನ್ಯಾಸ ನೀಡಿದ ಲೇಖಕಿ ಬಾ.ಹ.ರಮಾಕುಮಾರಿ, ಮಡಿವಾಳ ಮಾಚಿದೇವರಂತಹ ತಳಸಮುದಾಯದ ವಚನಕಾರರಿಗೆ ಅನುಭವಮಂಟಪದಲ್ಲಿ ಅವಕಾಶ ಮಾಡಿಕೊಟ್ಟು ಬಸವಣ್ಣನವರ ಸಹಾಯವನ್ನು ಮಾಚಿದೇವರು ಕಲ್ಯಾಣ ಕ್ರಾಂತಿಯ ಕಾಲದಲ್ಲಿ ವಚನಗಳನ್ನು ರಕ್ಷಿಸುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ ಐತಿಹಾಸಿಕ ಪುರುಷ ಎಂದರು.
ಶರಣರ ಬಟ್ಟೆಗಳನ್ನು ಮಡಿಮಾಡುವ ಕಾಯಕದಲ್ಲ ನಿರತರಾಗಿದ್ದ ಮಡಿವಾಳ ಮಾಚಿದೇವರಿಗೆ ಅನುಭವಮಂಟಪಕ್ಕೆ ಬರುವ ಹೊಸಬರನ್ನು ಪರೀಕ್ಷಿಸಿ ಪರಿಶೀಲಿಸುವ ಮಹತ್ವದ ಜವಾಬ್ದಾರಿ ಇತ್ತು. ಕಲ್ಯಾಣ ಕ್ರಾಂತಿಯ ಸಂದರ್ಭದಲ್ಲಿ ದಿಟ್ಟ ಗಣಾಚಾರಿಯಾಗಿದ್ದ ಈತ ಕಲಿದೇವರದೇವ ಎಂಬ ಅಂಕಿತದಲ್ಲಿ ವಚನಗಳನ್ನು ರಚಿಸಿದ್ದಾನೆ. ಆತನ ವಚನಗಳು ಸರಳವಾಗಿದ್ದು ಅನೇಕ ಸಾಮಾಜಿಕ ಮೌಲ್ಯಗಳನ್ನು ಒಳಗೊಂಡಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ. ಜಿಲ್ಲಾಧ್ಯಕ್ಷ ಕೆ.ಎಸ್.ಸಿದ್ಧಲಿಂಗಪ್ಪ ಮಾತನಾಡಿ ಅಖಿಲ ಭಾರತ ಮಟ್ಟದ 89 ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿರುವ ಕನ್ನಡ ಸಾಹಿತ್ಯ ಪರಿಷತ್ತು ಅವಶ್ಯಕತೆಗೆ ಅನುಗುಣವಾಗಿ ತನ್ನ ಬೈಲಾದಲ್ಲಿ ತಿದ್ದುಪಡಿ ಮಾಡುತ್ತಿದೆ. ಈ ತಿದ್ದುಪಡಿಗಳು ಸಾಹಿತ್ಯ ಪರಿಷತ್ತನ್ನು ಸದೃಢಗೊಳಿಸುತ್ತವೆಯೇ ಹೊರತು ಅದನ್ನು ಸಡಿಲಗೊಳಿಸುವುದಿಲ್ಲ ಎಂದರು. ತಾಲ್ಲೂಕು ಹೋಬಳಿ ಮತ್ತು ಗ್ರಾಮ ಘಟಕಗಳನ್ನು ಸ್ಥಾಪಿಸುವ ಮೂಲಕ ಪರಿಷತ್ತನ್ನು ಜನಸಾಮಾನ್ಯರೆಡೆಗೆ ಇಂದು ಕರೆದೊಯ್ಯಲಾಗುತ್ತಿದೆ ಎಂದರು.
ವೇದಿಕೆಯಲ್ಲಿ ದತ್ತಿದಾನಿಗಳಾದ ಹನುಮಂತಯ್ಯ ಹಾಜರಿದ್ದರು. ಕಸಾಪ ಸಂಚಾಲಕ ಕೆ.ಎಸ್.ಉಮಾಮಹೇಶ್ ಸ್ವಾಗತಿಸಿ, ಜಿ.ಹೆಚ್.ಮಹದೇವಪ್ಪ ವಂದಿಸಿದರು. ಡಾ. ಎಂ.ಗೋವಿಂದರಾಯ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಿಕ್ಕಬೆಳ್ಳಾವಿ ಶಿವಕುಮಾರ್ ನಿರೂಪಿಸಿದರು.