ತುಮಕೂರು : ಜಿಲ್ಲೆಯಲ್ಲಿ ಕಾರ್ಖಾನೆ, ಗ್ಯಾರೇಜ್, ಅಂಗಡಿಗಳಲ್ಲಿ ಅನಿರೀಕ್ಷಿತ ತಪಾಸಣೆ ಕೈಗೊಂಡು ಬಾಲಕಾರ್ಮಿಕರಿದ್ದಲ್ಲಿ ಪತ್ತೆ ಹಚ್ಚುವ ಕಾರ್ಯವನ್ನು ಇನ್ನಷ್ಟು ಚುರುಕುಗೊಳಿಸಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಿಕ ಸಭಾಂಗಣದಲ್ಲಿ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಕಾರ್ಯಕಾರಿ ಸಮಿತಿ ಹಾಗೂ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಕಾರ್ಮಿಕ ಇಲಾಖೆ ಅಧಿಕಾರಿಗಳ ತಂಡ 397 ತಪಾಸಣೆಗಳನ್ನು ಮಾತ್ರ ಕೈಗೊಂಡಿದ್ದು, ಕೇವಲ 11 ಬಾಲಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ. ಮುಂದಿನ 10 ದಿನಗಳಲ್ಲಿ ಎಲ್ಲಾ ಕಾರ್ಮಿಕ ನಿರೀಕ್ಷಕರು ತಮ್ಮ ವ್ಯಾಪ್ತಿಯ ಇಟ್ಟಿಗೆ ಕಾರ್ಖಾನೆ, ಹೆಂಚಿನ ಕಾರ್ಖಾನೆ, ಮಾರಾಟ ಮಳಿಗೆ, ತೆಂಗಿನ ಕಾಯಿ ಸಗಟು ವ್ಯಾಪಾರ ಸ್ಥಳ, ಗ್ಯಾರೇಜ್, ಮತ್ತಿತರ ಸ್ಥಳಗಳಿಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಬೇಕು. ಈ ಸ್ಥಳಗಳಲ್ಲಿ ಬಾಲ ಕಾರ್ಮಿಕರು ಕಂಡು ಬಂದಲ್ಲಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕೆಂದು ನಿರ್ದೇಶನ ನೀಡಿದರು.
ಎಲ್ಲಾ ತಾಲ್ಲೂಕುಗಳಲ್ಲಿ ಶಿಕ್ಷಣ ಹಾಗೂ ಪೊಲೀಸ್ ಇಲಾಖೆ ಸಹಯೋಗದಲ್ಲಿ ಬಾಲ ಕಾರ್ಮಿಕತೆಯಿಂದಾಗುವ ಅಪಾಯಗಳ ಬಗ್ಗೆ ಹಾಗೂ ಬಾಲ ಕಾರ್ಮಿಕರಿಂದ ದುಡಿಸಿಕೊಳ್ಳುವುದು, ಅವರನ್ನು ದುಡಿಮೆಗೆ ಕಳಿಸುವುದು ಕಾನೂನು ರೀತ್ಯಾ ಅಪರಾಧವೆಂದು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕೆಂದು ಸೂಚನೆ ನೀಡಿದರು.
ಕಾರ್ಮಿಕ ಅಧಿಕಾರಿ ತೇಜಾವತಿ ಸಭೆಗೆ ಮಾಹಿತಿ ನೀಡುತ್ತಾ, ಜಿಲ್ಲೆಯಲ್ಲಿ 2024-25ರಲ್ಲಿ ಒಟ್ಟು 397 ತಪಾಸಣೆ ನಡೆಸಿ 11 ಬಾಲಕಾರ್ಮಿಕರನ್ನು ಪತ್ತೆ ಹಚ್ಚಲಾಗಿದೆ. ಈ ಪೈಕಿ ಬಾಲಕಾರ್ಮಿಕರಿಂದ ದುಡಿಸಿಕೊಳ್ಳುತ್ತಿದ್ದ 3 ಪ್ರಕರಣಗಳಲ್ಲಿ ಮಾಲೀಕರ ಮೇಲೆ ಮೊಕದ್ದಮೆ ದಾಖಲಿಸಿ ದಂಡ ವಸೂಲಿ ಮಾಡಲಾಗಿದ್ದು, 4 ಮಕ್ಕಳನ್ನು ಮಕ್ಕಳ ಕಲ್ಯಾಣ ಸಮಿತಿಗೆ ದಾಖಲಿಸಲಾಗಿದೆ. ಉಳಿದ ಮಕ್ಕಳನ್ನು ಪೋಷಕರ ವಶಕ್ಕೆ ನೀಡಲಾಗಿದೆ ಎಂದು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೆÇಲೀಸ್ ವರಿμÁ್ಠಧಿಕಾರಿ ಸಿ.ಗೋಪಾಲ್, ಉಪ ವಿಭಾಗಾಧಿಕಾರಿ ಗೋಟೂರು ಶಿವಪ್ಪ, ನಗರಾಭಿವೃದ್ಧಿ ಕೋಶದ ಉಪನಿರ್ದೇಶಕ ಯೋಗಾನಂದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾರ್ಯಕ್ರಮಾಧಿಕಾರಿ ದಿನೇಶ್, ಸೇರಿದಂತೆ ಮತ್ತಿತರರು ಹಾಜರಿದ್ದರು.