ತುಮಕೂರು: ಗಾಂಧೀಜಿಯವರ ಮಾತು ಮತ್ತು ಕೃತಿಯ ಮಧ್ಯೆ ವ್ಯತ್ಯಾಸವಿರಲಿಲ್ಲ. ಅವರು ಆತ್ಮವಂಚನೆಯಿಲ್ಲದೆ ಬದುಕಿದ್ದರು. ಎಂತಹದೇ ಪ್ರತಿಕೂಲ ಸನ್ನಿವೇಶದಲ್ಲೂ ಅಂತಃಸಾಕ್ಷಿಗೆ ಬದ್ಧರಾಗಿರಬೇಕು ಎಂಬುದನ್ನು ನಾವು ಗಾಂಧೀಜಿಯವರಿಂದ ಕಲಿಯಬೇಕು ಎಂದು ನಿವೃತ್ತ ರಾಜ್ಯಶಾಸ್ತ್ರ ಪ್ರಾಧ್ಯಾಪಕಿ ಭಾರತೀಯ ವಿದ್ಯಾಭವನದ ಗಾಂಧಿ ಕೇಂದ್ರದ ನಿರ್ದೇಶಕಿ ಡಾ. ಮೀನಾ ದೇಶಪಾಂಡೆ ಮಹಿಷಿ ತಿಳಿಸಿದರು.
ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ತುಮಕೂರು ವಿಶ್ವವಿದ್ಯಾನಿಲಯವು ಬುಧವಾರ ಆಯೋಜಿಸಿದ್ದ ‘ಗಾಂಧಿ ಭಾರತ’- ವಿವಿ ಮಟ್ಟದ ಅಂತರ ಕಾಲೇಜು ಸಾಂಸ್ಕøತಿಕ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಗಾಂಧೀಜಿಯವರು ವಿಶಿಷ್ಟವಾದ ಶಕ್ತಿಯನ್ನು ಮೈಗೂಡಿಸಿಕೊಂಡಿದ್ದರು. ಸತತ ಪ್ರಯತ್ನ, ಶ್ರಮ ಹಾಗೂ ತಪಸ್ಸಿನ ಫಲವಾಗಿ ಸ್ವಾತಂತ್ರ್ಯದ ಗಮ್ಯವನ್ನು ತಲುಪಿದರು. ಅವರು ಸತ್ಯದ ಅನ್ವೇಷಣೆಯನ್ನು ತಮ್ಮ ಬದುಕಿನ ಹಾದಿಯನ್ನಾಗಿಸಿಕೊಂಡಿದ್ದರು ಎಂದು ನೆನಪಿಸಿಕೊಂಡರು.
ನಮ್ಮ ಅಂತರಾಳದ ಮಾತುಗಳನ್ನು ಕೇಳಿಸಿಕೊಂಡಾಗ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ಆಂತರಿಕವಾಗಿ ಬೆಳೆಯಬೇಕಾದರೆ ಮನಸ್ಸಿನ ಮಾತು ಕೇಳಬೇಕು. ಗಾಂಧೀಜಿ ಒಳಗಿನಿಂದ ಸದೃಢರಾಗಿದ್ದರಿಂದಲೇ ಅವರ ನಡೆನುಡಿಗಳಲ್ಲಿ ಸೌಮ್ಯಸ್ವಭಾವ ಇತ್ತು. ಅವರೆಂದು ದನಿ ಎತ್ತರಿಸಿ ಮಾತನಾಡಿರಲಿಲ್ಲ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿವಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ. ಎಸ್. ಶ್ರೀನಿವಾಸ, ಸಹಾಯ ಹಸ್ತವನ್ನು ಬೇಡಿ ಬಂದವರಿಗೆ ಸಹಾಯ ಮಾಡುವುದು ನಮ್ಮ ಧರ್ಮ. ಅದಕ್ಕೆ ದುಪ್ಪಟ್ಟಾದ ಪ್ರತಿಫಲ ದೊರೆತೇ ದೊರೆಯುತ್ತದೆ. ಪರೋಪಕಾರ ಮಾಡಲು ಸಿಗುವ ಅವಕಾಶವನ್ನು ಬಿಡಬಾರದು. ಬೇರೆಯವರಲ್ಲಿ ತಪ್ಪನ್ನು ಹುಡುಕುವ ಬದಲು ಒಳ್ಳೆಯ ಅಂಶವನ್ನು ಪಡೆದುಕೊಳ್ಳಿ ಎಂದು ಹೇಳಿದರು.
ಗಾಂಧಿ ಭಾರತ ಕಾರ್ಯಕ್ರಮ ಸಮಿತಿಯ ಅಧ್ಯಕ್ಷರಾದ ಪ್ರೊ. ಟಿ. ಎನ್. ಹರಿಪ್ರಸಾದ್ ಮಾತನಾಡಿ, ಧಾರ್ಮಿಕತೆ, ಜಾತಿ, ಪಕ್ಷ ರಾಜಕಾರಣ, ಲಿಂಗ ಸಂಬಂಧಿ, ಗಾಂಧಿ ತತ್ವಗಳ ಅರಿವಿನ ಕೊರತೆಯಿಂದ ಗಾಂಧೀಜಿಯವರನ್ನು ವಿರೋಧಿಸುವ ಪ್ರವೃತ್ತಿ ಬೆಳೆಯುತ್ತಿದೆ. ಆದರೆ ಗಾಂಧೀಜಿ ಒಂದು ಸಾರ್ವಕಾಲಿಕ ಆದರ್ಶ ಎಂಬುದನ್ನು ಯುವಜನತೆಗೆ ಮನವರಿಕೆ ಮಾಡಿಕೊಡಬೇಕಿದೆ ಎಂದರು.
ವಿವಿ ವ್ಯಾಪ್ತಿಯ ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ರಸಪ್ರಶ್ನೆ, ಪ್ರಬಂಧ, ಭಾಷಣ, ದೇಶಭಕ್ತಿಗೀತೆ ಹಾಗೂ ಕಿರುನಾಟಕ ಸ್ಪರ್ಧೆಗಳನ್ನು ನಡೆಸಲಾಯಿತು.
ಕಾರ್ಯಕ್ರಮದ ಸಂಚಾಲಕ ಡಾ. ಕೆ. ಮಹಾಲಿಂಗ ಉಪಸ್ಥಿತರಿದ್ದರು. ಡಾ. ಶ್ರೀನಿವಾಸ ವಂದಿಸಿದರು. ಡಾ. ಸಿಬಂತಿ ಪದ್ಮನಾಭ ಕೆ. ವಿ. ನಿರೂಪಿಸಿದರು.