ತುಮಕೂರು : ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕುಣಿಗಲ್ಗೆ ಮಾತ್ರ ಸೀಮಿತವಾಗಿದ್ದು, ಮಾಗಡಿಗೆ ನೀರು ತೆಗೆದುಕೊಂಡು ಹೋಗುವ ಯೋಜನೆಯಲ್ಲ, ಜಿಲ್ಲೆಯ ಹಿತವನ್ನು ಕಾಪಾಡಲು ಬದ್ಧನಾಗಿದ್ದೇನೆಂದು ಗಟ್ಟಿ ಧ್ವನಿಯಲ್ಲಿ ಹೇಳುತ್ತೇನೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಗೃಹ ಸಚಿವರಾದ ಡಾ.ಜಿ.ಪರಮೇಶ್ವರ ಸ್ಪಷ್ಟಪಡಿಸಿದರು.
ಅವರಿಂದು ಎಕ್ಸ್ ಪ್ರೆಸ್ ಕೆನಾಲ್ ಏತಕ್ಕಾಗಿ ನಿರ್ಮಾಣವಾಗುತ್ತಾ ಇದೆ ಎಂಬುದರ ಬಗ್ಗೆ ಪ್ರತಿಕಾಗೋóಷ್ಠಿಯಲ್ಲಿ ಮಾತನಾಡಿದ ಅವರು, ಎಕ್ಸ್ ಪ್ರೆಸ್ ಕೆನಾಲ್ ನಿರ್ಮಾಣದಿಂದ ಗುಬ್ಬಿ, ತುಮಕೂರು, ಶಿರಾ, ತುಮಕೂರು ಗ್ರಾಮಾಂತರ ಕ್ಷೇತ್ರಗಳಿಗೆ ನೀರು ಹರಿಯುವುದಿಲ್ಲ ಎಂಬ ತಪ್ಪು ಕಲ್ಪನೆ ಸೃಷ್ಠಿಸಲಾಗಿದೆ, ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಮುನ್ನ ತಜ್ಞರ ವರದಿಯನ್ನು ಪಡೆದುಕೊಂಡೇ ಈ ಯೋಜನೆಯನ್ನು ಅನುಷ್ಠಾನ ಕೈಗೊಂಡಿರುವುದು, 2024ನೇ ಜನವರಿ 5ರ ಸಂಪುಟ ಸಭೆಯಲ್ಲಿ ಈ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ಗೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರಾರಂಭದಲ್ಲಿ ಜನಪ್ರತಿನಿಧಿಗಳಿಂದ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ 2024ರ ಸೆಪ್ಟಂಬರ್ 3ರಂದು ಶಾಸಕರಾದ ಬಿ.ಸುರೇಶಗೌಡ, ಜಿ.ಬಿ.ಜ್ಯೋತಿಗಣೇಶ್, ಎಂ.ಟಿ.ಕೃಷ್ಣಪ್ಪ, ಡಾ||ರಂಗನಾಥ ಅವರ ಸಮ್ಮುಖದಲ್ಲಿ ಜಲ ಸಂಪನ್ಮೂಲ ಸಚಿವರಾದ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಸಭೆ ನಡೆಸಿ ಮಾಹಿತಿ ನೀಡಿದಾಗ ಈ ಶಾಸಕರುಗಳು ನಮ್ಮ ಭಾಗಕ್ಕೆ ನೀರನ್ನು ಕೊರತೆ ಬಾರದಂತೆ ತೆಗೆದುಕೊಂಡು ಹೋಗುವುದಾದರೆ ನಮ್ಮ ಅಭ್ಯಂತರವಿಲ್ಲ ಎಂದು ತಿಳಿಸಿದ್ದರು ಎಂದು ಹೇಳಿದರು.
ಕುಣಿಗಲ್ಗೆ ಚಾನಲ್ ಇದ್ದರೂ 2014ರಿಂದ 2024ರವರೆಗೆ ಚಾನಲ್ ಮೂಲಕ ಹರಿದಿರುವ ನೀರಿನ ಪ್ರಮಾಣವನ್ನು ತೆಗೆದುಕೊಂಡರೆ, ಒಂದು ಬಾರಿಯೂ ಪೂರ್ಣ ಪ್ರಮಾಣದ ನೀರನ್ನು ಒದಗಿಸಲಾಗಿಲ್ಲ, ಕುಣಿಗಲ್ಗೆ 3ಟಿಎಂಸಿ ನೀರನ್ನು ಹಂಚಿಕೆ ಮಾಡಲಾಗಿದ್ದು, 2014-15ರಲ್ಲಿ 0.210, 2015-16ರಲ್ಲಿ 0.230, 2016-17ರಲ್ಲಿ 0.030, 2017-18ರಲ್ಲಿ 0.072, 2018-2019ರಲ್ಲಿ 0.075, 2019-2020ರಲ್ಲಿ 0.227, 2020-21ರಲ್ಲಿ 0.4486, 2021-22ರಲ್ಲಿ 0.332, 2022-23ರಲ್ಲಿ 0.332, ಮತ್ತು 2023-24ರಲ್ಲಿ 0.2041 ಟಿಎಂಸಿಯಷ್ಟು ನೀರು ಹರಿದಿದೆ, ಕುಣಿಗಲ್ಗೆ ಪೂರ್ಣ ಪ್ರಮಾಣದಲ್ಲಿ ಚಾನಲ್ ಮುಖಾಂತರ ಹರಿಯದೆ ಇರುವುದರಿಂದ ಆ ಭಾಗದ ಶಾಸಕರು ಸರ್ಕಾರಕ್ಕೆ ವiನವಿ ಮಾಡಿದಾಗ ಪೂರ್ಣ ಪ್ರಮಾಣದ ನೀರು ಕೊಡಲು ಈ ಎಕ್ಸ್ ಪ್ರೆಸ್ ಕೆನಾಲ್ ಯೋಜನೆಯನ್ನು 956ಕೋಟಿ ವೆಚ್ಚದಲ್ಲಿ ಸರ್ಕಾರ ಕೈಗೆತ್ತಿಕೊಂಡಿದೆ, ಇದು ಯಾರೊಬ್ಬರ ಹಿತವನ್ನು ಕಾಪಾಡುವುದಲ್ಲ, ಇದು ಪೂರ್ಣ ಸರ್ಕಾರದ ಯೋಜನೆ ಎಂದು ಸ್ಪಷ್ಟ ಪಡಿಸಿದರು.
70ನೇ ಕಿ.ಮೀ.ನಲ್ಲಿ ಆಧುನಿಕ ಸ್ಕಾಡ ಮೀಟರ್ ಗೇಟನ್ನು ಅಳವಡಿಸಿ ಎಕ್ಸ್ ಪ್ರೆಸ್ ಕೆನಾಲ್ನಲ್ಲಿ ಹರಿಯುವ ನೀರಿನ ಪ್ರಮಾಣವನ್ನು ನಿಖರವಾಗಿ ಲೆಕ್ಕ ತೆಗೆದುಕೊಳ್ಳಲಾಗುವುದು, ಈಗಿನ ನಾಲೆಗೆ ಸಮನಾಂತರದಲ್ಲೇ ಎಕ್ಸ್ ಪ್ರೆಸ್ ಕೆನಾಲ್ ನಾಲಾ ಪೈಪ್ಗಳನ್ನು ಅಳವಡಿಸುವುದರಿಂದ ಹೆಚ್ಚಿನ ರಭಸದಿಂದ ಹೆಚ್ಚು ನೀರು ಹರಿಯಲು ಸಾಧ್ಯವಿಲ್ಲ, ಅದರಿಂದ ಮುಂದಕ್ಕೆ ಈಗ ಹರಿಯುತ್ತಿರುವ 900 ಕ್ಯೂಸೆಕ್ಸ್ ನೀರು ಯಾವುದೇ ಅಡೆತಡೆಯಿಲ್ಲದೆ ಸರಾಗವಾಗಿ ಹರಿಯಲಿದೆ ಇದರಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ತಿಳಿಸಿದರು.
ಮೇ 31ರಂದು ಎಕ್ಸ್ ಪ್ರೆಸ್ ಕೆನಾಲ್ ವಿರೋಧಿಸಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಣ್ಣಿನ ಎಂಟೆಯಲ್ಲಿ ಹೊಡೆದ ಪರಿಣಾಮ ಒಬ್ಬ ಪಿಎಸ್ಐ ಸೇರಿದಂತೆ ಕೆಲ ಪೊಲೀಸರಿಗೆ ಪೆಟ್ಟಾಗಿದೆ, ಜಿಲ್ಲಾಡಳಿತ ಯಾವುದೇ ಪ್ರತಿಭಟನೆ ಮಾಡಬಾರದೆಂದು ನಿಷೇಧಾಜ್ಞೆ ಹೇರಿದ್ದರೂ ಪ್ರತಿಭಟನೆ ಕೈಗೊಂಡು ಗುತ್ತಿಗೆದಾರರ ಹಿಟಾಚಿ ಸೇರಿದಂತೆ ಇತರೆ ವಸ್ತುಗಳಿಗೆ ಹಾನಿಯುಂಟು ಮಾಡಿದ್ದಾರೆ, ಸರ್ಕಾರ ಆತನಿಗೆ ಗುತ್ತಿಗೆ ನೀಡಿರುವುದರಿಂದ ಆತ ಕಾಮಗಾರಿ ಮಾಡುತ್ತಿದ್ದಾನೆ, ಆತನ ವಸ್ತುಗಳನ್ನು ಹಾಳು ಮಾಡುವುದು ಸರಿಯಲ್ಲ ಎಂದ ಅವರು, ಪ್ರತಿಭಟನೆಗೆ ಪ್ರಚೋದನೆ ನೀಡಿದ್ದಾರೆಂದು ಶಾಸಕರುಗಳಾದ ಬಿ.ಸುರೇಶಗೌಡ, ಜಿ.ಬಿ,ಜ್ಯೋತಿಗಣೇಶ್, ಎಂ.ಟಿ.ಕೃಷ್ಣಪ್ಪ, ಬಿಜೆಪಿ ಮುಖಂಡ ಎಸ್.ಡಿ.ದಿಲೀಪ್ಕುಮಾರ ಸೇರಿದಂತೆ 18 ಮಂದಿ ಮೇಲೆ ಎಫ್ಐಆರ್ ದಾಖಲಾಗಿದೆ, ಅಲ್ಲದೆ ಸ್ವಾಮೀಜಿಗಳ ಮೇಲೂ ಎಫ್ಐಆರ್ ದಾಖಲಾಗಿದ್ದು, ಯಾವ ಸ್ವಾಮಿಗಳ ಹೆಸರನ್ನು ಎಫ್ಐಆರ್ ನಲ್ಲಿ ಉಲ್ಲೇಖಿಸಿಲ್ಲ ಎಂದು ಗೃಹ ಸಚಿವರು ತಿಳಿಸಿದರು.
ಲಿಂಕ್ ಕೆನಾಲ್ ಯೋಜನೆಯು ತುಮಕೂರು ಶಾಖ ನಾಲೆಯ 70ನೇ ಕಿ.ಮೀ.ನ ಗುರುತ್ವ ಪೈಪ್ ಲೈನ್ ಸ್ವತಂತ್ರ ಜಾಲವಾಗಿದ್ದು, ಇದು ಕುಣಿಗಲ್ (ಕುಡಿಯುವ ನೀರಿನ ಅಗತ್ಯಗಳು+ ನೀರಾವರಿ) ಮತ್ತು ಮಾಗಡಿ (ಕುಡಿಯುವ ನೀರಿನ ಅಗತ್ಯಗಳು) ತಾಲ್ಲೂಕುಗಳಿಗೆ ಹಂಚಿಕೆಯಾದ ನೀರನ್ನು, ತುಮಕೂರು ಶಾಖಾ ನಾಲೆಯ ಮೇಲ್ಬಾಗದಲಿ ಬರುವ ತಾಲ್ಲೂಕುಗಳ ನೀರಿನ ಹಂಚಿಕೆಗೆ ತೊಂದರೆ ಯಾವುದೇ ಇಲ್ಲದಂತೆ ಒದಗಿಸಲಾಗುವುದು, ಗುರುತ್ವ ಪೈಪ್ಲೈನ್ನ ಉದ್ದೇಶವು ನಿರ್ದಿಷ್ಟ ಸಮಯದವರೆಗೆ ಅಗತ್ಯವಿರುವ ನೀರಿನ ಹರಿವನ್ನು SCADA ತಂತ್ರಜ್ಞಾನದ ಮುಖೇನ ನಿಯಂತ್ರಿಸುವುದಾಗಿ ತಿಳಿಸಿದರು.
2024ರ ಜುಲೈ 3ರ ಸರ್ಕಾರದ ಆದೇಶದನ್ವಯ ತಾಂತ್ರಿಕ ಅಧ್ಯಯನ ಸಮಿತಿಯು ಸವಿವರವಾಗಿ ಅಧ್ಯಯನ ರಚನೆಗೊಂಡ ಕೈಗೊಂಡು, ಸದರಿ ಲಿಂಕ್ ಕೆನಾಲ್ ಯೋಜನೆಯು ಕುಣಿಗಲ್ ತಾಲ್ಲೂಕು ಕಾವೇರಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿದ್ದರೂ ಕಳೆದ ಎರಡು ದಶಕಗಳಿಂದ ಸತತವಾಗಿ ತನಗೆ ಹಂಚಿಕೆಯಾದ ನೀರನ್ನು ಪಡೆಯಲು ಸಾಧ್ಯವಾಗದೆ ಇರುವ ಸಮಸ್ಯೆಯನ್ನು ತಾಂತ್ರಿಕವಾಗಿ, ಸಾಮಾಜಿಕವಾಗಿ ಹಾಗೂ ಕಾನೂನಾತ್ಮಕವಾಗಿ ನಿವಾರಿಸಲು ರೂಪಿತಗೊಂಡ ಕಾರ್ಯಸಾಧುವಾದ ಪೂರಕ ವ್ಯವಸ್ಥೆಯಾಗಿದೆ, ಇದು ಕುಣಿಗಲ್ ತಾಲ್ಲೂಕು ತನ್ನ ಪಾಲಿನ ನೀರನ್ನು ಇದರಿಂದ ಪಡೆಯಲು ಸೀಮಿತವಾಗಿ ವಿನ್ಯಾಸಗೊಂಡಿದ್ದು, ಶಾಖಾ ತುಮಕೂರು ನಾಲೆಯ ಮೇಲ್ಬಾಗದ ಫಲಾನುಭವಿ ತಾಲ್ಲೂಕುಗಳ ನಿಗಧಿಪಡಿಸಲಾದ ನೀರಿನ ಪಾಲಿನ ಪ್ರಮಾಣಕ್ಕೆ ಯಾವುದೇ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡುವುದಿಲ್ಲ ಎಂದು ಡಾ.ಜಿ.ಪರಮೇಶ್ವರ್ ಹೇಳಿದರು.