ತುಮಕೂರು:ಪದವಿ ಮುಗಿಸಿ, ಉದ್ಯೋಗ ಪಡೆಯುವ, ಸ್ವಯಂ ಉದ್ಯೋಗ ಮಾಡುವ ಕನಸ್ಸು ಕಾಣುತ್ತಿರುವ ಯುವಜನತೆ ಮತ್ತು ಉದ್ದಿಮೆದಾರರೊಂದಿಗೆ ನೇರ ಸಂಪರ್ಕ ಏರ್ಪಡಿಸುವ ನಿಟ್ಟಿನಲ್ಲಿ ಹಾಲಪ್ಪ ಪ್ರತಿಷ್ಠಾನ ಪ್ರತಿ ತಿಂಗಳಿಗೊಂದು ಕಾರ್ಯಕ್ರಮ ಏರ್ಪಡಿಸುವ ಮೂಲಕ ವಿದ್ಯಾರ್ಥಿ ಯುವ ಜನರು ಮತ್ತು ಕೈಗಾರಿಕೆಗಳ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಿದೆ ಎಂದು ಹಾಲಪ್ಪ ಪ್ರತಿóಷ್ಠಾನದ ಅಧ್ಯಕ್ಷ ಹಾಗೂ ಕೌಶಲ್ಯಾಭಿವೃದ್ದಿ ಮಂಡಳಿ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ತಿಳಿಸಿದರು.
ನಗರದ ಕ್ರೋಮೋಡ್ ಬಯೋಟೇಕ್ ಆವರಣದಲ್ಲಿ ಅಂತಿಮ ವರ್ಷದ ಔಷಧ ವಿಜ್ಞಾನ ಮತ್ತು ಅರೆ ವೈದ್ಯಕೀಯ ಪದವಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಕೈಗಾರಿಕಾ ಭೇಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತಿದ್ದ ಅವರು, ಉದ್ಯೋಗಾಧಾರಿತ (ಜಾಬ್) ಶಿಕ್ಷಣ ಕಲಿಯುತ್ತಿರುವ ಮಕ್ಕಳು ಕೈಗಾರಿಕೆಗಳಿಗೆ ಭೇಟಿ ನೀಡುವುದರಿಂದ ಒಂದು ಉದ್ಯಿಮೆ ಎಂದರೆ ಏನು, ಅದರಲ್ಲಿ ಏನೇನು ಅಡಕವಾಗಿದೆ. ಇದರ ಹಿಂದಿನ ಶ್ರಮ,ಯಾವೆಲ್ಲಾ ಇಲಾಖೆಗಳ ಸಹಕಾರ, ಸಹಯೋಗ ಇದೆ ಎಂಬುದನ್ನು ಖುದ್ದು ತಿಳಿಯುವುದರ ಜೊತೆಗೆ,ಕೈಗಾರಿಕೆಗಳಿಗೆ ಸಂಬಂಧಿಸಿದಂತಹ ಸಿಡಾಕ್, ಡಿಐಸಿ, ಕೆ.ಎಸ್.ಎಫ್.ಸಿ, ಕೆಐಎಡಿಬಿ ಹೀಗೆ ಸಂಬಂಧಿಸಿದ ಇಲಾಖೆಯಿಂದ ಮಾಹಿತಿ ಮತ್ತು ಮಾರ್ಗದರ್ಶನ ಪಡೆಯಲು ಸಹಕಾರಿಯಾಗುತ್ತದೆ. ಅಲ್ಲದೆ ಇಂತಹ ಸಂಸ್ಥೆಗಳನ್ನು ತಮ್ಮ ಕಾಲೇಜಿಗೂ ಭೇಟಿ ಮಾಡುವಂತೆ ಮಾಡಿ, ನಿಮ್ಮ ಸ್ನೇಹಿತರು, ಇತರೆ ವಿದ್ಯಾರ್ಥಿಗಳಿಗೂ ತಿಳುವಳಿಕೆ ನೀಡಲು ಸಹಕಾರಿಯಾಗುತ್ತದೆ. ಇನ್ನು ಮುಂದೆ ಹಾಲಪ್ಪ ಪ್ರತಿಷ್ಠಾನ ಪ್ರತಿ ತಿಂಗಳು ಒಂದೊಂದು ಕೈಗಾರಿಕೆಗಳಿಗೆ ಆಸಕ್ತ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಮಾಹಿತಿ ಕೊಡಿಸುವ ಕೆಲಸ ಮಾಡಲಿದೆ ಎಂದು ಭರವಸೆ ನೀಡಿದರು.
ಜಿಲ್ಲೆಯಲ್ಲಿ ಸುಮಾರು 72 ಪದವಿ ಕಾಲೇಜುಗಳಿವೆ. ಅಂತಿಮ ವರ್ಷದ ವಿದ್ಯಾರ್ಥಿಗಳ ಕೈಗಾರಿಕಾ ಭೇಟಿಯಿಂದ ಯುವ ಜನರಲ್ಲಿ ಒಂದು ಆತ್ಮ ಸ್ಥೈರ್ಯ ಮೂಡಲಿದೆ. ನೀವು ಕಲಿಯುತ್ತಿರುವ ಕಾಲೇಜುಗಳ ಅಡಳಿತ ಮಂಡಳಿಯ ಒಪ್ಪಿದರೆ, ನಿಮ್ಮಲ್ಲಿಯೇ ಇನ್‍ಕ್ಯೂಬೇಸೆನ್ ಸೆಂಟರ್ ತೆರೆದು ನಿಮಗೆ ಇಷ್ಟ ಬಂದ ಸ್ಟಾರ್ಟ ಅಫ್ ಅರಂಭಿಸಬಹುದು. ತುಮಕೂರು ಜಿಲ್ಲೆಯಲ್ಲಿ ಸುಮಾರು 6000-8000 ಐಟಿ, ಬಿಟಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿದ್ದು, ಇವರಿಗೆ ಮನೆ ಬಾಗಿಲಲ್ಲಿಯೇ ಉದ್ಯೋಗ ಒದಗಿಸುವ ನಿಟ್ಟಿನಲ್ಲಿಜಾಗ ನೀಡುವ ಸಂಬಂಧ ಚರ್ಚೆಗಳು ನಡೆಯುತ್ತಿವೆ. ವಸಂತನರಸಾಪುರ, ಹಿರೇಹಳ್ಳಿ, ಅಂತರಸರನಹಳ್ಳಿ ಕೈಗಾರಿಕಾ ಪ್ರದೇಶಗಳಲ್ಲಿ ಐಟಿ, ಬಿಟಿ ಆರಂಭವಾದರೆ ತುಮಕೂರು ಜಿಲ್ಲೆಯ ಚಿತ್ರಣವೇ ಬದಲಾಗಲಿದೆ. ಅಂತಿಮ ವರ್ಷದಲ್ಲಿ ಕಲಿಯುತ್ತಿರುವ ಯುವ ಜನರು ನಾನು ಉದ್ಯೋಗಿಯಾಗಬೇಕೇ ? ಉದ್ದಿಮೆದಾರನಾಗಬೇಕೆ ಎಂಬುದನ್ನು ನಿರ್ಧರಿಸಿ,
ಆ ನಿಟ್ಟಿನಲ್ಲಿ ಸೂಕ್ತ ಮಾರ್ಗದರ್ಶನ ಪಡೆದರೆ ಯಶಸ್ವಿ ಉದ್ದಿಮೆದಾರನಾಗಬಹುದು ಎಂದು ಮುರುಳೀಧರ ಹಾಲಪ್ಪ ಸಲಹೆ ನೀಡಿದರು.

ಕರ್ನಾಟಕ ಉದ್ಯಮಶೀಲತಾ ಅಭಿವೃದ್ದಿ ಕೇಂದ್ರದ ಮುಖ್ಯಸ್ಥ ಮಧು ಮಾತನಾಡಿ, ಕೌಶಲ್ಯಾಭಿವೃದ್ದಿ ಇಲಾಖೆಯ ಅಡಿಯಲ್ಲಿ ಬರುವ ನಮ್ಮ ಸಂಸ್ಥೆ ಹೊಸದಾಗಿ ಉದ್ದಿಮೆ ಪ್ರಾರಂಭಿಸಬೇಕು ಎಂಬುವವರಿಗೆ ಅಗತ್ಯ ತರಬೇತಿಯ ಜೊತೆಗೆ, ಮಾರ್ಗದರ್ಶನ ಮಾಡಿ, ಅವರಿಗೆ ಸರಕಾರದಿಂದ ದೊರೆಯಬಹುದಾದ ಸವಲತ್ತು, ಸಹಕಾರದ ಮಾಹಿತಿ ನೀಡಲಿದೆ. ಅಲ್ಲದೆ ಉದ್ಯೋಗ ಪಡೆಯಬೇಕೆಂಬ ಆಸೆಯಲ್ಲಿರುವ ಯುವಕರಿಗೆ ಅವರ ಕೌಶಲ್ಯಾ ಹೆಚ್ಚಿಸಿಕೊಳ್ಳಲು ಅಗತ್ಯವಿರುವ ತರಬೇತಿಯನ್ನು ನೀಡಿ, ಕೈಗಾರಿಕೆಗೆ ಅಗತ್ಯವಿರುವ ಕೌಶಲ್ಯ ದೊರೆಯುವಂತೆ ಮಾಡುತ್ತದೆ. ಅಲ್ಲದೆಒಂದು ಕಂಪನಿ ಆರಂಭಕ್ಕೆ ಅಗತ್ಯವಿರುವ ಪ್ರಾಜೆಕ್ಟ್ ತಯಾರಿಕೆಗೆ ಎಲ್ಲ ರೀತಿಯ ನೆರವನ್ನು ಸಹ ನೀಡಲಿದೆ ಎಂದರು.
ಯುವ ಜನರು ಇತ್ತೀಚಿನ ದಿನಗಳಲ್ಲಿ ಎಲ್ಲದರಲ್ಲಿಯೂ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಒಂದು ಮೊಬೈಲ್ ಇದ್ದರೆ ಸಾಕು, ಇನ್ನೇನು ಬೇಡ ಎಂಬಂತಹ ಮನಸ್ಥಿತಿ ಯುವ ಜನರಲ್ಲಿದೆ. ಇದರ ಹೋಗಬೇಕೆಂದರೆ ಇಂದು ಮುರುಳೀಧರ ಹಾಲಪ್ಪ ಅವರು ಏರ್ಪಡಿಸಿರುವ ರೀತಿ ಯುವ ಜನರನ್ನು ಕೈಗಾರಿಕೆಗಳಿಗೆ ಕರೆತಂದು, ಅಲ್ಲಿನ ಸಾಧಕ, ಭಾಧಕಗಳ ಪರಿಚಯ ಮಾಡಿಸಿದರೆ, ಒಂದು ಆಸಕ್ತಿ ಮೂಡಲು ಸಾಧ್ಯ. ಹಾಗಾಗಿ ಇಂತಹ ಕಾರ್ಯಕ್ರಮಗಳಿಗೆ ಸಿಡಾಕ್ ಎಂದಿಗೂ ಜೊತೆಯಾಗಿ ನಿಲ್ಲಲ್ಲಿದೆ. ಈ ದೇಶದ ಅಭಿವೃದ್ದಿಯಲ್ಲಿ ಉದ್ದಿಮೆದಾರರ ಪಾತ್ರ ಮಹತ್ವದ್ದು, ಉದ್ದಿಮೆದಾರರು ಅತಿ ಹೆಚ್ಚು ತೆರಿಗೆ ಪಾವತಿಸುವುದರಿಂದ, ಆ ಬಂಡವಾಳವನ್ನು ಅಭಿವೃದ್ದಿಗೆ ಬಳಕೆ ಮಾಡಲಾಗುತ್ತದೆ. ದೇಶದಅಭಿವೃದ್ದಿಗೆ ನಿಮ್ಮ ಕೊಡುಗೆಯೂ ಇರಲಿದೆ ಎಂದರು.
ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಎಇಇ ರಾಜೇಶ್ ಮಾತನಾಡಿ, ಉದ್ದಿಮೆ ಪ್ರಾರಂಭಿಸಬೇಕುಎಂದು ತೀರ್ಮಾನಿಸಿದಾಗ ಅಗತ್ಯವಿರುವ ಭೂಮಿ ಕುರಿತು ಕೆ.ಐಎಡಿಬಿಗೆ ಅಪ್ರೂಡ್ ಡಿಪಿಆರ್‍ನೊಂದಿಗೆ ಅರ್ಜಿ ಸಲ್ಲಿಸಿದರೆ, ಎರಡು ಎಕರೆಯವರೆಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪರಿಶೀಲನೆ ನಡೆದು ಭೂಮಿ ಹಂಚಿಕೆಯಾಗಲಿದೆ. ಭೂಮಿ ಪಡೆದ ಐದು ವರ್ಷಗಳಲ್ಲಿ ಸಂಬಂಧಪಟ್ಟ ಉದ್ದಿಮೆ ಪ್ರಾರಂಭವಾದರೆ ಸದರಿ ಭೂಮಿ ನಿಮಗೆ ಕ್ರಯಕ್ಕೆ ನೀಡಲಾಗುವುದು. ಪ್ರಧಾನ ಮಂತ್ರಿ ಉದ್ಯೊಗ ಸೃಜನ ಯೋಜನೆ, ಮುದ್ರಾ, ಕೆ.ಎಸ್.ಎಫ್‍ಸಿ ಸೇರಿದಂತೆ ಹಲವು ಸಂಸ್ಥೆಗಳಿಗೆ ಆರ್ಥಿಕ ಸಹಕಾರ ದೊರೆಯಲಿದೆ. ಇದನ್ನು ಎಲ್ಲರೂ ಬಳಸಿಕೊಳ್ಳಬೇಕೆಂದರು.
ಕರ್ನಾಟಕ ಕೈಗಾರಿಕಾ ಹಣಕಾಸು ನಿಗಮದ ಶ್ರೀನಿವಾಸ್,ವಿ.ಪಿ.ಆಗ್ರೋ ಸೈನ್ಸ್‍ನ ಪಾರ್ಥಸಾರಥಿ,ಸಿದ್ದಗಂಗಾ ಇನ್‍ಕ್ಯೂಬೇಷನ್ ಸೆಂಟರ್‍ನ ಶ್ರೀಕಾಂತ್ ನಾಯರ್,ಕ್ರೋಮೆಡ್ ಬೈಯೋ ಸೈನ್ಸ್‍ನ ನಿರ್ದೇಶಕರುಗಳಾದ ರಾಜೇಶ್, ಉಮಾಶಂಕರ್, ಆಶ್ವಿನಿ ಮತ್ತಿತರರುಯುವಜನರಿಗೆ ಕೈಗಾರಿಕೆಗಳ ಕುರಿತು ಮಾಹಿತಿ ನೀಡಿದರು. ಜಿಲ್ಲೆಯ ವಿವಿಧ ಕಾಲೇಜುಗಳ ನೂರಾರು ಬಿ.ಎಸ್.ಸಿ, ಎಂ.ಎಸ್ಸಿ,ಪಾರ್ಮಸಿ ಹಾಗೂ ಪ್ಯಾರಾ ಮೆಡಿಕಲ್ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರುಗಳು ಪಾಲ್ಗೊಂಡಿದ್ದರು.