ತುಮಕೂರು: ಹಾವುಗಳ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯ. ಹಾವುಗಳು ಪರಿಸರ ಸಮತೋಲನದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಹಾವುಗಳ ಬಗ್ಗೆ ಜಾಗೃತಿ ಮೂಡಿಸುವುದರಿಂದ, ಅವುಗಳನ್ನು ಸಂರಕ್ಷಿಸಲು ಮತ್ತು ಅವರ ಬಗ್ಗೆ ತಪ್ಪಾದ ತಿಳುವಳಿಕೆಗಳನ್ನು ಹೋಗಲಾಡಿಸಲು ಸಹಾಯವಾಗುತ್ತದೆ ಎಂದು ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವೆ ನಾಹಿದಾ ಜûಮ್ ಜûಮ್ ತಿಳಿಸಿದರು.
ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಯುವ ರೆಡ್ಕ್ರಾಸ್ ಘಟಕದ ವತಿಯಿಂದ ಬುಧವಾರ ನಡೆದ ‘ಹಾವು ಮತ್ತು ನಾವು’ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಎಲ್ಲಾ ಹಾವುಗಳು ವಿಷಕಾರಿ ಅಲ್ಲ. ವಿಷಕಾರಿ ಹಾವುಗಳ ಬಗ್ಗೆ ಜಾಗೃತಿ ಇಟ್ಟುಕೊಳ್ಳುವುದು ಮತ್ತು ಅವುಗಳ ಕಡಿತವನ್ನು ತಡೆಗಟ್ಟಲು ಕ್ರಮಗಳನ್ನು ತೆಗೆದುಕೊಳ್ಳುವುದು ಮುಖ್ಯ ಎಂದರು.
ವೀರೋರ್ ಆರ್ಗನೈಜೇಷನ್ ಸಹಸಂಸ್ಥಾಪಕ ವಿಪಿನ್ ರಾಯ್ ಮಾತನಾಡಿ ಹಾವುಗಳನ್ನು ಕೊಲ್ಲುವುದು ಪರಿಸರಕ್ಕೆ ಹಾನಿಕಾರಕ. ಹಾವುಗಳನ್ನು ಸಂರಕ್ಷಿಸಲು ಮತ್ತು ಅವರ ಬದುಕನ್ನು ಕಾಪಾಡಲು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಹಾವು ಕಡಿತದ ಬಗ್ಗೆ ಜಾಗೃತಿ ಮೂಡಿಸುವುದರಿಂದ, ಕಡಿತಕ್ಕೆ ಒಳಗಾದವರಿಗೆ ಸರಿಯಾದ ಚಿಕಿತ್ಸೆಯನ್ನು ನೀಡಲು ಸಹಾಯವಾಗುತ್ತದೆ. ಹಾವು ಕಡಿತದ ನಂತರ, ವೈದ್ಯರನ್ನು ಸಂಪರ್ಕಿಸುವುದು ಮತ್ತು ಸರಿಯಾದ ಚಿಕಿತ್ಸೆಯನ್ನು ಪಡೆಯುವುದು ಮುಖ್ಯ ಎಂದರು.
ಪರೀಕ್ಷಾಂಗ ಕುಲಸಚಿವ ಪ್ರೊ. ಕೆ. ಪ್ರಸನ್ನಕುಮಾರ್ ಮಾತನಾಡಿ, ಗ್ರಾಮೀಣ ಪ್ರದೇಶಗಳ ಮಕ್ಕಳಲ್ಲಿ ಹಾವುಗಳ ಬಗ್ಗೆ ಜಾಗೃತಿ ಮೂಡಿಸಬೇಕು, ಏಕೆಂದರೆ ಅಲ್ಲಿ ಹಾವು ಕಡಿತದ ಪ್ರಕರಣಗಳು ಹೆಚ್ಚು ಕಂಡುಬರುತ್ತವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಂಶುಪಾಲಾರದ ಡಾ. ದಾಕ್ಷಾಯಿಣಿ ಜಿ. ಅವರು ಮಾತನಾಡಿ ಹಾವುಗಳು ಪರಿಸರ ವ್ಯವಸ್ಥೆಗೆ ಹೇಗೆ ಮುಖ್ಯ ಎಂಬುದನ್ನು ಯುವಕರಿಗೆ ತಿಳಿಸುವ ಮೂಲಕ ಹಾವುಗಳನ್ನು ಸಂರಕ್ಷಿಸುವ ಬಗ್ಗೆ ಜಾಗೃತಿ ಮೂಡಿಸಬಹುದು. ಹಾವು ಕಡಿತದ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಹಾವು ಕಡಿತದ ಘಟನೆಗಳನ್ನು ತಡೆಯಬಹುದು ಎಂದರು.
ಯುವ ರೆಡ್ಕ್ರಾಸ್ ಘಟಕದ ಕಾರ್ಯಕ್ರಮ ಅಧಿಕಾರಿ ಡಾ. ಪಲ್ಲವಿ ಎಸ್. ಕುಸುಗಲ್ಲ, ಸದಸ್ಯರಾದ ರಾಮು ಹೆಚ್, ಡೈಸೆನ್ ಪಿ.ಟಿ., ಮಂಜುಳಾ ದೇವಿ. ಉಪಸ್ಥಿತರಿದ್ದರು.