ಕಾಲ್ತುಳಿತ ಪ್ರಕರಣ-ಸಿಎಂ, ಡಿಸಿಎಂ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ತುಮಕೂರು: ತರಾತುರಿಯಲ್ಲಿ ಆರ್‍ಸಿಬಿ ವಿಜಯೋತ್ಸವ ಆಚರಿಸಲುಹೋಗಿ ಉಂಟಾದ ಕಾಲ್ತುಳಿತದಿಂದ 11 ಮಂದಿ ಅಮಾಯಕ ಅಭಿಮಾನಿಗಳ ಸಾವಿಗೆ ಕಾರಣವಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ಮುಖಂಡರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಬಿಜಿಎಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸರ್ಕಾರದ ವಿರುದ್ಧ ಘೋಷಣೆ ಕೋಗುತ್ತಾ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಶಾಸಕ ಬಿ.ಸುರೇಶ್‍ಗೌಡರು, ಎಲ್ಲಾ ವಿಚಾರದಲ್ಲೂ ಅನಗತ್ಯ ಪ್ರವೇಶ ಮಾಡಿ ಮಾತನಾಡುವ ಸಂತೋಷ್ ಲಾಡ್, ಪ್ರಿಯಾಂಕ್ ಖರ್ಗೆ ಅವರು ಆರ್‍ಸಿಬಿ ವಿಜಯೋತ್ಸವದ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ದುರ್ಘಟನೆ ಬಗ್ಗೆ ಯಾಕೆ ಮಾತನಾಡುತ್ತಿಲ್ಲ? ಈ ದುರಂತಕ್ಕೆ ತಮ್ಮ ಸರ್ಕಾರವೇ ಹೊಣೆ ಎಂದು ಅವರಿಗೂ ಗೊತ್ತಿದೆ ಹಾಗಾಗಿ ಬಾಯಿಬಿಡುತ್ತಿಲ್ಲ ಎಂದರು.

ಯಾವುದೇ ಪೂರ್ವ ಸಿದ್ಧತೆ ಮಾಡಿಕೊಳ್ಳದೆ ಸರ್ಕಾರ ಆರ್‍ಸಿಬಿ ವಿಜಯೋತ್ಸವ ಆಯೋಜಿಸಿದ್ದು ಕಾಲ್ತುಳಿತದಲ್ಲಿ 11 ಮಂದಿ ಬಲಿಯಾದರು. ದರಂತದ ಹೊಣೆಯಿಂದ ತಪ್ಪಿಸಿಕೊಳ್ಳಲು ಪ್ರಮಾಣಿಕ ಪೊಲೀಸ್ ಅಧಿಕಾರಿ ದಯಾನಂದ್ ಹಾಗೂ ಇತರೆ ಪೊಲೀಸರ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಾರೆ. ಮೃತರ ಕುಟುಂಬಕ್ಕೆ ಮೊದಲು 10 ಲಕ್ಷ ಘೋಷಿಸಿ ನಂತರ 25 ಲಕ್ಷ ರೂ. ಪರಿಹಾರ ಘೋಷಿಸಿದರು. ಆರ್‍ಸಿಬಿ ಗೆಲುವವನ್ನು ರಾಜಕೀಯ ಲಾಭವಾಗಿ ಬಳಸಿಕೊಳ್ಳಲುಹೋಗಿ ಅಮಾಯಕರನ್ನು ಬಲಿಕೊಟ್ಟ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಸುರೇಶ್‍ಗೌಡ ಒತ್ತಾಯಿಸಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್ ಮಾತನಾಡಿ, ಆರ್‍ಸಿಬಿ ವಿಜಯೋತ್ಸವ ಕಾರ್ಯಕ್ರಮವನ್ನು ವಿಧಾನಸೌಧದ ಎದುರು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಹೀಗೆ ಎರಡು ಮೂರು ಕಡೆ ಮಾಡಿದರೆ ಆಗಮಿಸಿದ್ದ ಲಕ್ಷಾಂತರ ಅಭಿಮಾನಿಗಳನ್ನು ಪೊಲೀಸರು ಹೇಗೆ ನಿಯಂತ್ರಿಸಿಯಾರು? ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯೇ ಈ ಕಾರ್ಯಕ್ರಮ ಆಯೋಜನೆ ಮಾಡಿ ಆಗಿರುವ ದುರಂತಕ್ಕೆ ಅವರೇ ನೇರ ಹೊಣೆ ಎಂದರು.

ಕಾಲ್ತುಳಿತ ದುರಂತಕ್ಕೆ ತಮ್ಮ ತಪ್ಪು ನಿರ್ಧಾರ ಕಾರಣವಾಗಿರುವಾಗ ಅದರ ನೈತಿಕ ಹೊಣೆ ಹೊರಬೇಕಾದ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಅದನ್ನು ಪೊಲೀಸ್ ಅಧಿಕಾರಿಗಳ ತಲೆಕಟ್ಟಿ ಅವರನ್ನು ಅಮಾನತು ಮಾಡಿರುವುದು ಖಂಡನೀಯ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ನಗರ ಅಧ್ಯಕ್ಷ ಧನುಷ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ್‍ಗೌಡ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ನವಚೇತನ್, ಒಬಿಸಿ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ವೇದಮೂರ್ತಿ, ಮುಖಂಡರಾದ ಟಿ.ಹೆಚ್.ಹನುಮಂತರಾಜು, ಹೆಚ್.ಎಂ.ರವೀಶಯ್ಯ, ಮಲ್ಲಿಕಾರ್ಜುನ್, ಪುಟ್ಟರಾಜು, ನಂಜುಂಡಪ್ಪ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *