ತುಮಕೂರು : ಜಿಲ್ಲೆಯಲ್ಲಿ ಜಲ್ ಜೀವನ್ ಮಿಷನ್ ಹಾಗೂ ಅಮೃತ್ ಯೋಜನೆಯಡಿ ಕೈಗೆತ್ತಿಕೊಂಡಿರುವ ಶುದ್ಧ ಕುಡಿಯುವ ನೀರು ಹಾಗೂ ಒಳಚರಂಡಿ ವ್ಯವಸ್ಥೆಯ ಕಾಮಗಾರಿಗಳನ್ನು ಎಸ್‍ಒಪಿ(ಸ್ಟ್ಯಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್-ಪ್ರಮಾಣಿತ ಕಾರ್ಯಾಚರಣಾ ವಿಧಾನ) ಪ್ರಕಾರ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದರು.
ಗುರುವಾರ ಜಿಲ್ಲಾಧಿಕಾರಿ ಕಚೇರಿ ಕೇಸ್ವಾನ್ ಸಭಾಂಗಣದಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಸಭೆ ನಡೆಸಿ ಮಾತನಾಡಿದ ಅವರು ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಸಲುವಾಗಿ ಜಿಲ್ಲೆಯಲ್ಲಿ ಕೈಗೊಂಡಿರುವ ಜಲ್ ಜೀವನ್ ಮಿಷನ್ ಯೋಜನೆಯಡಿ ಪ್ರಸ್ತುತ 1,598 ಕಾಮಗಾರಿಗಳು ಪೂರ್ಣಗೊಂಡಿದ್ದು, ಇನ್ನೂ 1,421 ಕಾಮಗಾರಿಗಳು ಹಾಗೂ ಪಾವಗಡ, ಮಧುಗಿರಿ, ಕೊರಟಗೆರೆ ತಾಲ್ಲೂಕುಗಳಲ್ಲಿ ಕೈಗೊಂಡಿರುವ ಅಮೃತ್ ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಗತಿಯಲ್ಲಿರುವ ಈ ಎಲ್ಲ ಕಾಮಗಾರಿಗಳನ್ನು ಎಸ್‍ಒಪಿ ಅನ್ವಯ ಕಾರ್ಯಗತಗೊಳಿಸಬೇಕು ಎಂದು ಹೇಳಿದರು.
ಕಾಮಗಾರಿ ನಡೆಯುವ ಸ್ಥಳದಲ್ಲಿ ಶುದ್ಧ ಕುಡಿಯುವ ನೀರಿಗೆ ಕೊಳಚೆ ನೀರು ಸೇರದಂತೆ ಅಗತ್ಯ ಮುಂಜಾಗ್ರತಾ ಕ್ರಮವಹಿಸಬೇಕು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಬೇಕೆಂದು ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಸುಮಾರು 28,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿರುವ ಪೂರ್ವ ಮುಂಗಾರು ಹಾಗೂ ಇತರೆ ಬೆಳೆಗಳು ಈಗಾಗಲೇ ಹೂ ಬಿಡುವ ಹಂತದಲ್ಲಿದ್ದು, ಮುಂದಿನ ಒಂದು ವಾರದೊಳಗೆ ಮಳೆ ಬಾರದಿದ್ದರೆ, ಚಿಕ್ಕನಾಯಕನಹಳ್ಳಿ, ತುರುವೇಕೆರೆ ಮತ್ತು ತಿಪಟೂರು ತಾಲೂಕುಗಳಲ್ಲಿ ಬೆಳೆ ನಷ್ಟ ಉಂಟಾಗುವ ಸಾಧ್ಯತೆ ಇದ್ದು, ಕೃಷಿ ಇಲಾಖೆಯ ಅಧಿಕಾರಿಗಳು ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ಬೆಳೆ ಪರಿಸ್ಥಿತಿಯನ್ನು ಪರಿಶೀಲಿಸಬೇಕು. ಸರ್ವೆ ಮಾಡಿ ಮಾಹಿತಿಯನ್ನು ಬೆಳೆ ಸಮೀಕ್ಷೆ ಆ್ಯಪ್‍ನಲ್ಲಿ ದಾಖಲಿಸುವಂತೆ ರೈತರಲ್ಲಿ ಅರಿವು ಮೂಡಿಬೇಕೆಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಭು ಜಿ. ಮಾತನಾಡಿ ಜಿಲ್ಲೆಯಲ್ಲಿ ಕಡ್ಡಾಯವಾಗಿ ನೀರಿನ ಗುಣಮಟ್ಟ ಪರೀಕ್ಷೆ ನಡೆಸಬೇಕು. ಎಲ್ಲಾ ತಾಲೂಕು ಪಂಚಾಯತಿಗಳು ನೀರಿನ ಗುಣಮಟ್ಟ ಪರೀಕ್ಷೆ ವರದಿಗಳನ್ನು ಆನ್‍ಲೈನ್ ಪೆÇೀರ್ಟಲ್ ಮೂಲಕ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತಿ ಉಪ ಕಾರ್ಯದರ್ಶಿ ಸಂಜೀವಪ್ಪ, ಉಪ ವಿಭಾಗಾಧಿಕಾರಿ ಗೌರವ್ ಕುಮಾರ್ ಶೆಟ್ಟಿ, ತಹಶೀಲ್ದಾರ್ ರಾಜೇಶ್ವರಿ, ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.