ನಾಡಪ್ರಭುವಿನ ಜನಪರ ಆಡಳಿತ ನೀತಿ ಮಾದರಿಯಾಗಲಿ- ಆರ್.ಸಿ.ಆಂಜನಪ್ಪ

ತುಮಕೂರು : ನಾಡಪ್ರಭು ಕೆಂಪೇಗೌಡರ ಜನಪರವಾದ ಆಡಳಿತ ನೀತಿ, ಜಾತ್ಯತೀತ ನಿಲುವು, ದೂರದೃಷ್ಟಿಯ ಚಿಂತನೆ ಇಂದಿನ ರಾಜಕಾರಣಿಗಳಿಗೆ ಮಾದರಿ ಆಗಬೇಕು. ತಮ್ಮ ಆಡಳಿತದಲ್ಲಿ ಸರ್ವಜನಾಂಗವನ್ನು ಗೌರವಿಸಿ, ಅವರ ವೃತ್ತಿ, ಕಸುಬನ್ನು ಪ್ರೋತ್ಸಾಹಿ ಬೆಳೆಸಿದ ಕೆಂಪೇಗೌಡರು ಶ್ರೇಷ್ಠ ಆಡಳಿತಗಾರರು ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ ಹೇಳಿದರು.

ಶುಕ್ರವಾರ ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಕೆಂಪೇಗೌಡರ 516ನೇ ಜಯಂತಿ ಕಾರ್ಯಕ್ರಮದಲ್ಲಿ ನಾಡಪ್ರಭುವಿನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಬೆಂಗಳೂರು ನಿರ್ಮಾತೃ ಕೆಂಪೇಗೌಡರು 16ನೇ ಶತಮಾನದಲ್ಲೇ 65ಕ್ಕೂ ಹೆಚ್ಚು ಪೇಟೆಗಳು, 100ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಸಮಗ್ರ ನಗರ ಯೋಜನೆ ರೂಪಿಸಿ, ನೀರಿನ ವ್ಯವಸ್ಥೆ, ವೃತ್ತಿ, ವ್ಯಾಪಾರ ವಹಿವಾಟು ಬೆಳವಣಿಗೆಗೆ ಯೋಜನೆ ರೂಪಿಸಿ, ಸಾಮಾಜಿಕ ಬಲವರ್ಧನೆಗೆ ಭದ್ರಬೂನಾದಿ ಹಾಕಿದರು. ಅವರ ದೂರದೃಷ್ಟಿಯ ಫಲವಾಗಿ ಇಂದು ಬೆಂಗಳೂರು ಉದ್ಯಾನ ನಗರಿ, ತಂತ್ರಜ್ಞಾನ ನಗರಿ, ಉದ್ಯಮಗಳ ಕೇಂದ್ರವಾಗಿ ಲಕ್ಷಾಂತರ ಜನರಿಗೆ ಬದುಕು ನೀಡಿದೆ ಎಂದರು.

ನ್ಯಾಯ ನಿಷ್ಠೆ, ಧರ್ಮ ನಿಷ್ಠೆಯ ಆಡಳಿತ ನಡೆಸಿದ ಕೆಂಪೇಗೌಡರು ನಾಡಿಗೆ ಕೊಟ್ಟ ಕೊಡುಗೆ, ಆದರ್ಶ ಅಪಾರ. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೆಂಪೇಗೌಡರ ಆದರ್ಶಗಳನ್ನು ರೂಢಿಸಿಕೊಂಡು ಬಂದವರು. ದೇಶದ ಪ್ರಧಾನಿಯಾಗಿ ನಾಡಿನ ಜನರ ಕಣ್ಮಣಿಯಾಗಿರುವ ಮಹಾನ್ ನಾಯಕರಾಗಿದ್ದಾರೆ ಎಂದು ಹೇಳಿದರು.

ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ, ಜಾತಿಯತೆಯ ಪ್ರಭಾವವಿದ್ದ ಕಾಲದಲ್ಲಿ ಎಲ್ಲಾ ಜಾತಿಯವರನ್ನು ಗೌರವಿಸಿ, ಸಮುದಾಯಗಳಿಗೆ ಪೇಟೆ ನಿರ್ಮಾಣ ಮಾಡಿ ಅವರಿಗೆ ನೆಲೆ ಕಲ್ಪಿಸಿದ ಕೆಂಪೇಗೌಡರು ಬೆಂಗಳೂರನ್ನು ಸರ್ವಜನಾಂಗದ ಶಾಂತಿಯ ತೋಟದ ಮಾದರಿಯಲ್ಲಿ ಕಟ್ಟಿದರು. ಅವರು ಕಟ್ಟಿಸಿದ ಕೋಟೆ, ದೇವಸ್ಥಾನಗಳು ಇಂದು ಸ್ಮಾರಕಗಳಾಗಿ ಉಳಿದಿವೆ. ಅವರ ಸೇವೆಯನ್ನು ನಾವು ಗೌರವದಿಂದ ಸ್ಮರಿಸಬೇಕು ಎಂದು ಹೇಳಿದರು.

ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಕೆಂಪೇಗೌಡರು ಸಾಮಾಜಿಕ ನ್ಯಾಯದ ಹರಿಕಾರರಾಗಿ, ಎಲ್ಲಾ ಜಾತಿ ಜನಾಂಗದವರು ಶಾಂತಿ, ಸೌಹಾರ್ದತೆಯಿಂದ ಬಾಳಲು ಅವಕಾಶ ಕಲ್ಪಿಸಿದ್ದರು. ಕೆರೆಕಟ್ಟೆ, ರಸ್ತೆ, ಚರಂಡಿ ಮುಂತಾದ ಅಗತ್ಯ ಸೌಲಭ್ಯಗಳನ್ನು ಒದಗಿಸಿ ಮಾದರಿ ನಗರವನ್ನಾಗಿ ಬೆಂಗಳೂರನ್ನು ನಿರ್ಮಾಣ ಮಾಡಿದ್ದರು. ಇಂತಹ ಅನೇಕ ಮಹನೀಯರು ನಾಡಿಗೆ ಮಹತ್ವದ ಕೊಡುಗೆ ನೀಡಿದ್ದಾರೆ, ಮಹನೀಯರನ್ನು ಜಾತಿಯಿಂದ ಗುರುತಿಸಿದೆ ಎಲ್ಲಾ ಜಾತಿಯವರೂ ಗೌರವಿಸಬೇಕು ಎಂದರು.

ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್‍ಪ್ರಸಾದ್ ಮಾತನಾಡಿ, ಜನಪರ ಆಡಳಿತ ನಡೆಸುವುದು ಹೇಗೆ ಎಂಬುದನ್ನು ಕೆಂಪೇಗೌಡರು ಆಗಲೇ ತಮ್ಮ ಕೆಲಸದ ಮೂಲಕ ತೋರಿಸಿದ್ದಾರೆ. ಈಗಿನ ಜನಪ್ರತಿನಿಧಿಗಳು ಕೆಂಪೇಗೌಡರ ನೀತಿ, ಆದರ್ಶಗಳನ್ನು ತಮ್ಮ ಕಾರ್ಯದಲ್ಲಿ ಅಳವಡಿಸಿಕೊಳ್ಳಲಿ ಎಂದರು.

ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಗಂಗಣ್ಣ, ಎಸ್.ಟಿ. ಘಟಕ ರಾಜ್ಯ ಉಪಾಧ್ಯಕ್ಷ ಸೋಲಾರ್ ಕೃಷ್ಣಮೂರ್ತಿ, ನಗರಪಾಲಿಕೆ ಮಾಜಿ ಸದಸ್ಯರಾದ ರಾಮಕೃಷ್ಣಪ್ಪ, ಟಿ.ಹೆಚ್.ಬಾಲಕೃಷ್ಣ, ಧರಣೇಂದ್ರಕುಮಾರ್, ಹೆಚ್.ಡಿ.ಕೆ.ಮಂಜುನಾಥ್, ಮುಖಂಡರಾದ ಯೋಗಾನಂದಕುಮಾರ್, ಕಳ್ಳಿಪಾಳ್ಯ ಲೋಕೇಶ್, ಕೆಂಪರಾಜು, ಎಲ್.ಟಿ.ಗೋವಿಂದರಾಜು, ಮಂಡಿ ಚಂದ್ರಣ್ಣ, ಮಧುಗೌಡ, ದಿವಾಕರ್, ತಾಹೇರಾ ಕುಲ್ಸಂ, ಯಶೋಧ, ಜಯಲಕ್ಷ್ಮಿ, ರಿಯಾಜ್ ಅಹ್ಮದ್ ಮೊದಲಾದವರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *