ತುಮಕೂರು : ವಿದ್ಯುತ್ ಅವಘಡಗಳನ್ನು ತಪ್ಪಿಸಲು ಸಾರ್ವಜನಿಕರು ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು ಎಂದು ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ನರಸಿಂಹಮೂರ್ತಿ ಮನವಿ ಮಾಡಿದರು.
ರಾಷ್ಟ್ರೀಯ ವಿದ್ಯುತ್ ಸುರಕ್ಷತಾ ಸಪ್ತಾಹ-2025ರ ಅಂಗವಾಗಿ ನಗರದ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಅವರ ಕಚೇರಿ ಆವರಣದಲ್ಲಿಂದು ಏರ್ಪಡಿಸಿದ್ದ ವಿದ್ಯುತ್ ಸುರಕ್ಷತಾ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಸಾರ್ವಜನಿಕರಿಗೆ ಅರಿವಿಲ್ಲದೆ ಹಲವಾರು ವಿದ್ಯುತ್ ಅವಘಡಗಳು ಸಂಭವಿಸುತ್ತವೆ. ಈ ನಿಟ್ಟಿನಲ್ಲಿ ವಿದ್ಯುತ್ ಬಳಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಈ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ವಿದ್ಯುತ್ ಅವಘಡಗಳಿಗೆ ಸಂಬಂಧಿಸಿದಂತೆ ದೂರು ಕರೆಗಳು ಬಂದರೆ ಬೆಸ್ಕಾಂನಿಂದ ತುರ್ತಾಗಿ ಸೇವೆ ಒದಗಿಸಲಾಗುವುದು ಎಂದು ಹೇಳಿದರು.

ಕಾರ್ಯನಿರ್ವಾಹಕ ಇಂಜಿನಿಯರ್ ಹಾಗೂ ವಿದ್ಯುತ್ ಪರಿವೀಕ್ಷಕ ಪ್ರಶಾಂತ್ ಕೂಡ್ಲಿಗಿ ಮಾತನಾಡಿ, ಸಾರ್ವಜನಿಕರೊಂದಿಗೆ ಹೆಚ್ಚಿನ ಸಂಪರ್ಕದಲ್ಲಿರುವ ಲೈನ್ ಮ್ಯಾನ್‍ಗಳು ವಿದ್ಯುತ್ ಅವಘಡ ಸಂಭವಿಸದಂತೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ ಜನಜಾಗೃತಿ ಮೂಡಿಸಬೇಕು. ವಿದ್ಯುತ್ ಸುರಕ್ಷತಾ ನಿಯಮಗಳನ್ನು ಪಾಲಿಸುವುದರಿಂದ ಉಂಟಾಗಬಹುದಾದ ವಿದ್ಯುತ್ ಅವಘಡಗಳನ್ನು ತಪ್ಪಿಸಬಹುದು ಎಂದರು.
ಬೆಸ್ಕಾಂ ಉಪವಿದ್ಯುತ್ ಪರಿವೀಕ್ಷಕ ಹಸೀನಾ ಭಾನು ಮಾತನಾಡಿ, ಲೈನ್‍ಮ್ಯಾನ್‍ಗಳು ವಿದ್ಯುತ್ ವಿತರಣೆ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರವಹಿಸುತ್ತಾರೆ. ವಿದ್ಯುತ್ ಕಂಬ, ವಿದ್ಯುತ್ ಮಾರ್ಗ, ವಿದ್ಯುತ್ ಪರಿವರ್ತಕಗಳ ಅಳವಡಿಕೆ, ದುರಸ್ತಿ ಮತ್ತು ನಿರ್ವಹಣೆಯ ಕೆಲಸಗಳಲ್ಲಿ ತೊಡಗಿರುವ ಅವರು ಅಪಾಯದ ಪರಿಸ್ಥಿತಿಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ಹಿನ್ನೆಲೆಯಲ್ಲಿ ಲೈನ್ ಮ್ಯಾನ್‍ಗಳು ಮುನ್ನೆಚ್ಚರಿಕಾ ಕ್ರಮವಾಗಿ ರಬ್ಬರ್ ಕೈಗವಸು, ಇನ್ಸುಲೇಟೆಡ್ ಬೂಟು, ಹೆಲ್ಮೆಟ್ ಮತ್ತು ಸೇಫ್ಟಿ ಬೆಲ್ಟ್, ಸೇಫ್ಟಿ ಗಾಗಲ್ ಮತ್ತು ಸ್ಪೆಷಲ್ ಜಾಕೆಟ್‍ಗಳನ್ನು ಬಳಸುವುದರಿಂದ ಅಪಾಯವನ್ನು ತಪ್ಪಿಸಬಹುದು ಎಂದು ತಿಳಿಸಿದರು.
ಜಾಥಾ ಕಾರ್ಯಕ್ರಮದಲ್ಲಿ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‍ಗಳಾದ ಪುರುμÉೂೀತ್ತಮ, ಮೆಹಬೂಬ್ ಶರೀಫ್, ಗುರುರಾಜ್, ವೆಂಕಟೇಶ್ ಬಿ.ಎಸ್, ಜಲ್ದೇಶ್ ಬಿ.ಎನ್., ಮಲ್ಲಣ್ಣ, ಶೈಲೇಂದ್ರ, ಸೇರಿದಂತೆ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.