ಹೃದಯಾಘಾತದಿಂದ ಗ್ರಾ.ಪಂ.ಸದಸ್ಯ ನೀಲಕಂಠಸ್ವಾಮಿ ನಿಧನ, ಜನರಲ್ಲಿ ಆತಂಕ ಮೂಡಿಸುತ್ತಿರುವ ಹೃದಯಾಘಾತ

ತುಮಕೂರು : ಹಾಸನ ಜಿಲ್ಲೆಯಲ್ಲಿ ಹೃದಯಾಘಾತದಿಂದ 22 ಜನ ಮೃತಪಟ್ಟಿರುವ ವರದಿಯ ಹಿಂದೆಯೇ ಜಿಲ್ಲೆಯಲ್ಲಿಯೂ ಕೇವಲ 35ವರ್ಷದ ಹೆಬ್ಬಾಕದ ಗ್ರಾಮ ಪಂಚಾಯಿತಿ ಸದಸ್ಯರಾದ ನೀಲಕಂಠಸ್ವಾಮಿ ಅವರು ಇಂದು ಬೆಳಿಗ್ಗೆ ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಇಂದು ಬೆಳಿಗ್ಗೆ ತಮ್ಮ ಮಗಳನ್ನು ಶಾಲೆಗೆ ಬಿಟ್ಟು ಮನೆಗೆ ಮರಳಿದ ತಕ್ಷಣ ನೀಲಕಂಠಸ್ವಾಮಿಯವರಿಗೆ ಎದೆನೋವು ಕಾಣಿಸಿಕೊಂಡು ಕುಸಿದು ಬಿದ್ದಿದ್ದು, ತುಮಕೂರಿನ ಆಸ್ಪತ್ರೆಗೆ ಕರೆ ತರುವ ವೇಳೆಗೆ ಮೃತಪಟ್ಟಿದ್ದಾರೆ.

ನೀಲಕಂಠಸ್ವಾಮಿಯವರು ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ರವಿಶಂಕರ್ ಹೆಬ್ಬಾಕ ಅವರ ಅಣ್ಣನ ಮಗನಾಗಿದ್ದು, ಮೃತರು ಪತ್ನಿ, ಮಗಳನ್ನು ಅಗಲಿದ್ದಾರೆ, ನೀಲಕಂಠಸ್ವಾಮಿ ಈ ಹಿಂದೆ ಊರುಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದರು, ಈಗ ಹಾಲಿ ಗ್ರಾ.ಪಂ.ಸದಸ್ಯರಾಗಿದ್ದರು.

ಮೃತರ ಅಂತ್ಯಕ್ರಿಯೆಯು ಜುಲೈ 2ರಂದು 11ಗಂಟೆಗೆ ಹೆಬ್ಬಾಕ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಶಾಸಕರ ಸಂತಾಪ:
ನೀಲಕಂಠಸ್ವಾಮಿ ನಿಧನಕ್ಕೆ ತುಮಕೂರು ಶಾಸಕರಾದ ಜಿ.ಬಿ.ಜ್ಯೋತಿಗಣೇಶ್ ಅವರು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದು, ಮೃತರ ಕುಟುಂಬ ಮತ್ತು ಸಂಬಂಧಿಕರಿಗೆ ದುಃಖ ತಡೆಯುವ ಶಕ್ತಿ ನೀಡಲೆಂದು ದೇವರಲ್ಲಿ ಪ್ರಾರ್ಥಿಸಿರುವುದಾಗಿ ತಿಳಿಸಿದ್ದಾರೆ.

ಕಳೆದ ಒಂದು ತಿಂಗಳಲ್ಲಿ ಹಾಸನ ಜಿಲ್ಲೆಯಲ್ಲಿ ಹೃದಯಾಘಾತಕ್ಕೆ 22ಮಂದಿ ಸಾವನ್ನಪ್ಪಿದ್ದು, ನಿನ್ನೆ ಒಂದೇ ದಿನ ಹಾಸನ ಜಿಲೆಯಲ್ಲಿ 4ಜನ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೃತಪಟ್ಟವರ ಪೈಕಿ 22ರಿಂದ 35 ವಯಸ್ಸಿನವರೇ ಹೆಚ್ಚಿನವರಾಗಿದ್ದು, ಇಂದು ತುಮಕೂರು ಜಿಲ್ಲೆಯಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದ ನೀಲಕಂಠಸ್ವಾಮಿಯವರು ಕೇವಲ 35ನೇ ವಯಸ್ಸಿನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.

ಇನ್ನೂ ಬದುಕಿ-ಬಾಳಬೇಕಾದಂತಹ ಯುವಕರೇ ಹೆಚ್ಚು ಹೃದಯಾಘಾತಕ್ಕೆ ಬಲಿಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *