ಪತ್ರಕರ್ತರಿಗೆ ಆಳವಾದ ಅಧ್ಯಯನ ಅಗತ್ಯ- ಎಸ್. ಪಿ. ಪದ್ಮಪ್ರಸಾದ್

ತುಮಕೂರು: ಪತ್ರಕರ್ತರಿಗೆ ಆಳವಾದ ಅಧ್ಯಯನ ಅಗತ್ಯ. ಅಧ್ಯಯನ ಮತ್ತು ಅದರ ಮೂಲಕ ಗಳಿಸಿಕೊಳ್ಳುವ ಜ್ಞಾನದಿಂದ ಸಮಾಜಕ್ಕೆ ಪ್ರಯೋಜನವಾಗುತ್ತದೆ ಎಂದು ಹಿರಿಯ ವಿದ್ವಾಂಸ ಡಾ. ಎಸ್. ಪಿ. ಪದ್ಮಪ್ರಸಾದ್ ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗ, ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗ ಹಾಗೂ ತುಮಕೂರು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಲ್ಲಿ ಮಂಗಳವಾರ ಆಯೋಜಿಸಿದ್ದ ‘ಕನ್ನಡ ಪತ್ರಿಕಾ ದಿನಾಚರಣೆ’ ಕಾರ್ಯಕ್ರಮದಲ್ಲಿ ‘ಮಾಧ್ಯಮ, ಭಾಷೆ ಮತ್ತು ಸಾಹಿತ್ಯ’ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಪತ್ರಕರ್ತನಿಗೆ ಸೂಕ್ಷ್ಮ ದೃಷ್ಟಿಕೋನ, ವೃತ್ತಿಯ ಕೌಶಲ್ಯ, ಸ್ವಂತಿಕೆ ಹಾಗೂ ಹಲವು ವಿಷಯಗಳಲ್ಲಿ ಜ್ಞಾನ ಇರಬೇಕು. ಮಾಧ್ಯಮ ಕ್ಷೇತ್ರದಲ್ಲಿ ಏನನ್ನಾದರೂ ಸಾಧಿಸಬೇಕು ಎಂದರೆ ವಿಸ್ತಾರವಾದ ಅಧ್ಯಯನ ಮತ್ತು ಸಂಶೋಧನೆ ಅಗತ್ಯ ಎಂದರು.

ಐವತ್ತು ವರ್ಷಗಳ ಹಿಂದೆ ಪತ್ರಿಕೋದ್ಯಮ ಸರಳವಾಗಿತ್ತು. ಆದರೆ ಪ್ರಸ್ತುತ ಪತ್ರಿಕೋದ್ಯಮ ಅತ್ಯಂತ ವೇಗದಿಂದ ಕೂಡಿದೆ. ಇದು ಮಾಧ್ಯಮ ಕ್ಷೇತ್ರದ ಪ್ರಗತಿಯೂ ಹೌದು, ಅನಾನುಕೂಲವೂ ಹೌದು. ಮಾಧ್ಯಮ ಕ್ಷೇತ್ರದಲ್ಲಿ ಅತಿಯಾದ ಸ್ಪರ್ಧೆ ಇರುವುದು ಕಳವಳಕಾರಿ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಎಂ. ವೆಂಕಟೇಶ್ವರಲು, ವೇಗವಾಗಿ ಬೆಳೆಯುತ್ತಿರುವ ಇಂದಿನ ಡಿಜಿಟಲ್ ಮಾಧ್ಯಮದಲ್ಲಿ ವರ್ಗಾವಣೆಯಾಗುತ್ತಿರುವುದು ಮಾಹಿತಿಯೇ ಹೊರತು ಜ್ಞಾನವಲ್ಲ. ಆದ್ದರಿಂದ ಯುವ ಪತ್ರಕರ್ತರು ಪತ್ರಿಕೆಗಳನ್ನು ಮತ್ತು ಪುಸ್ತಕಗಳನ್ನು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದರು.

ತುಮಕೂರು ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಕೊಟ್ರೇಶ್ ಎಂ. ಮಾತನಾಡಿ, ಪ್ರತಿದಿನ ಪತ್ರಿಕೆಗಳನ್ನು ಓದುವುದರಿಂದ ತಪ್ಪಿಲ್ಲದೆ ಬರೆಯುವ ಕಲೆ ಸಿದ್ಧಿಸುತ್ತದೆ. ಪ್ರಚಲಿತ ವಿದ್ಯಮಾನಗಳ ತಿಳುವಳಿಕೆ ಹೆಚ್ಚುತ್ತದೆ. ಇದು ಉಜ್ವಲ ಭವಿಷ್ಯಕ್ಕೆ ಸಹಕಾರಿ ಎಂದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಚಿ. ನಿ. ಪುರುಷೋತ್ತಮ್ ಮಾತನಾಡಿ, ಇಂದು ಸುಳ್ಳುಸುದ್ದಿಗಳ ಹಾವಳಿ ಹೆಚ್ಚಾಗಿದೆ. ಇವುಗಳನ್ನು ತಡೆದು ಜನರ ವಿಶ್ವಾಸಾರ್ಹತೆಯನ್ನು ಹೆಚ್ಚಿಸಿಕೊಳ್ಳುವತ್ತ ಮಾಧ್ಯಮಗಳು ಗಮನಹರಿಸಬೇಕು ಎಂದರು.

ವಿವಿ ಕಲಾ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ. ದಾಕ್ಷಾಯಿಣಿ ಅಧ್ಯಕ್ಷತೆ ವಹಿಸಿದ್ದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥ ಡಾ. ಸಿಬಂತಿ ಪದ್ಮನಾಭ ಕೆ. ವಿ. ಪ್ರಾಸ್ತಾವಿಕ ಮಾತುಗಳನ್ನಾಡಿದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಟಿ. ಇ. ರಘುರಾಮ್ ವಂದಿಸಿದರು. ಪ್ರದೀಪ ಡಿ.ಎಸ್. ನಿರೂಪಿಸಿದರು.

Leave a Reply

Your email address will not be published. Required fields are marked *