ಹತ್ತಿ ಬಿತ್ತನೆಗೆ ಕಾನೂನುಬದ್ಧ ಒಪ್ಪಂದ ಕಡ್ಡಾಯ: ಸೀಡ್ಸ್ ಕಂಪನಿಗಳಿಗೆ ಜಿಲ್ಲಾಧಿಕಾರಿ ಸೂಚನೆ

ತುಮಕೂರು : ಜಿಲ್ಲೆಯಲ್ಲಿ 4835 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯನ್ನು ಬೆಳೆಯುತ್ತಿದ್ದು, ಸಂಬಂಧಿಸಿದ ರೈತರೊಂದಿಗೆ ಹತ್ತಿ ಬೀಜ ಮಾರಾಟ ಕಂಪನಿಗಳು ಆಗಸ್ಟ್ 3ರೊಳಗೆ ಒಡಂಬಡಿಕೆ ಮಾಡಿಕೊಳ್ಳಬೇಕೆಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಸೂಚಿಸಿದ್ದಾರೆ.

 ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ರೈತರು ಹಾಗೂ ಹತ್ತಿ ಬೀಜ ಮಾರಾಟ ಕಂಪನಿಗಳ ಏಜೆಂಟರೊಂದಿಗೆ ಸಭೆ ನಡೆಸಿದ ಅವರು, ಶಿರಾ, ಮಧುಗಿರಿ, ಪಾವಗಡ ಮತ್ತು ಚಿಕ್ಕನಾಯಕನಹಳ್ಳಿ ತಾಲ್ಲೂಕುಗಳ ವ್ಯಾಪ್ತಿಯಲ್ಲಿ ಕೆಲವು ಖಾಸಗಿ ಬೀಜ ಮಾರಾಟ ಸಂಸ್ಥೆಗಳು ಹತ್ತಿ ಬೀಜಗಳನ್ನು ರೈತರಿಗೆ ನೀಡಿ ಕಾನೂನು ಬಾಹಿರವಾಗಿ ಬೀಜೋತ್ಪಾದನೆಯನ್ನು ಮಾಡಿಕೊಂಡು ಹಣ ನೀಡದೆ ರೈತರಿಗೆ ವಂಚಿಸಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಹತ್ತಿ ಬೀಜ ಮಾರಾಟ ಸಂಸ್ಥೆಗಳು ರೈತರೊಂದಿಗೆ ಕಡ್ಡಾಯವಾಗಿ ಒಪ್ಪಂದ ಮಾಡಿಕೊಳ್ಳಬೇಕೆಂದು ಅವರು ಬೀಜ ಕಂಪನಿಗಳಿಗೆ ಸೂಚಿಸಿದರು. 

ಬೀಜ ಮಾರಾಟ ಕಂಪನಿಗಳು ಹತ್ತಿ ಬೆಳೆಗಾರರಿಗೆ ಒಡಂಬಡಿಕೆಯಂತೆ ನೇರ ಬ್ಯಾಂಕ್ ಖಾತೆಗೆ ಹಣ ಪಾವತಿಸಬೇಕು. ಅಲ್ಲದೆ ರೈತರಿಂದ ಹತ್ತಿ ಬೀಜ ಖರೀದಿಸಿದ ನಂತರ ಬೀಜ ಅಧಿನಿಯಮದನ್ವಯ 3 ತಿಂಗಳ ಅವಧಿಯಲ್ಲೇ ಜಿಓಟಿ ಪರೀಕ್ಷೆಗೆ ಒಳಪಡಿಸಿ ನಿಗಧಿತ ಬೆಲೆಯ ಹಣವನ್ನು ರೈತರ ಖಾತೆಗೆ ಪಾವತಿಸಬೇಕು. ಹಣ ಪಾವತಿಯಲ್ಲಿ ವಿಳಂಬ ನೀತಿ ಅನುಸರಿಸಿದರೆ ಬೀಜ ಮಾರಾಟ ಕಂಪನಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ಜಿಲ್ಲಾ ಪೆÇಲೀಸ್ ಅಧೀಕ್ಷಕ ಕೆ.ವಿ. ಅಶೋಕ್ ಮಾತನಾಡಿ, ಮಾಹಿತಿಯಂತೆ ಜಿಲ್ಲೆಯಲ್ಲಿ ಹತ್ತಿ ಬೆಳೆಗೆ ಸಂಬಂಧಿಸಿದ 18 ಖಾಸಗಿ ಕಂಪನಿಗಳು ರೈತರೊಂದಿಗೆ ಒಪ್ಪಂದ ಮಾಡಿಕೊಂಡಿವೆ. ಅದರಂತೆ ಒಪ್ಪಂದದ ಪ್ರಕಾರ ರೈತರು ಬೆಳೆದ ಹತ್ತಿ ಬೀಜವನ್ನು ಸಂಪೂರ್ಣವಾಗಿ ಖರೀದಿಸಬೇಕು. ಖರೀದಿ ಮಾಡದ ಕಂಪನಿಗಳ ವಿರುದ್ಧ ಪ್ರಕರಣ ದಾಖಲಿಸಿ, ಲೈಸೆನ್ಸ್ ರದ್ದುಗೊಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

 ಪ್ರಕೃತಿಯ ಅನಾಹುತದಿಂದ  ಬೆಳೆ ನಾಶವಾದರೆ ಕಂಪನಿಯವರೇ ರೈತರಿಗೆ ಪರಿಹಾರ ನೀಡಬೇಕು. ಸಾಲದ ಒತ್ತಡದಿಂದ ರೈತರು ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳು ವರದಿಯಾದರೆ ಕಂಪನಿಗಳ ವಿರುದ್ಧ ಯಾವುದೇ ಮುಲಾಜಿಲ್ಲದೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರಲ್ಲದೆ,  ಅನಧಿಕೃತ ಅಥವಾ ಅನುಮೋದನೆ ಇಲ್ಲದ ಕಂಪನಿಗಳು ರೈತರಿಗೆ ಮೋಸ ಮಾಡುವ ಘಟನೆಗಳು ಕಂಡು ಬಂದಲ್ಲಿ  ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಖಡಕ್ ಸೂಚನೆ ನೀಡಿದರು.

ಸಭೆಯಲ್ಲಿ ಕೃಷಿ ಜಂಟಿ ನಿರ್ದೇಶಕ ರಮೇಶ್, ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಈಶ್ವರಪ್ಪ, ವಿವಿಧ ತಾಲ್ಲೂಕುಗಳ ಕೃಷಿ ಇಲಾಖೆ ಸಹಾಯಕ ನಿರ್ದೇಶಕರು, ರೈತ ಮುಖಂಡರು ಸೇರಿದಂತೆ ಮತ್ತಿತರರು ಹಾಜರಿದ್ದರು. 

Leave a Reply

Your email address will not be published. Required fields are marked *