ಎಕ್ಸ್  ಪ್ರೆಸ್  ಲಿಂಕ್ ಕೆನಾಲ್  ವೈಜ್ಞಾನಿಕ ಸಮೀಕ್ಷೆ ಗೆ ಒತ್ತಾಯ

ಬೆಂಗಳೂರು : ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಸಿ, ರೈತರ ಸಭೆಯಲ್ಲಿ ಸಮೀಕ್ಷೆಯ ವರದಿಯ ಬಗ್ಗೆ ಚರ್ಚಿಸಿ ತದ ನಂತರ ತೀರ್ಮಾನ ಕೈಗೊಳ್ಳಬೇಕೆಂದು ಒತ್ತಾಯಿಸಿರುವುದಾಗಿ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ತಿಳಿಸಿದರು.

ಜಿಲ್ಲೆಯ ಪಾಲಿಗೆ ಹಂಚಿಕೆಯಾಗಿರುವ ಹೇಮಾವತಿ ನೀರು ವಂಚನೆ ಆಗಲಿರುವ ಅವೈಜ್ಞಾನಿಕ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಕೈಬಿಡಬೇಕು. ಹೊಸ ಯೋಜನೆ ರೂಪಿಸಬೇಕೆಂದಿದ್ದರೆ ಇಂಡಿಯನ್ ಇನ್ ಸ್ಟಿಟೂಟ್ ಆಫ್ ಸೈನ್ಸ್ ಇಲ್ಲವೆ, ಧಾರವಾಡದ ಇಂಡಿಯನ್ ಇನ್ ಸ್ಟಿಟೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ತಜ್ಞರಿಂದ ಸಮೀಕ್ಷೆ ಮಾಡಿಸಿ ಆ ವರದಿಯ ಸಾಧಕ-ಬಾಧಕಗಳ ಆಧಾರದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಸರ್ಕಾರ ಮರುಪರಿಶೀಲನೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯ ಮಾಡಿರುವುದಾಗಿ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‌ಗೌಡ ತಿಳಿಸಿದ್ದಾರೆ.
ಹೇಮಾವತಿ ಲಿಂಕ್ ಕೆನಾಲ್ ಯೋಜನೆಯ ಸಾಧಕ-ಬಾಧಕ ಕುರಿತು ಉಪ ಮುಖ್ಯಮಂತ್ರಿ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ನಡೆದ ಸಭೆಯಲ್ಲಿ ಶಾಸಕ ಸುರೇಶ್‌ಗೌಡರೊಂದಿಗೆ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಜಿ.ಬಿ.ಜ್ಯೋತಿಗಣೇಶ್ ಅವರು ಲಿಂಕ್‌ಕೆನಾಲ್ ಯೋಜನೆ ಕೈಬಿಡುವಂತೆ ಒತ್ತಾಯ ಮಾಡಿದರು ಎಂದರು.

ಶಾಸಕ ಎಂ.ಟಿ.ಕೃಷ್ಣಪ್ಪ ಸಭೆಯಲ್ಲಿ ಮಾತನಾಡಿ, 2019ರಲ್ಲಿ ಈ ಯೋಜನೆಯನ್ನು ರದ್ದುಮಾಡಿ 600 ಕೋಟಿ ರೂ. ವೆಚ್ಚ ಮಾಡಿ ಹೇಮಾವತಿ ನಾಲೆಯನ್ನು ಆಧುನಿಕರಣ ಮಾಡಲಾಗಿದೆ. ಈಗ ಮತ್ತೆ ಒಂದು ಸಾವಿರ ಕೋಟಿ ರೂ. ಖರ್ಚು ಮಾಡಿ ಲಿಂಕ್ ಕೆನಾಲ್ ಯೋಜನೆ ಮಾಡುವ ಅವಶ್ಯಕತೆ ಏನಿದೆ ಎಂದು ಪ್ರಶ್ನಿಸಿದರು.
ಶಾಸಕ ಸುರೇಶ್‌ಗೌಡ ಮಾತನಾಡಿ, ಲಿಂಕ್ ಕೆನಾಲ್ ಯೋಜನೆ ಅವೈಜ್ಞಾನಿಕ ಎಂದು ಮೇ 30ರಂದು ನಡೆದ ಬೃಹತ್ ಹೋರಾಟ ಮಾಡಿದ್ದರ ಪರಿಣಾಮ ಸರ್ಕಾರ ಈ ಸಭೆ ಕರೆದಿದೆ. ಹೇಮಾವತಿ ನಾಲೆಯ 70ನೇ ಕಿ.ಮೀ. ಬಳಿಯಿಂದ ಹೇಮಾವತಿ ನಾಲೆಯ ತಳಮಟ್ಟದಿಂದ 10 ಅಡಿ ಕೆಳಭಾಗದಲ್ಲಿ 12 ಅಡಿ ವ್ಯಾಸದ ಪೈಪ್‌ಗಳನ್ನು ಅಳವಡಿಸಿ ನೀರು ತೆಗೆದುಕೊಂಡು ಹೋದರೆ, 70ನೇ ಕಿ.ಮೀ.ಯಿಂದ ಮುಂದೆ ಗುಬ್ಬಿ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಶಿರಾ, ಕೊರಟಗೆರೆ, ಮಧುಗಿರಿ ತಾಲ್ಲೂಕಿಗೆ ಹರಿದುಹೋಗುವ ನೀರಿನ ಹರಿವಿನ ವೇಗ ಕಡಿಮೆಯಾಗಿ ತಮ್ಮ ಪಾಲಿಗೆ ಹಂಚಿಕೆಯಾಗಿರುವ ನೀರು ದೊರೆಯುವುದೇ ಎಂಬ ಆತಂಕ ಜನರಲ್ಲಿದೆ ಎಂದರು.
ಕುಣಿಗಲ್‌ಗೆ 70ನೇ ಕಿ.ಮೀ.ಯಿಂದ 34.5 ಕಿ.ಮೀ ದೂರ ಪೈಪ್ ಲೈನ್ ಅಳವಡಿಸಿ 400 ಕ್ಯೂಸೆಕ್ಸ್ ನೀರು ತೆಗೆದುಕೊಂಡು ಹೋಗಲು 600ಕ್ಯೂಸೆಕ್ಸ್ ಸಾಮರ್ಥ್ಯದ ಪೈಪ್‌ಗಳನ್ನು ಅಳವಡಿಸಲು ಉದ್ದೇಶಿಸಿರುವುದು ಅವೈಜ್ಞಾನಿಕ ಹಾಗೂ ಅನ್ಯಾಯ. ಈ ಯೋಜನೆ ಕೈ ಬಿಡಬೇಕು. ಇಂಡಿಯನ್ ಇನ್ ಸ್ಟಿಟೂಟ್ ಆಫ್ ಸೈನ್ಸ್ ಅಥವಾ ಧಾರವಾಡದ ಇಂಡಿಯನ್ ಇನ್ ಸ್ಟಿಟೂಟ್ ಆಫ್ ಟೆಕ್ನಾಲಜಿ ಸಂಸ್ಥೆಯ ತಜ್ಞರಿಂದ ಸಮೀಕ್ಷೆಯ ವರದಿ ತಯಾರಿಸಿ, ನೀರಿನ ಆತಂಕ ಎದುರಿಸುತ್ತಿರುವ ಭಾಗದ ರೈತರ, ಸಾರ್ವಜನಿಕ ಮುಖಂಡರ ಸಭೆ ಕರೆದು ಚರ್ಚಿಸಿ ಸರ್ಕಾರ ಮುಂದಿನ ನಿರ್ಧಾರ ತೆಗೆದುಕೊಳ್ಳಲಿ ಎಂದು ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದ್ದಾಗಿ ಸುರೇಶ್‌ಗೌಡ ಹೇಳಿದರು.

ತುಮಕೂರು ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್, ಕೇಂದ್ರ ಜಲಶಕ್ತಿ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ, ಕೆನಾಲ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದರು.
ಕೆನಾಲ್ ಕಾಮಗಾರಿಗೆ ಸಭೆ ಒಪ್ಪಿದರೆ ನಾಳೆಯಿಂದಲೇ ಕಾಮಗಾರಿ ಆರಂಭಿಸುವುದಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸಭೆಯಲ್ಲಿ ಹೇಳುತ್ತಿದ್ದಂತೆ ಕೆಂಡಮಂಡಲವಾದ ಶಾಸಕ ಸುರೇಶ್‌ಗೌಡ, ನೀವು ಗೃಹ ಸಚಿವರಾಗಿ ಮಾತನಾಡಬೇಡಿ, ಜಿಲ್ಲೆಯ ಸಚಿವರಾಗಿ ಜಿಲ್ಲೆಯ ಜನರ ಹಿತಕಾಪಾಡಿ, ಜಿಲ್ಲೆಯ ಋಣ ತೀರಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.
ಬೆಂಗಳೂರು ಗ್ರಾಮಾಂತರ ಸಂಸದ ಡಾ.ಮಂಜುನಾಥ್, ಸರ್ಕಾರದ ದೆಹಲಿ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಡಾ.ರಂಗನಾಥ್, ಬಾಲಕೃಷ್ಣ, ವಿಧಾನಪರಿಷತ್ ಸದಸ್ಯ ಶ್ರೀನಿವಾಸ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು

Leave a Reply

Your email address will not be published. Required fields are marked *