ತುಮಕೂರು: ಹಾಲಿ ಇರುವ ಹೇಮಾವತಿ ನಾಲೆ ಮೂಲಕ ಕುಣಿಗಲ್ ತಾಲ್ಲೂಕಿಗೆ ಹಂಚಿಕೆ ಪ್ರಮಾಣದ ನೀರು ಹರಿಸಲು ಅವಕಾಶವಿದ್ದರೂ ರಾಜಕೀಯ ದುರುದ್ದೇಶದಿಂದ ರೂಪಿಸಿರುವ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ಅವಶ್ಯಕತೆಯಿಲ್ಲ, ಕೆನಾಲ್‍ನಿಂದ ಜಿಲ್ಲೆಯ ಆರೇಳು ತಾಲ್ಲೂಕುಗಳಿಗೆ ಹೇಮಾವತಿ ನೀರಿನ ಅನ್ಯಾಯವಾಗುತ್ತದೆ. ಇಂತಹ ಅನಾವಶ್ಯಕ ಹಾಗೂ ಮಾರಕವಾದ ಲಿಂಕ್ ಕೆನಾಲ್ ಯೋಜನೆಯನ್ನು ಈ ಕೂಡಲೇ ರದ್ದು ಮಾಡಬೇಕು, ಇಲ್ಲವಾದರೆ ಹೋರಾಟ ತೀವ್ರಗೊಳಿಸುವುದಾಗಿ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್‍ಗೌಡರು, ತುರುವೇಕೆರೆ ಶಾಸಕ ಎಂ.ಟಿ.ಕೃಷ್ಣಪ್ಪ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಶನಿವಾರ ನಗರದಲ್ಲಿ ಎಕ್ಸ್‍ಪ್ರೆಸ್ ಲಿಂಕ್ ಕೆನಾಲ್ ವಿರೋಧಿ ಹೋರಾಟ ಸಮಿತಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಇವರು, ಈ ಯೋಜನೆಯ ಕಾಮಗಾರಿಯನ್ನು ಆರಂಭಿಸುತ್ತೇವೆ ಎಂದು ಹೇಳಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರ ಹೇಳಿಕೆ ಖಂಡಿಸಿ, ಸಚಿವರು ಜಿಲ್ಲೆಯ ಜನರ ಹಿತ ಕಾಪಾಡಿ ಋಣ ತೀರಿಸಬೇಕು ಎಂದು ಒತ್ತಾಯಿಸಿದರು.
ಶಾಸಕ ಎಂ.ಟಿ.ಕೃಷ್ಣಪ್ಪ ಮಾತನಾಡಿ, ಕುಣಿಗಲ್ ತಾಲ್ಲೂಕಿಗೆ ನಾಗಮಂಗಲ ನಾಲೆಯಿಂದ 2.3 ಟಿಎಂಸಿ ಹಾಗೂ ತುಮಕೂರು ನಾಲೆಯಿಂದ 2.5 ಟಿಎಂಸಿ ಸೇರಿ ಸುಮಾರಿ 5 ಟಿಎಂಸಿ ನೀರು ಹರಿಸಲಾಗಿದೆ. ನಾಲೆಯ ಅಡಚಣೆ ನಿವಾರಿಸಿ, ಆಧುನಿಕರಣಗೊಳಿಸಿದರೆ ಹೆಚ್ಚಿನ ಪ್ರಮಾಣದ ನೀರನ್ನು ಕುಣಿಗಲ್‍ಗೆ ಹರಿಸಬಹುದು. ಹೀಗಿದ್ದರೂ ಕುಣಿಗಲ್ ಶಾಸಕ ಡಾ.ರಂಗನಾಥ್ ಅವರು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ, ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಮನವೊಲಿಸಿ ಲಿಂಕ್ ಕೆನಾಲ್ ಯೋಜನೆ ಮೂಲಕ ನೀರು ತೆಗೆದುಕೊಂಡು ಹೋಗುವ ಕೆಟ್ಟ ಪ್ರಯತ್ನ ಮಾಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಲಿಂಕ್ ಕೆನಾಲ್ ಯೋಜನೆ ಆಗಲು ಬಿಡುವುದಿಲ್ಲ. ಕೆನಾಲ್ ವಿರುದ್ಧ ಹೋರಾಟ ತೀವ್ರಗೊಳಿಸುತ್ತೇವೆ. ಲಾಠಿ ಚಾಜ್, ಗೋಲಿಬಾರ್‍ಗೂ ಜಗ್ಗುವುದಿಲ್ಲ ಎಂದರು.
ಜೈಪ್ರಕಾಶ್ ಕೆಟ್ಟ ವ್ಯಕ್ತಿ
ಲಿಂಕ್ ಕೆನಾಲ್‍ನ ಕೆಟ್ಟ ಯೋಜನೆಗೆ ಕಾರಣರಾದವರು ನಿವೃತ್ತ ಇಂಜಿನಿಯರ್ ತುಮಕೂರಿನವರೇ ಆದ ಜೈಪ್ರಕಾಶ್. ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿ ಲಿಂಕ್ ಕೆನಾಲ್ ಯೋಜನೆ ಮಾಡಿ ಈ ಭಾಗದ ಜನರಿಗೆ ಅನ್ಯಾಯ ಮಾಡುತ್ತಿರುವ ಜೈಪ್ರಕಾಶ್ ಅತ್ಯಂತ ಕೆಟ್ಟ ವ್ಯಕ್ತಿ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಟೀಕಿಸಿದರು.
ಕಳ್ಳ ಮಾರ್ಗ ಬೇಡ
ಶಾಸಕ ಬಿ.ಸುರೇಶ್‍ಗೌಡರು ಮಾತನಾಡಿ, ನಾಲೆ ಮೂಲಕ ಕುಣಿಗಲ್‍ಗೆ ನೀರು ತೆಗೆದುಕೊಂಡು ಹೋಗಲು ಅವಕಾಶವಿದ್ದರೂ ಎಕ್ಸ್‍ಪ್ರೆಸ್ ಕೆನಾಲ್ ನಿರ್ಮಿಸಿ ಕಳ್ಳ ಮಾರ್ಗದಲ್ಲಿ ತೆಗೆದುಕೊಂಡು ಹೋಗುವುದಕ್ಕೆ ಅವಕಾಶ ನೀಡುವುದಿಲ್ಲ. ಕೆನಾಲ್ ಯೋಜನೆ ಸ್ಥಗಿತಗೊಳಿಸಬೇಕೆಂದು ನಡೆದ ಹೋರಾಟದ ನಂತರ ಸರ್ಕಾರ ಒಂದು ತಿಂಗಳ ಕಾಲಾವಕಾಶ ಕೇಳಿ ಕಾಮಗಾರಿ ಸ್ಥಗಿತಗೊಳಿಸಿತ್ತು. ಮುಖ್ಯಮಂತ್ರಿ ನೇತೃತ್ವದಲ್ಲಿ ಈ ಭಾಗದ ಚುನಾಯಿತ ಪ್ರತಿನಿಧಿಗಳು ರೈತ ಮುಖಂಡರು, ಹೋರಾಟಗಾರರ ಸಭೆ ಕರೆಯಬೇಕಾಗಿತ್ತು. ಆದರೆ ಡಿಸಿಎಂ ಅಧ್ಯಕ್ಷತೆಯಲ್ಲಿ ಕರೆದ ಸಭೆಗೆ ಕೇಂದ್ರ ಸಚಿವ ಸೋಮಣ್ಣನವರ ಮನವಿ ಮೇರೆಗೆ ಹೋದೆವು. ಡಿಸಿಎಂ ನೇತೃತ್ವದ ಸಭೆಯಲ್ಲಿ ಕಟುಕನಿಗೆ ಕುರಿ ಪ್ರಾಣ ಭಿಕ್ಷೆ ಕೇಳಿದಂತಾಗಿತ್ತು ಎಂದರು.
ಕುಣಿಗಲ್ ಶಾಸಕರು ಕುಣಿಗಲ್‍ಗೆ ಅನ್ಯಾಯವಾಗಿದೆ ಎಂದು ಬಿಂಬಿಸಿ ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆಯಬೇಕು. ಜಿಲ್ಲೆಯ ಸಮಸ್ಯೆ ಬಗ್ಗೆ ತಿಳಿಸಿ ಯೋಜನೆ ರದ್ದುಗೊಳಿಸಲು ಒತ್ತಾಯಿಸಬೇಕು. ನಾಲೆ ಮೂಲಕ ಕುಣಿಗಲ್‍ಗೆ ಪೂರ್ಣ ಪ್ರಮಾಣದ ನೀರು ಹರಿಸಲು ಅವಕಾಶವಿದೆ. ಆದರೂ ಹಠಮಾರಿ ಧೋರಣೆಯಿಂದ ಲಿಂಕ್ ಕೆನಾಲ್ ಮಾಡಲು ಹೊರಟಿರುವುದನ್ನು ಒಪ್ಪುವುದಿಲ್ಲ, ಯಾವುದೆÉೀ ರೀತಿಯ ಹೋರಾಟಕ್ಕೂ ಸಿದ್ಧ ಎಂದರು.
ಲಿಂಕ್ ಕೆನಾಲ್‍ಗೆ ಹತ್ತು ಅಡಿ ವ್ಯಾಸದ ಲಾರಿ ಗಾತ್ರದ ಪೈಪ್‍ಳನ್ನು ಅಳವಡಿಸಿ ನೀರು ಹರಿಸಿದರೆ ನಾಲೆಯ ಮುಂದಿನ ಭಾಗದ ಗುಬ್ಬಿ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಶಿರಾ, ಕೊರಟಗೆರೆ, ಮಧುಗಿರಿ ಭಾಗಕ್ಕೆ ನೀರು ಹರಿಯದೆ ಹಾಹಾಕಾರ ಉಂಟಾಗುತ್ತದೆ. ಆಗ ಜನ ನೀರಿಗಾಗಿ ದಂಗೆ ಏಳುವ ಪರಿಸ್ಥಿತಿ ಬರುತ್ತದೆ ಎಂದು ಸುರೇಶ್‍ಗೌಡರು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಶಾಸಕರ ಪಲಾಯನ
ರೈತ ಸಂಘದ ಜಿಲ್ಲಾಧ್ಯಕ್ಷ ಎ.ಗೋವಿಂದರಾಜು ಮಾತನಾಡಿ, ಜಿಲ್ಲೆಯ ಜನರಿಗೆ ಮಾರಕವಾಗಿರುವ ಲಿಂಕ್ ಕೆನಾಲ್ ವಿಚಾರದಲ್ಲಿ ಕೆಲವು ಶಾಸಕರು ಪಲಾಯನವಾದ ಅನುಸರಿಸಿದ್ದಾರೆ. ಈಗಲಾದರೂ ಮೌನಮುರಿದು ಜನರ ಪರವಾಗಿ ನಿಲ್ಲಬೇಕು. ಸಚಿವ ಡಾ.ಜಿ.ಪರಮೇಶ್ವರ್ ಅವರು ಲಿಂಕ್ ಕೆನಾಲ್ ಯೋಜನೆಯನ್ನು ಮಾಡಿಯೇ ತೀರುತ್ತೇನೆ ಎಂದು ಹೇಳಿರುವುದು ಖಂಡನೀಯ. ಅದರ ಪರಿಣಾಮಗಳನ್ನು ಮುಂದೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಡಾ.ಪರಮೇಶ್ ರಾಜೀನಾಮೆ ನೀಡಲಿ
ಬಿಜೆಪಿ ಮುಖಂಡ ಗುಬ್ಬಿಯ ಎಸ್.ಡಿ.ದಿಲೀಪ್‍ಕುಮಾರ್ ಮಾತನಾಡಿ, ಜಿಲ್ಲಾ ಸಚಿವರಾದ ಡಾ.ಜಿ.ಪರಮೇಶ್ವರ್ ಅವರು ಹೇಮಾವತಿ ನೀರಿನ ವಿಚಾರದಲ್ಲಿ ಜಿಲ್ಲೆಯ ಜನರ ಹಿತ ಕಾಪಾಡಬೇಕು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಲಿಂಕ್ ಕೆನಾಲ್ ವಿರುದ್ಧದ ಹೋರಾಟದಲ್ಲಿ ಭಾಗಿಯಾಗಿ ತಾವು ಜನರ ಪರ ಎಂದುದನ್ನು ಸಾಬೀತುಪಡಿಸಲಿ ಎಂದು ಆಗ್ರಹಿಸಿದರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರವಿಶಂಕರ್ ಹೆಬ್ಬಾಕ, ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಬಿಜೆಪಿ ಮುಖಂಡ ಚಂದ್ರಶೇಖರಬಾಬು, ರೈತಮುಖಂಡ ವೆಂಕಟೇಗೌಡ ಹಾಜರಿದ್ದರು.