ತುಮಕೂರು- ಶ್ರೀ ಅನ್ನಪೂರ್ಣೇಶ್ವರಿ ಆಹಾರ ವಿತರಣಾ ಕೇಂದ್ರದಿಂದ ಪಾವಗಡ ರಾಮಕೃಷ್ಣ ಸೇವಾಶ್ರಮ ಹಾಗೂ ಆದರ್ಶ ನಗರದ ಶಿರಡಿ ಸಾಯಿ ಮಂದಿರದ ಸಹಯೋಗದಲ್ಲಿ ನಗರದ ಬಿ.ಹೆಚ್. ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿಂದು ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ವಿದ್ಯುಕ್ತವಾಗಿ ಚಾಲನೆ ನೀಡಲಾಯಿತು.
ಸರ್ಕಾರಿ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಗಾಗಿ ಮಧ್ಯಾಹ್ನದ ಬಿಸಿಯೂಟ ಯೋಜನೆಯನ್ನು ಗುರುಪೂರ್ಣಿಮೆಯ ದಿನವಾದ ಇಂದು ಪಾವಗಡ ರಾಮಕೃಷ್ಣ ಸೇವಾಶ್ರಮದ ಮುಖ್ಯಸ್ಥರಾದ ಸ್ವಾಮಿ ಜಪಾನಂದಜೀ, ಆಹಾರ ಸಮಿತಿ ಸದಸ್ಯರಾದ ಎಸ್. ನಾಗಣ್ಣ, ಎಚ್.ಜಿ. ಚಂದ್ರಶೇಖರ್ ರವರ ಸಮ್ಮುಖದಲ್ಲಿ 2025-26ನೇ ಸಾಲಿಗೆ ಆರಂಭಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸ್ವಾಮಿ ಜಪಾನಂದಜೀ, ನಮ್ಮ ಸಮಾಜದಲ್ಲಿ ಗುರುಗಳಿಗೆ, ಶಿಕ್ಷಕರಿಗೆ ವಿಶೇಷ ಸ್ಥಾನವಿದೆ. ಅದರಲ್ಲೂ ತಾಯಿಯೇ ಮೊದಲ ಗುರು. ಜೀವನದಲ್ಲಿ ಗುರಿ ಹಾಗೂ ಗುರು ಮುಖ್ಯ. ಜೀವನದಲ್ಲಿ ಸ್ಪಷ್ಟತೆ ಇರಬೇಕು ಎಂದರು.
ನಗರದ ಸರ್ಕಾರಿ ಪ.ಪೂ ಕಾಲೇಜಿನಲ್ಲಿ ನಡೆದಾಡುವ ದೇವರಾಗಿದ್ದ ಸಿದ್ದಗಂಗಾ ಮಠದ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿ, ಖ್ಯಾತ ವಿಜ್ಞಾನಿ ಡಾ. ರಾಜಾರಾಮಣ್ಣ, ಸಾಹಿತಿ ಟಿ.ಪಿ. ಕೈಲಾಸಂ ಅವರಂತಹ ಮಹನೀಯರು ವ್ಯಾಸಂಗ ಮಾಡಿದ್ದಾರೆ. ಇಂತಹ ಕಾಲೇಜನ್ನು ಅನ್ನಪೂರ್ಣೇಶ್ವರಿ ಆಹಾರ ಸಮಿತಿಯವರು ಆಯ್ಕೆ ಮಾಡಿಕೊಂಡು ಮಧ್ಯಾಹ್ನದ ಊಟವನ್ನು ಬದ್ದತೆಯಿಂದ ವಿತರಿಸುತ್ತಿದ್ದಾರೆ ಎಂದು ಪ್ರಶಂಸಿಸಿದರು.
ಜೀವನದಲ್ಲಿ ಯಾರಾದರೂ ಸಾಧನೆ ಮಾಡಿರುವರೆಂದರೆ ಅದಕ್ಕೆ ಅವರನ್ನು ಕೈಹಿಡಿದು ಮುನ್ನಡೆಸಿದ ಗುರುಗಳು ಶಿಕ್ಷಕರು ಕಾರಣ. ತಂದೆ, ತಾಯಿ ಗುರುಗಳನ್ನು ನಾವೆಂದಿಗೂ ಮರೆಯಬಾರದು ಎಂದರು. ಪ್ರಾಂಶುಪಾಲ ರಾಜಕುಮಾರ್ ಮಾತನಾಡಿ, ವಿವಿಯಲ್ಲಿ ಕರಿಯಣ್ಣ ಅವರು ಬಿಸಿಯೂಟ ಯೋಜನೆಯನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಆಹಾರ ಸಮಿತಿಯ ಸದಸ್ಯರಾದ ಎಸ್. ನಾಗಣ್ಣ, ಎಚ್.ಜಿ. ಚಂದ್ರಶೇಖರ್, ವಿವಿ ಕಲಾ ಕಾಲೇಜು ಪ್ರಾಧ್ಯಾಪಕ ಹೊನ್ನಗಾನಹಳ್ಳಿ ಕರಿಯಣ್ಣ, ಪ್ರಾಂಶುಪಾಲ ಎಸ್. ರಾಜ್ಕುಮಾರ್, ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.