ಕೋಮುವಾದಿಗಳಿಗೆ ಸಾಹಿತಿಗಳು, ಬುದ್ಧಿಜೀವಿಗಳೇ ಟಾರ್ಗೆಟ್- ಡಾ.ಎಲ್.ಎನ್.ಮುಕುಂದರಾಜ್

ತುಮಕೂರು: ಕೋಮುವಾದಿಗಳಿಗೆ, ದ್ವೇಷಕೋರರಿಗೆ ಸಾಹಿತಿಗಳು, ಬುದ್ಧಿಜೀವಿಗಳೇ ಟಾರ್ಗೇಟ್ ಆಗಿದ್ದಾರೆ. ವಾಸ್ತವವನ್ನು ಜನರ ಮುಂದಿಡುವ ಕವಿಗಳ ಆತ್ಮಸ್ಥೈರ್ಯ ಕುಗ್ಗಿಸುವ ಇಂತಹ ಕೆಲಸಗಳಿಗೆ ಎಂದಿಗೂ ಯಶಸು ದೊರೆಯುವುದಿಲ್ಲ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಎಲ್.ಎನ್.ಮುಕುಂದರಾಜ್ ಹೇಳಿದರು.

ನಗರದ ಜಿಲ್ಲಾಸ್ಪತ್ರೆ ಸಭಾಂಗಣದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಲೇಖಕಿಯರ ಸಂಘದ ಸಹಕಾರದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ವಿಭಾಗೀಯ ಮಟ್ಟದ ಯುವ ಕವಿಗೋಷ್ಠಿಗೆ ಕವನ ವಾಚಿಸುವ ಮೂಲಕ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು.ಕನ್ನಡ ಸಾಹಿತ್ಯ ಪರಂಪರೆಯನ್ನು ಗಮನಿಸಿದರೆ, ಕವಿರಾಜ ಮಾರ್ಗದಿಂದ ಇಂದಿನವರೆಗೆ ಎಲ್ಲಾ ಸಾಹಿತಿಗಳು ನಿರ್ಭೀತಿಯಿಂದಲೇ ಸಾಹಿತ್ಯ ಕೃಷಿ ನಡೆಸಿದ್ದಾರೆ ಎಂದರು.

ಇಂದು ಜಾತಿ, ಧರ್ಮ, ಕೋಮುವಾದ ಎಂಬುದನ್ನು ಯುವಜನತೆಯನ್ನು ತಲ್ಲಣಗೊಳಿಸಿದೆ ಇದನ್ನು ತಡೆಯಲಿಕ್ಕೆ ಏಕೈಕ ಮಾರ್ಗವೆಂದರೆ ಸಾಹಿತ್ಯ ಬರಹಗಾರರು, ಕವಿಗಳು ಸಮಾಜದ ವಾಸ್ತವವನ್ನು ಜನರ ಮುಂದಿಡುವ ಮೂಲಕ, ಯಾವುದು ಸುಳ್ಳು, ಯಾವುದು ಸತ್ಯ ಎಂಬುದನ್ನು ತೋರಿಸಿಕೊಡಬೇಕಿದೆ.ಸೂಕ್ಷ್ಮ ಸಂವೇದನೆ ಇರುವ ಯಾವ ಸಾಹಿತಿ, ಬರಹಗಾರನು ಜಾತಿ,ಧರ್ಮದ ಹೆಸರಿನಲ್ಲಿ ನಡೆಯುವ ಹಿಂಸೆ, ದ್ವೇಷವನ್ನು ಸಹಿಸಲು ಸಾಧ್ಯವೇ ಇಲ್ಲ. ಹಾಗಾಗಿಯೇ ಸಾಹಿತಿಗಳನ್ನು ಕಂಡರೆ ಕೋಮುವಾದಿಗಳಿಗೆ ಸಿಟ್ಟು ಎಂದು ಡಾ.ಎಲ್.ಎನ್. ಮುಕುಂದರಾಜ್ ನುಡಿದರು.

ತುಮಕೂರು ಜಿಲ್ಲೆಯಲ್ಲಿ ಸಾಹಿತ್ಯ ಅಕಾಡೆಮಿಯ ಎಲ್ಲಾ ಕಾರ್ಯಕ್ರಮಗಳು ತುಂಬಾ ಚೆನ್ನಾಗಿ ನಡೆದಿವೆ.ಚಕೋರ, ಸಂತೆಯಲ್ಲಿ ಸಾಹಿತ್ಯ, ಸಾಂಸ್ಕøತಿಕ ನಾಯಕ ಬಸವಣ್ಣ ಹೀಗೆ ಎಲ್ಲಾ ಕಾರ್ಯಕ್ರಮಗಳು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದೆ.ಇದರ ಹಿಂದಿನ ಶಕ್ತಿ ಸಾಹಿತ್ಯ ಅಕಾಡೆಮಿ ಸದಸ್ಯರಾಗಿರುವ ಲೇಖಕಿಯರ ಸಂಘದ ಸುಮ ಸತೀಶ್, ಲೇಖಕಿಯರ ಸಂಘದ ಅಧ್ಯಕ್ಷರಾದ ಮಲ್ಲಿಕಾ ಬಸವರಾಜು, ಸಾಹಿತ್ಯ ಅಕಾಡೆಮಿಯಲ್ಲಿರುವ 18 ಜನ ಸದಸ್ಯರಲ್ಲಿ ಅತಿ ಹೆಚ್ಚು ಕ್ರಿಯಾಶೀಲವಾಗಿ ತುಮಕೂರು ಜಿಲ್ಲೆ ಗುರುತಿಸಿಕೊಂಡಿದೆ.ಇದಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. 1988ರಲ್ಲಿ ಜಿ.ಎಸ್.ಶಿವರುದ್ರಪ್ಪ ಅವರಿಂದ ಆರಂಭವಾದ ಯುವ ಕವಿಗೋಷ್ಠಿಯಲ್ಲಿ ಪಾಲ್ಗೊಂಡು ಕವನ ವಾಚಿಸಿದ ನಾನು ಸಾಹಿತಿಯಾಗಿ ಇಲ್ಲಿಯವರೆಗೂ ಮುಂದುವೆದಿದ್ದೇನೆ ನನ್ನೊಂದಿಗೆ ಅನೇಕರು ಈಗಲು ಈ ಕ್ಷೇತ್ರದಲ್ಲಿ ತೊಡಗಿದ್ದಾರೆ ಎಂದರು.

ಜಿಲ್ಲಾಸ್ಪತ್ರೆಯ ಮುಖ್ಯಸ್ಥ ಡಾ.ಅಸ್ಟರ್ ಬೇಗ್ ಮಾತನಾಡಿ, ಕಾವ್ಯವೆಂಬುದು ಒಂದು ರೀತಿಯಲ್ಲಿ ಸಂತರ ಕೆಲಸ ಎಲ್ಲರಿಗೂ ದಾರಿ ದೀಪವಾಗಿದೆ. ಜಾತಿಯತೆ ಅಳಿಸಿ, ದ್ವೇಷವನ್ನು ಹೋಗಲಾಡಿಸಿ, ಶಾತಿಯುತ ಸಮಾಜ ಕಟ್ಟಲು ಕಾವ್ಯದಿಂದ ಸಾಧ್ಯವೆಂದರು.

ಸಾಹಿತ್ಯ ಅಕಾಡೆಮಿ ಸದಸ್ಯೆ ಡಾ.ಪಿ.ಚಂದ್ರಿಕಾ ಮಾತನಾಡಿ, ಅಕ್ಷರ ವಿವೇಕ, ವಿವೇಚನೆಯನ್ನು ಕಲಿಸುತ್ತದೆ. ಅದು ಸಮಾಜದ ಒಳತಿಗಾಗಿ ಬಳಕೆಯಾಗಬೇಕು ಎಂದರು.

ಆಶಯ ನುಡಿಗಳನ್ನಾಡಿದ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯೆ ಸುಮ ಸತೀಶ್ ಮಾತನಾಡಿ,ಕಳೆದ 13 ತಿಂಗಳಲ್ಲಿ ಸಾಹಿತ್ಯ ಅಕಾಡೆಮಿ ಜನರನ್ನು ತಲುಪಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದೆ.ಚಕೋರ, ಸಂತೆಯಲ್ಲಿ ಸಾಹಿತ್ಯ ಇನ್ನಿತರ ಕಾರ್ಯಕ್ರಮಗಳು ಜನರಲ್ಲಿ ಹೊಸ ಆಲೋಚನೆಗಳನ್ನು ಹುಟ್ಟು ಹಾಕಿದೆ. ಯಾವುದು ಸತ್ಯ ಯಾವುದು ಸುಳ್ಳು ಎಂಬ ಗೊಂದಲದಲ್ಲಿ ಜನರ ವಿವೇಚನಗೆ ಗ್ರಹಣ ಬಡಿದಿರುವ ಇಂತಹ ಸಮಯದಲ್ಲಿ ಬಹಳ ಎಚ್ಚರಿಕೆಯಿಂದ ನವ ಸಮಾಜವನ್ನು ಕಟ್ಟುವ ಗುರುತರ ಜವಾಬ್ದಾರಿ ಯುವ ಕವಿಗಳಲ್ಲಿ ಮತ್ತು ಬರಹಗಾರರಲ್ಲಿದೆ. ಇದನ್ನು ಉದ್ದೀಪನಗೊಳಿಸುವ ಸಲುವಾಗಿಯೇ ಈ ಯುವ ಕವಿಗೋಷ್ಠಿ ಏರ್ಪಡಿಸಲಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಲೇಖಕಿಯರ ಸಂಘದ ತುಮಕೂರು ಜಿಲ್ಲಾಧ್ಯಕ್ಷೆ ಮಲ್ಲಿಕಾ ಬಸವರಾಜು ಮಾತನಾಡಿ ಹಿಂಸೆಯಿಂದ ತಲ್ಲಣಿಸಿರುವ ಭಾರತದಂತಹ ಪ್ರಗತಿ ಶೀಲ ರಾಷ್ಟ್ರಕ್ಕೆ ಕಾವ್ಯವೊಂದೆ ಉತ್ತರ ನೀಡಬಲ್ಲದು. ಪಂಚೇಂದ್ರಿಯಗಳನ್ನು ತೆರೆದಿಟ್ಟು ನಮ್ಮ ಸುತ್ತಮುತ್ತಲಿನ ಹೋಗುಗಳನ್ನು ಗಮನಿಸಿದಾಗ ಇವುಗಳಿಗೆ ಉತ್ತರ ದೊರೆಯಲಿದೆ ಎಂದರು.

ಲೇಖಕರು. ಹೋರಾಟಗಾರರು ಆದ ಡಾ.ಅಕೈ ಪದ್ಮಸಾಲಿ ಮಾತನಾಡಿದರು. ವೇದಿಕೆಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ರಿಜಿಸ್ಟ್ರಾರ್ ಕರಿಯಪ್ಪ, ಸೂರ್ಯಕೀರ್ತಿ, ಕರ್ನಾಟಕ ಲೇಖಕಿಯರ ಸಂಘದ ಮಾಜಿ ಅಧ್ಯಕ್ಷೆ ಸುಗುಣಾದೇವಿ, ರಾಣಿ ಚಂದ್ರಶೇಖರ್, ಪಾವರ್ತಮ್ಮ, ಪತ್ರಕರ್ತ ಗಣೇಶ ಅಮಿನಗಡ ಮತ್ತಿತರರು ವೇದಿಕೆಯಲ್ಲಿದ್ದರು.

ಬೆಂಗಳೂರು ವಲಯಕ್ಕೆ ಸೇರಿದ ಎಂಟು ಜಿಲ್ಲೆಗಳ ಸುಮಾರು 22 ಯುವ ಕವಿಗಳು, ಯುವಕವಿ ಗೋಷ್ಠಿಯಲ್ಲಿ ಕವನ ವಾಚಿಸಿದರು.

Leave a Reply

Your email address will not be published. Required fields are marked *