ದುರಾಭ್ಯಾಸಗಳ ತ್ಯಜಿಸಿ ಉತ್ತಮ ಆರೋಗ್ಯದಿಂದ ಹೃದಯಾಘಾತ ದೂರವಿಡಿ

ತುಮಕೂರು: ಈಗಿನ ಒತ್ತಡದ ಬದುಕಿನಲ್ಲಿ ಹಣ, ಆಸ್ತಿ ಇದ್ದವರು ಶ್ರೀಮಂತರಲ್ಲ, ಆರೋಗ್ಯ ಹೊಂದಿರುವವರೇ ದೊಡ್ಡ ಶ್ರೀಮಂತರು. ಇಂದು ಆರೋಗ್ಯ ಕಾಪಾಡಿಕೊಳ್ಳುವುದು ದೊಡ್ಡ ಸವಾಲಾಗಿದೆ. ದೇಹವನ್ನು ದೇಗುಲವೆಂದು ಭಾವಿಸಿ, ದೇಹದ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಬೇಕು ಎಂದು ಬೆಳ್ಳಾವಿ ಕಾರದ ಮಠದ ಕಾರದ ವೀರಬಸವ ಸ್ವಾಮೀಜಿ ಹೇಳಿದರು.

ಇತ್ತೀಚೆಗೆ ಹೃದಯಾಘಾತದಿಂದ ಅಕಾಲ ಮರಣಕ್ಕೀಡಾದ ತುಮಕೂರು ತಾಲ್ಲೂಕು ಊರುಕೆರೆ ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ, ಬಿಜೆಪಿ ಮುಖಂಡ ಹೆಬ್ಬಾಕದ ಎಚ್.ಎಸ್.ನೀಲಕಂಠಸ್ವಾಮಿ ಅವರ ಸ್ಮರಣಾರ್ಥ ಶನಿವಾರ ಹೆಬ್ಬಾಕ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಹೃದಯಾಘಾತ ಜಾಗೃತಿ, ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ, ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದ ಸ್ವಾಮೀಜಿ, ಒಳ್ಳೆಯ ಆಹಾರ ಪದ್ದತಿ ಅನುಸರಿಸಿ, ದುರಾಭ್ಯಾಸಗಳನ್ನು ತ್ಯಜಿಸಿದರೆ ಆರೋಗ್ಯವಂತರಾಗಲು ಸಾಧ್ಯವಿದೆ ಎಂದರು.

ಕಿರಿಯ ವಯಸ್ಸಿನಲ್ಲೇ ಗ್ರಾಮ ಪಂಚಾಯ್ತಿ ಅಧ್ಯಕ್ಷನಾಗಿ, ಜನಪರ ಕಾರ್ಯಗಳನ್ನು ನಿರಂತರವಾಗಿ ಮಾಡುತ್ತಾ ಜನರೊಂದಿಗೆ ಸದಾ ಸ್ಪಂದಿಸುತ್ತಿದ್ದ ನೀಲಕಂಠ ಸ್ವಾಮಿ ತಮ್ಮ 35ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಸಾವಿಗೀಡಾಗುವುದೆಂದರೆ ಏನರ್ಥ? ಇತ್ತೀಚೆಗೆ ಹೃದಯಾಘಾತದ ಸಾವಿನ ಪ್ರಕರಣಗಳು ಹೆಚ್ಚಾಗುತ್ತಿವೆ. ಬಾಳಿ ಬದುಕಬೇಕಾದ ಮಕ್ಕಳನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಳ್ಳುವಂತಾಗಿದೆ ಎಂಬುದು ನೋವಿನ ವಿಚಾರ. ಜೀವನಶೈಲಿ ಬದಲಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವುದೊಂದೇ ಇದಕ್ಕೆ ಪರಿಹಾರ ಎಂದರು.

ನಾವು ತೆಗೆದುಕೊಳ್ಳುವ ಆಹಾರ ಪದ್ಧತಿಯ ಬಗ್ಗೆಯೂ ಗಮನಹರಿಸಬೇಕು. ಊಟದಲ್ಲಿ ಸೊಪ್ಪು ಹೆಚ್ಚಾಗಲಿ, ಉಪ್ಪು, ಸಕ್ಕರೆಗೆ ಕೊಕ್ಕೆಯಾಗಲಿ, ನುಚ್ಚು, ಮಜ್ಜಿಗೆ ಹೆಚ್ಚಾಗಲಿ, ನಿತ್ಯವಿರಲಿ. ಬಾಯಿರುಚಿಗೆ ಬಿದ್ದು ನಮ್ಮ ದೇಹಕ್ಕೆ ಒಗ್ಗದ ಆಹಾರ ಪದಾರ್ಥಗಳನ್ನು ವರ್ಜಿಸಿ ಎಂದು ಹೇಳಿದ ಸ್ವಾಮೀಜಿ, ದೇಹವನ್ನು ದಂಡಿಸದಿದ್ದರೆ ಸ್ವರ್ಗದಲ್ಲಿ ಕೆಂಡ ತಂದಿಕ್ಕುವರು ಎನ್ನುವಂತೆ ದೇಹದಂಡನೆ ಅಗತ್ಯ. ನಡೆಯುವುದು, ದುಡಿಯುವುದು, ವ್ಯಾಯಾಮ ದೇಹಕ್ಕೆ ಅಗತ್ಯ. ಇಂತಹ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಹೇಳಿದರು.

ಸಿದ್ಧಗಂಗಾ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ.ಶರತ್‍ಕುಮಾರ್, ಹೃದಯ ಸಮಸ್ಯೆಗೆ ಕಾರಣಗಳು, ಅದರ ನಿಯಂತ್ರಣದ ಬಗ್ಗೆ ತಿಳಿಸಿಕೊಟ್ಟರು. ಧೂಮಪಾನ, ಮದ್ಯಪಾನ, ಕರಿದ ಪದಾರ್ಥಗಳ ಸೇವನೆ, ಅತಿಯಾದ ಸಕ್ಕರೆ ಬಳಕೆ ಮೊದಲಾದವುಗಳಿಂದ ಆರೋಗ್ಯ ಸಮಸ್ಯೆ ಉಂಟಾಗುತ್ತದೆ. ಕೋವಿಡ್ ವ್ಯಾಕ್ಸಿನ್‍ನಿಂದಾಗಿ ಹೃದಯ ಸಮಸ್ಯೆಯಾಗುತ್ತದೆ ಎಂಬ ವಿಚಾರವನ್ನು ತಲೆಯಿಂದ ತೆಗೆದುಹಾಕಿ, ಈ ಸಮಸ್ಯೆಗೆ ವ್ಯಾಕ್ಸಿನ್ ಕಾರಣವಲ್ಲ ಎಂದರು.

ಹಲವಾರು ಕಾರಣಗಳಿಂದ ಹೃದಯ ಸಮಸ್ಯೆ, ಹೃದಯಾಘಾತ ಆಗಬಹುದು. ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಯೋಗ್ಯ ಅಭ್ಯಾಸಗಳನ್ನು ರೂಢಿಸಿಕೊಂಡರೆ ಆರೋಗ್ಯವಂತರಾಗಿ ಬಾಳಲು ಸಾಧ್ಯವಿದೆ. ನಿತ್ಯ ನಡಿಗೆ, ವ್ಯಾಯಾಮ ಮಾಡಬೇಕು. ಧೂಮಪಾನ, ಮದ್ಯಪಾನವನ್ನು ಬಿಡಬೇಕು. ನಮ್ಮ ಪರಿಸರದ ಆಹಾರ ಸೇವನೆ, ಒಳ್ಳೆಯ ನಿದ್ರೆ, ಮಾನಸಿಕ ಒತ್ತಡ ನಿಯಂತ್ರಣ ಮಾಡಿಕೊಂಡರೆ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದು ಹೇಳಿದರು.

ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶಾಸಕ ಜಿ.ಬಿ.ಜ್ಯೋತಿಗಣೇಶ್, ಸಿದ್ಧಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಎಸ್.ಪರಮೇಶ್, ರಾಜ್ಯ ಗ್ರಾಮ ಪಂಚಾಯ್ತಿ ಸದಸ್ಯರ ಮಹಾ ಒಕ್ಕೂಟದ ಅಧ್ಯಕ್ಷ ಕಾಡಶೆಟ್ಟಿಹಳ್ಳಿ ಸತೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ, ಸಿದ್ಧಗಂಗಾ ಆಸ್ಪತ್ರೆಯ ತಜ್ಞ ವೈದ್ಯರುಗಳಾದ ಡಾ.ಮಂಜುನಾಥ ಗುಪ್ತ, ಡಾ.ಸುಚಿತ್, ಡಾ.ರಾಹುಲ್ ಮೊದಲಾದವರು ಭಾಗವಹಿಸಿದ್ದರು.

ಸಿದ್ಧಗಂಗಾ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಗಳ ಸಮೂಹ ಸಂಘ ಹಾಗೂ ಊರುಕೆರೆ ಗ್ರಾಮ ಪಂಚಾಯ್ತಿ ಸಹಯೋಗದಲ್ಲಿ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನಡೆಯಿತು. ಸಾರ್ವಜನಿಕರಿಗೆ ಬಿ.ಪಿ., ಶುಗರ್, ಇಸಿಜಿ, ಕಣ್ಣಿನ ತಪಾಸಣೆ, ಚಿಕಿತ್ಸೆ, ಕನ್ನಡಕ ವಿತರಣೆ ಮತ್ತಿತರ ಆರೋಗ್ಯ ಸಮಸ್ಯೆಗಳ ಬಗ್ಗೆ ತಜ್ಞ ವೈದ್ಯರು ತಪಾಸಣೆ ಮಾಡಿದರು. ಹೆಬ್ಬಾಕ ಹಾಗೂ ಸುತ್ತಮುತ್ತಲ ಗ್ರಾಮಗಳ ಸಾವಿರಾರು ಜನ ಆಗಮಿಸಿ ಶಿಬಿರದ ಪ್ರಯೋಜನ ಪಡೆದರು.

Leave a Reply

Your email address will not be published. Required fields are marked *