ತುಮಕೂರು:ವಿವೇಕಾನಂದ ಕ್ರೀಡಾ ಸಂಸ್ಥೆ(ನೊಂ) ತುಮಕೂರು ವತಿಯಿಂದ ಮುಂದಿನ ಅಕ್ಟೋಬರ್ ಎರಡನೇ ವಾರದಲ್ಲಿ ರಾಜ್ಯಮಟ್ಟದ ಹೊನಲು ಬೆಳಕಿನ ಆಹ್ವಾನಿತ ಖೋ-ಖೋ ಪಂದ್ಯಾವಳಿಯನ್ನು ನಗರದ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ವಿವೇಕಾನಂದ ಕ್ರೀಡಾ ಸಂಸ್ಥೆಯ ಅಧ್ಯಕ್ಷ ಹೆಚ್.ಡಿ.ಕುಮಾರ್ ತಿಳಿಸಿದರು.
ಸುದ್ದಿಗೋಷ್ಠ್ಟಿಯಲ್ಲಿಂದು ಮಾತನಾಡಿದ ಅವರು,ರಾಜ್ಯದ 12 ಪ್ರತಿಷ್ಠಿತ ಪುರುಷರ ಮತ್ತು 8 ಮಹಿಳಾ ತಂಡಗಳು ಈ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.ಲೀಗ್ ಕಂ ನಾಕೌಟ್ ಹಂತದ ಪಂದ್ಯಾವಳಿಗಳು ನಡೆಯಲಿದೆ.ಕರ್ನಾಟಕ ಖೋ-ಕೋ ಸಂಸ್ಥೆ ನಡೆಸಿದ ಪಂದ್ಯಾವಳಿಯಲ್ಲಿ ಎಂಟರ ಹಂತಕ್ಕಿಂತ ಮೇಲ್ಮಟ್ಟದ ಪಂದ್ಯಾಗಳನ್ನಾಡಿದ ಕ್ರೀಡಾ ತಂಡಗಳು ಈ ಟೂರ್ನಿಯಲ್ಲಿ ಭಾಗವಹಿಸಲಿದ್ದಾರೆ.ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳಿಗೆ ಊಟ, ತಿಂಡಿ, ವಸತಿ ವ್ಯವಸ್ಥೆಯನ್ನು ಸಂಸ್ಥೆಯೇ ನೋಡಿಕೊಳ್ಳಲಿದೆ ಎಂದರು.
ತುಮಕೂರು ನಗರದ ಹಿರಿಯ ಕ್ರೀಡಾಪುಟುಗಳ ಸ್ಥಾಪಿಸಿದ ವಿವೇಕಾನಂದ ಕ್ರೀಡಾ ಸಂಸ್ಥೆ, ಕರ್ನಾಟಕದ ಮೊಟ್ಟ ಮೊದಲ ಕ್ರೀಡಾಕ್ಲಬ್ ಇದಾಗಿದೆ.ಇದುವರೆಗೂ ಸಾವಿರಾರು ಕ್ರೀಡಾಪಟುಗಳು ನಮ್ಮ ಕ್ರೀಡಾಸಂಸ್ಥೆಗಳಲ್ಲಿ ತರಬೇತಿ ಪಡೆದು,ರಾಜ್ಯಮ ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಮೆಡಲ್ ಪಡೆದಿದ್ದಾರೆ.ಅಲ್ಲದೆ ವಿಶ್ವವಿದ್ಯಾಲಯ ಮಟ್ಟದಲ್ಲಿ ಅಂತರರಾಷ್ಟ್ರೀಯ ಮಟ್ಟದವರೆಗೆ ಹೋಗಿದ್ದಾರೆ.ಕ್ರೀಡಾ ಖೋಟಾ ಅಡಿಯಲ್ಲಿ ಸರಕಾರಿ ಉದ್ಯೋಗ, ಮೆಡಿಕಲ್, ಇಂಜಿನಿಯರಿಂಗ ವಿದ್ಯಾಬ್ಯಾಸಕ್ಕೆ ಪ್ರವೇಶ ಪಡೆದಿದ್ದಾರೆ.ಒಂದು ಕಾಲದಲ್ಲಿ ಕರ್ನಾಟಕದ ಖೊ-ಖೊ ತಂಡದಲ್ಲಿ ತುಮಕೂರಿನ ನಮ್ಮ ಸಂಸ್ಥೆಯ 5-7 ಜನರ ಆಟಗಾರರು ಇರುತ್ತಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಮಕ್ಕಳು ಮೊಬೈಲ್‍ಗೆ ಅಡಿಟ್ ಆಗಿ, ಕ್ರೀಡಾ ಮೈದಾನದ ಕಡೆಗೆ ಬರುವುದು ಕಡಿಮೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕರೋನ ನಂತರದಲ್ಲಿ ಓದು, ಮೊಬೈಲ್‍ಗೆ ಸಿಮಿತವಾಗಿರುವ ಯುವಜನರನ್ನು ಕ್ರೀಡಾಕೂಟಗಳತ್ತ ಸೆಳೆಯುವ ಉದ್ದೇಶದಿಂದ ಆಗಸ್ಟ್ ಮಾಹೆಯಲ್ಲಿ ಪ್ರೌಢಶಾಲಾ ಮಟ್ಟದ ಕ್ರೀಡಾಕೂಟವನ್ನು ನಮ್ಮ ಸಂಸ್ಥೆಯಿಂದ ಆಯೋಜಿಸಲಾಗಿದೆ.ಸರಕಾರದ ಯಾವುದೇ ಅನುದಾನವಿಲ್ಲದೆ ದಾನಿಗಳು, ಹಿರಿಯ ಕ್ರೀಡಾಪಟುಗಳ ಸಹಕಾರದೊಂದಿಗೆ ಆಸಕ್ತ ಕ್ರೀಡಾಪಟುಗಳಿಗೆ ಉಚಿತವಾಗಿ ತರಬೇತಿ ನೀಡಲಾಗುತ್ತಿದೆ.ಇಂದು 35 ಜನ ಯುವಕರು ನಮ್ಮ ಸಂಸ್ಥೆಯಿಂದ ಖೊ-ಖೊ ಅಟದ ತರಬೇತಿ ಪಡೆಯುತ್ತಿದ್ದಾರೆ ಎಂದು ಹೆಚ್.ಡಿ.ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿವೇಕಾನಂದ ಕ್ರೀಡಾ ಸಂಸ್ಥೆಯ ಕಾರ್ಯದರ್ಶಿ ವಿನಯಕುಮಾರ್,ರವೀಶ್,ಪ್ರೀತಂ, ಗುರುಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.