ಪಿಂಚಿಣಿ-ತುಟಿಭತ್ಯೆ ಪರಿಷ್ಕರಿಸುವುದು ಕಷ್ಟ ಆರ್ಥಸಚಿವರ ಹೇಳಿಕೆಗೆ ನಿವೃತ್ತ ನೌಕರರ ಸಂಘ ಕಳವಳ

ತುಮಕೂರು : ಮುಂದಿನ ದಿನಗಳಲ್ಲಿ ನಿವೃತ್ತ ಸರ್ಕಾರಿ ನೌಕರರಿಗೆ ಕುಟುಂಬ ಪಿಂಚಣಿ ಪರಿಷ್ಕರಿಸುವುದು ಹಾಗೂ ತುಟ್ಟಿಭತ್ಯೆ ನೀಡುವುದು ಕಷ್ಟಸಾಧ್ಯ ಎಂಬ ಮಾತುಗಳನ್ನು ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ವ್ಯಕ್ತಪಡಿಸಿದ್ದು ಇದರಿಂದ ನಿವೃತ್ತ ಸರ್ಕಾರಿ ನೌಕರರ ಪರಿಸ್ಥಿತಿ ಕಷ್ಟಕರವಾಗಲಿದೆ ಎಂದು ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷೆ ಬಾ.ಹ. ರಮಾಕುಮಾರಿ ಕಳವಳ ವ್ಯಕ್ತಪಡಿಸಿದರು.

ಈ ಸಂಬಂಧ ಸಂಘದ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ನರೇಂದ್ರಮೋದಿಯವರಿಗೆ ಮನವಿ ಸಲ್ಲಿಸಿದ ನಂತರ ಮಾತನಾಡಿದ ಅವರು ಕೇಂದ್ರ ಸರ್ಕಾರವು 8 ನೇ ವೇತನ ಆಯೋಗ ರಚಿಸಿ ಜಾರಿಗೊಳಿಸುವ ಸಂದರ್ಭದಲ್ಲಿ ಕಳೆದ ಮಾರ್ಚ 25 ರಂದು ವಿತ್ತ ಸಚಿವರು ಲೋಕಸಭೆಯಲ್ಲಿ ಮಾತನಾಡುವಾಗ ದಿನಾಂಕ 1.4. 2026 ರ ಹಿಂದಕ್ಕೆ ನಿವೃತ್ತಿ ಹೊಂದುವ ಸರ್ಕಾರಿ ನೌಕರರಿಗೆ ಪಿಂಚಣಿ ಮತ್ತು ಕುಟುಂಬ ಪಿಂಚಣಿಯನ್ನು ಕಷ್ಟಸಾಧ್ಯ ಹಾಗೂ ಮುಂದಿನ ತುಟ್ಟಿಭತ್ಯೆ ನೀಡುವುದು ಸಹ ಕಷ್ಟಕರ ಎಂಬ ವಿಚಾರ ವ್ಯಕ್ತಪಡಿಸಿರುವುದು ಸಾಕಷ್ಟು ಗೊಂದಲ ಹಾಗೂ ಆತಂಕಕ್ಕೆ ಕಾರಣವಾಗಿದೆ ಎಂದು ತಿಳಿಸಿದರು.

ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಜಾರಿಗೆ ತರಬಹುದಾದ ಇದನ್ನು ರಾಜ್ಯ ಸರ್ಕಾರಗಳೂ ಜಾರಿ ಮಾಡುವ ಸಾಧ್ಯೆಗಳು ಇರುವುದರಿಂದ ನಿವೃತ್ತ ನೌಕರರು ತೊಂದರೆಗೆ ಸಿಲುಕಲಿದ್ದಾರೆ. ಆದಕಾರಣ ಈ ಬಗ್ಗೆ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ರಾಜ್ಯ ಪರಿಷತ್ ಸಭೆಯಲ್ಲಿ ಹಾಗೂ ಅಖಿಲ ಭಾರತ ಸಮಿತಿಯ ರಾಷ್ಟ್ರೀಯ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿ ಖಂಡನೆ ವ್ಯಕ್ತಪಡಿಸಲಾಗಿದೆ ಎಂದು ತಿಳಿಸಿದರು.

ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಆಢಳಿತಕ್ಕೆ ಮನವಿ ಸಲ್ಲಿಸಿ ಕೇಂದ್ರ ಸರ್ಕಾರದ ಗಮನ ಸೆಳೆಯಬೇಕು ಎಂಬ ತೀರ್ಮಾನದ ಹಿನ್ನೆಲೆಯಲ್ಲಿ ಇಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿದ್ದೇವೆ. ಕೇಂದ್ರ ಸರ್ಕಾರವು ಇಂತಹ ಜನವಿರೋಧಿ, ನೌಕರ ವಿರೋಧಿ ಕಾನೂನನ್ನು ಕೈಬಿಡಬೇಕು. ನಿವೃತ್ತ ನೌಕರರು ತಮ್ಮ ನಿವೃತ್ತಿಯ ಅವಧಿಯಲ್ಲಿ ಘನತೆಯ ಜೀವನ ನಡೆಸಲು ಅನುವು ಮಾಡಿಕೊಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಅನಂತರಾಮಯ್ಯ, ಪ್ರಧಾನ ಕಾರ್ಯದರ್ಶಿ ಪುಟ್ಟನರಸಯ್ಯ. ಖಜಾಂಚಿ ನರಸಿಂಹರೆಡ್ಡಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *