ಗೊಬ್ಬರದ ಸಮಸ್ಯೆ, ಜುಲೈ 29ರಂದು ಬಿಜೆಪಿ ಪ್ರತಿಭಟನೆ

ತುಮಕೂರು : ಕೇಂದ್ರ ಸರ್ಕಾರ ನೀಡಿರುವ ರಸಗೊಬ್ಬರ ಹಾಗೂ ಯೂರಿಯಾವನ್ನು ಕಾಳಸಂತೆಯಲ್ಲಿ ಮಾರಿ ರೈತರಿಗೆ ವಂಚಿಸಲಾಗಿದೆ ಎಂದು ಆರೋಪಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಇದೇ 29ರಂದು ಮಂಗಳವಾರ ಬಿಜೆಪಿ ರೈತ ಮೋರ್ಚಾ ನೇತೃತ್ವದಲ್ಲಿ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಎಸ್.ರವಿಶಂಕರ್ ಹೆಬ್ಬಾಕ ಅವರು ಸೋಮವಾರ ನಗರದ ಜಿಲ್ಲಾ ಬಿಜೆಪಿ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಬೆಳಿಗ್ಗೆ 10.30ಕ್ಕೆ ಬಿಜಿಎಸ್ ವೃತ್ತದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ನಡೆಸುವ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸುವರು. ಬಿಜೆಪಿ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು ಹಾಗೂ ಪಕ್ಷದ ವಿವಿಧ ಮುಖಂಡರು, ರೈತರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವರು. ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಪತ್ರ ನೀಡಲಾಗುವುದು ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರೈತರ ಸಮಸ್ಯೆ ನಿವಾರಣೆಯ ಪ್ರಯತ್ನ ಮಾಡಲಿಲ್ಲ. ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಅನೇಕ ರೈತಪರ ಯೋಜನೆಗಳನ್ನು ಈ ಸರ್ಕಾರ ಸ್ಥಗಿತಗೊಳಿಸಿದೆ. ರೈತ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಬಿಜೆಪಿ ಸರ್ಕಾರ ನೀಡುತ್ತಿದ್ದ ರೈತ ವಿದ್ಯಾನಿಧಿ ಯೋಜನೆ ನಿಲ್ಲಿಸಿದೆ. 52 ಲಕ್ಷ ರೈತರಿಗೆ ಬಿಜೆಪಿ ಸರ್ಕಾರ ನೀಡುತ್ತಿದ್ದ 4 ಸಾವಿರ ರೂ. ಕಿಸಾನ್ ಸಮ್ಮಾನ್ ನಿಧಿಯನ್ನು ನಿಲ್ಲಿಸಿದೆ. ರೈತರ ಪಂಪ್‍ಸೆಟ್‍ಗೆ ಟ್ರಾನ್ಸ್‍ಫಾರ್ಮರ್ ಅಳವಡಿಸಲು ಬಿಜೆಪಿ ಸರ್ಕಾರದಲ್ಲಿ 2500 ರೂ. ನಿಗಧಿಪಡಿಸಿತ್ತು. ಇಂದಿನ ಕಾಂಗ್ರೆಸ್ ಸರ್ಕಾರ ಒಂದು ಪಂಪ್‍ಸೆಟ್‍ಗೆ ಟ್ರಾನ್ಸ್‍ಫಾರ್ಮರ್ ಅಳವಡಿಸಲು 3 ಲಕ್ಷ ರೂ. ನಿಡಬೇಕಾಗಿದೆ ಎಂದು ಆರೋಪಿಸಿದರು.

ರಸಗೊಬ್ಬರದ ಅಭಾವ ಉಂಟಾಗಿ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯ ಸರ್ಕಾರದ ಕೃಷಿ ಸಚಿವರು ಹಾಗೂ ಕೃಷಿ ಇಲಾಖೆ ಸಂಪೂರ್ಣ ನಿಷ್ಕ್ರಿಯರಾಗಿದ್ದಾರೆ. ರಾಜ್ಯಕ್ಕೆ ಯೂರಿಯಾ ಗೊಬ್ಬರವು 6.30 ಲಕ್ಷ ಮೆಟ್ರಕ್ ಟನ್ ಅವಶ್ಯಕತೆಯಿದ್ದು, ಅವಶ್ಯಕತೆಗಿಂಥಾ ಹೆಚ್ಚಾಗಿ ಕೇಂದ್ರ ಸರ್ಕಾರ 8.73 ಲಕ್ಷ ಮೆಟ್ರಿಕ್ ಟನ್ ಗೊಬ್ಬರವನ್ನು ರಾಜ್ಯಕ್ಕೆ ನೀಡಿದೆ. ಉಳಿದ 2.43 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರವನ್ನು ರಾಜ್ಯದ ರೈತರಿಗೆ ನೀಡದೆ ಕಾಂಗ್ರೆಸ್ ಸರ್ಕಾರ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದೆಯೆ? ಎಂದು ಪ್ರಶ್ನಿಸಿದ ಅವರು, ರಸಗೊಬ್ಬರ ದೊರೆಯದೆ ರೈತರು ಕಂಗಾಲಾಗಿದ್ದರೆ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ, ಮಂತ್ರಿಗಳು ರೈತರ ಸಂಕಷ್ಟ ನಿರ್ಲಕ್ಷ್ಯ ಮಾಡಿದ್ದಾರೆ ಎಂದು ಟೀಕಿಸಿದರು.

ಶಾಸಕ ಬಿ.ಸುರೇಶ್‍ಗೌಡರು ಮಾತನಾಡಿ, ಈ ಬಾರಿ ಮುಂಗಾರು ಉತ್ತಮ ಎಂದು ಹವಾಮಾನ ಇಲಾಖೆ ಮೂರು ತಿಂಗಳ ಮೊದಲೇ ಹೇಳಿದರೂ ಪೂರ್ವ ಸಿದ್ಧತೆ ಮಾಡಿಕೊಳ್ಳದೆ, ಅಗತ್ಯವಿರುವಷ್ಟು ಗೊಬ್ಬರ ದಾಸ್ತಾನು ಮಾಡಿಕೊಳ್ಳುವ ಪ್ರಯತ್ನ ಮಾಡಿಲ್ಲ. ಕೃಷಿ ಸಚಿವರು ಎಲ್ಲಾ ಜಿಲ್ಲೆಗಳ ಪ್ರವಾಸ ಮಾಡಿ ರೈತರ ಸ್ಥಿತಿಗತಿ ಮಾಹಿತಿ ಪಡೆಯಬೇಕು. ಕೃಷಿ ಸಚಿವ ಚಲುವರಾಯಸ್ವಾಮಿ ಮಂಡ್ಯ-ಬೆಂಗಳೂರು ನಡುವೆ ಓಡಾಡಿಕೊಂಡು ರಾಜಕೀಯ ಮಾಡಿಕೊಂಡಿದ್ದಾರೆ. ಗೊಬ್ಬರದ ಬೇಡಿಕೆ ಹೆಚ್ಚಾಗಿದೆ ಎಂದು ಈಗ ಹೇಳಿದರೆ ಹೇಗೆ? ಇಷ್ಟುದಿನ ಏನು ಮಾಡುತ್ತಿದ್ದೀರಿ? ಗಡ್ಡಕ್ಕೆ ಬೆಂಕಿ ಬಿದ್ದಾಗ ಬಾವಿ ತೋಡುವ ಸರ್ಕಾರ ನಿಮ್ಮದು ಎಂದು ವಾಗ್ದಾಳಿ ಮಾಡಿದರು.

ಗೊಬ್ಬರ ಸಮಸ್ಯೆ ವಿಚಾರವಾಗಿ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎಂದು ಮುಖ್ಯಮಂತ್ರಿ, ಕೃಷಿ ಮಂತ್ರಿ ಹೇಳುತ್ತಾರೆ. ನೀವು ಇನ್ನೂ ಯಾವ ಕಾಲದಲ್ಲಿದ್ದೀರಿ? ಕುರ್ಚಿ ಉಳಿಸಿಕೊಳ್ಳಲು ಹಲವಾರು ಬಾರಿ ದೆಹಲಿಗೆ ಹೋಗುವ ನೀವು ಕೇಂದ್ರದ ರಸಗೊಬ್ಬರ ಖಾತೆ ಸಚಿವ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡುವ ಆಸಕ್ತಿ ತೋರಲಿಲ್ಲ. ನಾವೇ ಏರೋಪ್ಲೇನ್ ಟಿಕೆಟ್ ಬುಕ್ ಮಾಡುತ್ತೇವೆ, ಕೇಂದ್ರ ಸಚಿವರನ್ನು ಭೇಟಿ ಮಾಡಿ ಹೆಚ್ಚು ಗೊಬ್ಬರ ಕೊಡಿ ಎಂದು ಮನವಿ ಮಾಡಿ ಎಂದು ಮುಖ್ಯಮಂತ್ರಿಗೆ ಹೇಳಿದರು.

ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಎರಡು ವರ್ಷಗಳಲ್ಲಿ ಕೇವಲ ಕೇಂದ್ರ ಸರ್ಕಾರವನ್ನು ಟೀಕೆ ಮಾಡಿದ್ದು ಹೊರತಾಗಿ ಇನ್ನೇನೂ ಮಾಡಿಲ್ಲ, ಏಕೆಂದರೆ, ಕೆಲಸ ಮಾಡಲು ಇವರ ಬಳಿ ಹಣವಿಲ್ಲ. ಪ್ರಧಾನಿ ಮೋದಿಯನ್ನು ದೂರುತ್ತಾ ಕಾಲ ಕಳೆಯುತ್ತಿದ್ದಾರೆ. ನೀವು ಯಾವ ಮುಖ ಇಟ್ಟುಕೊಂಡು ಸಾಧನಾ ಸಮಾವೇಶ ಮಾಡುದ್ದೀರಿ? ಏನು ಸಾಧನೆ ಮಾಡಿದ್ದೀರೆಂದು ಜನರ ಮುಂದೆ ಹೋಗುವಿರಿ? ನಿಮ್ಮ ಸಾಧನೆ ಏನೆಂದು ರಾಜ್ಯದ ಜನರಿಗೆ ಗೊತ್ತಾಗಿದೆ, ನಿಮಗೆ ತಕ್ಕ ಪಾಠ ಕಲಿಸುತ್ತಾರೆ ಎಂದು ಸುರೇಶ್‍ಗೌಡ ಹೇಳಿದರು.

ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ರೈತ ಮೋರ್ಚಾ ರಾಜ್ಯ ಉಪಾಧ್ಯಕ್ಷ ಬ್ಯಾಟರಂಗೇಗೌಡ, ಜಿಲ್ಲಾ ಬಿಜೆಪಿ ಹಿರಿಯ ಉಪಾಧ್ಯಕ್ಷ ವೈ.ಹೆಚ್.ಹುಚ್ಚಯ್ಯ, ಜಿಲ್ಲಾ ವಕ್ತಾರ ಟಿ.ಆರ್.ಸದಾಶಿವಯ್ಯ, ಗ್ರಾಮಾಂತರ ಅಧ್ಯಕ್ಷ ರಾಜಶೇಖರ್, ಜಿಲ್ಲಾ ಮಾಧ್ಯಮ ಪ್ರಮುಖ್ ಜೆ.ಜಗದೀಶ್, ಮುಖಂಡರಾದ ವಿಜಯಕುಮಾರ್, ಮರಿತಿಮ್ಮಯ್ಯ, ಶಂಕರ್, ಶಿವರಾಜ್ ಹಾಜರಿದ್ದರು.

Leave a Reply

Your email address will not be published. Required fields are marked *