ತುಮಕೂರು: ಸಚಿವ ಸಂಪುಟದಿಂದ ಕೆ.ಎನ್.ರಾಜಣ್ಣನವರನ್ನು ವಜಾಗೊಳಿಸಿದ ಕ್ರಮ ಖಂಡಿಸಿ, ಅವರನ್ನು ಮತ್ತೆ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಕಾಂಗ್ರೆಸ್ ವರಿಷ್ಠರು ಹಾಗೂ ಮುಖ್ಯಮಂತ್ರಿಗಳನ್ನು ಒತ್ತಾಯಿಸಿ ಆಗಸ್ಟ್ 13ರ ಬುಧವಾರ ನಗರದಲ್ಲಿ ಕೆ.ಎನ್.ಆರ್. ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಕೆ.ಎನ್.ಆರ್, ಆರ್.ಆರ್ ಅಭಿಮಾನಿ ಬಳಗ, ಕಾಂಗ್ರೆಸ್ ಮುಖಂಡರು, ಹಿಂದುಳಿದ ವರ್ಗಗಳ ಒಕ್ಕೂಟ, ದಲಿತ ಸಂಘರ್ಷ ಸಮಿತಿ, ಅಲ್ಪಸಂಖ್ಯಾತ ಸಮುದಾಯ ಸೇರಿದಂತೆ ವಿವಿಧ ಸಮಾಜಗಳ ಮುಖಂಡರು ಮಂಗಳವಾರ ನಗರದಲ್ಲಿ ಸಭೆ ಸೇರಿ, ಯಾವುದೇ ತಪ್ಪು ಮಾಡದ ಕೆ.ಎನ್.ರಾಜಣ್ಣನವರನ್ನು ಸಂಪುಟದಿಂದ ವಜಾ ಮಾಡಿ ಅಪಮಾನ ಮಾಡಲಾಗಿದೆ ಎಂದು ಆರೋಪಿಸಿ, ಮತ್ತೆ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಾದ್ಯಂತ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಕೆ.ಎನ್.ಆರ್ ಅಭಿಮಾನಿಗಳು ಗುರುವಾರ ನಗರದ ಬಿಜಿಎಸ್ ವೃತ್ತದಲ್ಲಿ ಸಮಾವೇಶಗೊಂಡು ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸುವರು. ನಂತರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಲಾಗುವುದು ಎಂದು ಹಿಂದುಳಿದ ವರ್ಗಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಧನಿಯಾಕುಮಾರ್ ಸಭೆಗೆ ತಿಳಿಸಿದರು.
1968ರಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿಕೊಂಡು, ಅಸಹಾಯಕರಿಗೆ ಸಹಾಯ ಮಾಡುತ್ತಾ ಜನಪರ ನಾಯಕರಾಗಿ ಬೆಳೆದ ಕೆ.ಎನ್.ರಾಜಣ್ಣನವರನ್ನು ತುಮಕೂರು ಜಿಲ್ಲೆಯ ದೇವರಾಜ ಅರಸು ಎಂದು ಜನ ಗುರುತಿಸಿ ಗೌರವಿಸುತ್ತಾರೆ. ಸರ್ಕಾರದ ಅಭಿವೃದ್ಧಿ ಕೆಲಸಗಳಲ್ಲಿ ತಮ್ಮದೇ ಆದ ಕೊಡುಗೆ ನೀಡುತ್ತಾ ಪಕ್ಷ ಸಂಘಟನೆಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇಂತಹ ನಾಯಕನನ್ನು ಸಚಿವ ಸ್ಥಾನದಿಂದ ತೆಗೆದು ಅವಮಾನ ಮಾಡಿರುವುದು ಜಿಲ್ಲೆಯ ಅವರ ಅಭಿಮಾನಿಗಳಿಗೆ ನೋವಾಗಿದೆ ಎಂದು ಹೇಳಿದರು.
ವಿಧಾನಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ 7 ಸ್ಥಾನ ಗಳಿಸಲು ಕೆ.ಎನ್.ಆರ್ ಕೊಡುಗೆ ಇದೆ. 30 ವರ್ಷಗಳಿಂದ ಕಾಂಗ್ರೆಸ್ ಗೆಲುವು ಸಾಧ್ಯವಾಗದ ಹಾಸನದಲ್ಲಿ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಪಡೆಯಲು ಅಲ್ಲಿನ ಉಸ್ತುವಾರಿ ಸಚಿವರಾಗಿದ್ದ ಕೆ.ಎನ್.ರಾಜಣ್ಣನವರು ಪಕ್ಷನಿಷ್ಠೆ ಕಾರ್ಯತಂತ್ರ ಕಾರಣ. ಶಾಲಾ ಮಕ್ಕಳಿಗೆ ಶೂ ಭಾಗ್ಯದಂತ ಸರ್ಕಾರದ ಅನೇಕ ಯೋಜನೆಗಳಿಗೆ ಪ್ರೇರಣೆಯಾಗಿರುವ ಪ್ರಭಾವಿ ನಾಯಕ ರಾಜಣ್ಣನವರನ್ನು ಸಚಿವ ಸ್ಥಾನದಿಂದ ತೆಗೆದಿರುವುದು ಖಂಡನೀಯ. ಕಾಂಗ್ರೆಸ್ ಪಕ್ಷ ಮತ್ತಷ್ಟು ಸದೃಢವಾಗಿ ಸಂಘಟನೆಯಾಗಬೇಕಾದರೆ ಕೆ.ಎನ್.ರಾಜಣ್ಣನವರಿಗೆ ಮತ್ತೆ ಗೌರವದ ಸ್ಥಾನಮಾನ ನೀಡಬೇಕು ಎಂದು ಧನಿಯಾಕುಮಾರ್ ಒತ್ತಾಯಿಸಿದರು.
ಜಿಲ್ಲಾ ವಾಲ್ಮೀಕಿ ಸಂಘದ ಕಾರ್ಯದರ್ಶಿಯೂ ಆದ ಮಾಜಿ ಮೇಯರ್ ಬಿಜಿ.ಕೃಷ್ಣಪ್ಪ ಮಾತನಾಡಿ, ಕೆ.ಎನ್.ರಾಜಣ್ಣನವರು ನೀಡಿರುವ ಹೇಳಿಕೆಯನ್ನು ಸಾರ್ವಜನಿಕರ ಚರ್ಚೆಗೆ ಅವಕಾಶ ಮಾಡಿಕೊಡಿ, ಜನರ ಅಭಿಪ್ರಾಯ ಆಧರಿಸಿ ಕ್ರಮ ತೆಗೆದುಕೊಳ್ಳಿ. ಒಬ್ಬ ಪ್ರಭಾವಿ ನಾಯಕನನ್ನು ಸಚಿವ ಸಂಪುಟದಿಂದ ವಜಾ ಮಾಡಿ ರಾಜ್ಯದ ವಾಲ್ಮೀಕಿ ಸಮಾಜವನ್ನು ಕಾಂಗ್ರೆಸ್ ನಾಯಕರು ಅವಮಾನಿಸಿದ್ದಾರೆ. ರಾಜಣ್ಣನವರ ಹೇಳಿಕೆಯನ್ನು ತಿರುಚಿ, ತಪ್ಪಾಗಿ ಬಿಂಬಿಸಿ ಅವರ ವಿರುದ್ಧ ಷಡ್ಯಂತರ ಮಾಡಲಾಗಿದೆ. ರಾಜ್ಯದಲ್ಲಿರುವ ಎಲ್ಲಾ ವಾಲ್ಮೀಕಿ ಸಮಾಜದ ಶಾಸಕರು ರಾಜೀನಾಮೆ ನೀಡಿ ಹೋರಾಟಕ್ಕೆ ಸಿದ್ಧವಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ನಮ್ಮ ವಾಲ್ಮೀಕಿ ಸಮಾಜಕ್ಕೆ ಪದೇಪದೆ ಅನ್ಯಾಯವಾಗುತ್ತಿದೆ. ಅಧಿಕಾರಿಗಳು ಮಾಡಿದ ತಪ್ಪಿಗೆ ಸಚಿವ ನಾಗೇಂದ್ರ ಅವರ ತಲೆದಂಡವಾಯಿತು. ಈಗ ಸತ್ಯ ಹೇಳಿದ ಕೆ.ಎನ್.ರಾಜಣ್ಣನವರ ವಿರುದ್ಧ ಕ್ರಮ ಖಂಡನೀಯ. ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಳವಣಿಗೆಗೆ ಯಾವ ಹೈಕಮಾಂಡೂ ಬಂದು ಕೆಲಸ ಮಾಡಿಲ್ಲ. ಇಲ್ಲಿಗೆ ಕೆ.ಎನ್.ರಾಜಣ್ಣನವರೇ ಹೈಕಮಾಂಡ್ ಎಂದು ಹೇಳಿದ ಬಿ.ಜಿ.ಕೃಷ್ಣಪ್ಪ, ರಾಜಣ್ಣನವರನ್ನು ಮತ್ತೆ ಸಚಿವ ಸಂಪಟಕ್ಕೆ ಸೇರಿಸಿಕೊಳ್ಳದಿದ್ದರೆ ಸರ್ಕಾರದ ವಿರುದ್ಧ ನಾಯಕ ಸಮಾಜ ಉಗ್ರ ಹೋರಾಟ ಮಾಡುತ್ತದೆ ಎಂದರು.
ನಗರ ಸಭೆ ಮಾಜಿ ಅಧ್ಯಕ್ಷ ಟಿ.ಪಿ.ಮಂಜುನಾಥ್ ಮಾತನಾಡಿ, ಕೆ.ಎನ್.ರಾಜಣ್ಣನವರು 1968ರಿಂದ ಎಲ್ಲಾ ಕಾಂಗ್ರೆಸ್ ನಾಯಕರ ಒಡನಾಡಿಯಾಗಿ ಪಕ್ಷವನ್ನು ಸದೃಢವಾಗಿ ಸಂಘಟಿಸಲು ಶ್ರಮಿಸಿದ್ದರು. ಅಶಕ್ತರಿಗೆ, ಶೋಷಿತರಿಗೆ ಧ್ವನಿಯಾಗಿ ನಿಂತು ಅವರಿಗೆ ವಿವಿಧ ರೀತಿಯಲ್ಲಿ ಸಹಾಯ ಮಾಡುತ್ತಾ ಜನಾನುರಾಗಿಯಾಗಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ತೆಗೆದಿರುವುದು ಅವರ ಲಕ್ಷಾಂತರ ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ಕಾಂಗ್ರೆಸ್ ನಾಯಕರು ಇದನ್ನು ಅರ್ಥ ಮಾಡಿಕೊಂಡು ಅವರಿಗೆ ಮತ್ತೆ ಮಂತ್ರಿ ಸ್ಥಾನ ನೀಡಬೇಕು ಎಂದು ಮನವಿ ಮಾಡಿದರು.
ಜಾತಿಬೇಧ ಮಾಡದೆ ಎಲ್ಲಾ ಸಮಾಜದವರೊಂದಿಗೆ ವಿಶ್ವಾಸಗಳಿಸಿರುವ ಕೆ.ಎನ್.ರಾಜಣ್ಣನವರ ಪರವಾಗಿ ದೊಡ್ಡ ಬಳಗ ಅವರ ಬೆನ್ನಿಗಿದೆ. ಬುಧವಾರ ನಗರದಲ್ಲಿ ನಡೆಯುವ ಪ್ರತಿಭಟನೆಯಲ್ಲಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಿಂದ ಸಾವಿರಾರು ಅಭಿಮಾನಿಗಳು ಭಾಗವಹಿಸಿ ಸರ್ಕಾರಕ್ಕೆ ಮನವಿ ಮಾಡಲಿದ್ದಾರೆ. ಇನ್ನೆರಡು ದಿನಗಳಲ್ಲಿ ರಾಜಣ್ಣನವರಿಗೆ ಸ್ಥಾನಮಾನ ನೀಡಬೇಕು ಎಂದು ಒತ್ತಾಯಿಸಿದರು.
ವಿವಿಧ ಸಂಘಟನೆ, ಸಮಾಜಗಳ ಮುಖಂಡರಾದ ಪುರುಷೋತ್ತಮ್, ಬಿ.ಜಿ.ವೆಂಕಟೇಗೌಡ, ಲಕ್ಷ್ಮೀನಾರಾಯಣ, ಮಲ್ಲಸಂದ್ರ ಶಿವಣ್ಣ, ಪ್ರತಾಪ್ ಮದಕರಿ, ಶಾಂತಕುಮಾರ್, ಗುರುರಾಘವೇಂದ್ರ, ಮಂಜೇಶ್ ಒಲಂಪಿಕ್, ನಿಸಾರ್ ಅಹ್ಮದ್, ಪಿ.ಬಿ.ಬಸವರಾಜು, ವಿಠಲ್, ಶಿವಕುಮಾರ್ ಕರೇಪಾಳ್ಯ, ಸತೀಶ್, ನಟರಾಜು, ಗಂಗಾಧರ್ ಮೊದಲಾದವರು ಸಭೆಯಲ್ಲಿ ಭಾಗವಹಿಸಿದ್ದರು.