ಮಾಜಿ ಸ್ವಾತಂತ್ರ್ಯ ಯೋಧರಿಗೂ ಸರ್ಕಾರದ ಸವಲತ್ತುಗಳು ದೊರೆಯಬೇಕು-ಮುರಳೀಧರ ಹಾಲಪ್ಪ

ತುಮಕೂರು:ಹತ್ತಾರು ವರ್ಷಗಳ ಕಾಲ ಮನೆ,ಮಠ ತೊರೆದು ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಂಡು, ದೇಶವನ್ನು ಬ್ರಿಟಿಷರ ಕಪಿ ಮುಷ್ಠಿಯಿಂದ ಪಾರು ಮಾಡಿದ ಸ್ವಾತಂತ್ರ ಸೇನಾನಿಗಳಿಗೆ ಭಾರತದ ಪ್ರತಿಯೊಬ್ಬ ಪ್ರಜೆಯೂ ಋಣಿಯಾಗಿರ ಬೇಕಾಗುತ್ತದೆ ಎಂದು ಹಾಲಪ್ಪ ಪ್ರತಿಷ್ಠಾನದ ಅಧ್ಯಕ್ಷ ಮುರುಳೀಧರ ಹಾಲಪ್ಪ ಹೇಳಿದರು.

ನಗರದ ಜೆ.ಸಿ.ರಸ್ತೆಯಲ್ಲಿರುವ ವೀರಸೌಧ-ಅಜ್ಹಾದ್ ಭವನದಲ್ಲಿ ಕರ್ನಾಟಕ ರಾಜ್ಯ ಸ್ವಾತಂತ್ರ ಹೋರಾಟಗಾರರ ಹಾಗೂ ಉತ್ತರಾಧಿಕಾರಿಗಳ ಸಂಘ, ಹಾವೇರಿ ಜಿಲ್ಲೆ, ತುಮಕೂರು ಜಿಲ್ಲಾ ಸ್ವಾತಂತ್ರ ಹೋರಾಟಗಾರರ ಮತ್ತು ಉತ್ತರಾಧಿಕಾರಿಗಳ ಸಂಘ(ರಿ), ತುಮಕೂರು , ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ ಮುಖ್ಯಶಾಖೆ ಅಶೋಕ ರಸ್ತೆ ತುಮಕೂರು ಹಾಗೂ ಹಾಲಪ್ಪ ಪ್ರತಿಷ್ಠಾನ ತುಮಕೂರು ವತಿಯಿಂದ ಹಮ್ಮಿಕೊಂಡಿದ್ದ 79ನೇ ಸ್ವಾತಂತ್ರ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತಿದ್ದ ಅವರು,ಹೇಗೆ ಮಾಜಿ ಸೈನಿಕರಿಗೆ ಸರಕಾರದ ಸವಲತ್ತುಗಳು ದೊರೆಯುವ ರೀತಿ, ಮಾಜಿ ಸ್ವಾತಂತ್ರ ಯೋಧರು ಮತ್ತು ಅವರ ವಾರಸುದಾರರಿಗೂ ಸರಕಾರದ ಸವಲತ್ತುಗಳು ದೊರೆಯುಬೇಕು ಎಂದು ಒತ್ತಾಯಿಸಿದರು.

ಇಲ್ಲಿಗೆ ಆಗಮಿಸಿರುವ ಎಲ್ಲರಿಗೂ ನಾವು ಸ್ವಾತಂತ್ರ ಹೋರಾಟಗಾರರ ಮಕ್ಕಳು ಎಂಬುದೇ ಹೆಮ್ಮೆಯ ವಿಚಾರ.ಇವರ ಪೋಷಕರು, ಮನೆ, ಮಠ, ಮಕ್ಕಳು, ಹೆಂಡತಿ ಎಲ್ಲರನ್ನು ಬಿಟ್ಟು ದೇಶದ ಸ್ವಾತಂತ್ರಕ್ಕಾಗಿ ಹೋರಾಟ ನಡೆಸಿ, ಕೆಲವರು ವೀರ ಮರಣವನ್ನು ಅಪ್ಪಿದರೆ, ಮತ್ತೆ ಕೆಲವರು ಜೈಲು ಪಾಲಾಗಿದ್ದಾರೆ.ಇಂತಹ ವೀರ ಪರಂಪರೆ ಹೊಂದಿರುವ ಸಮುದಾಯವನ್ನು ಪ್ರತಿನಿಧಿಸುವ ವೀರಸೌಧ-ಅಜ್ಹಾಧ್ ಭವನ ಕಟ್ಟಡ ವ್ಯವಸ್ಥಿತವಾಗಿಲ್ಲ.ಇಲ್ಲಿ ಒಂದು ಸುಸಜ್ಜಿತ ಕಟ್ಟಡ ನಿರ್ಮಿಸಿಕೊಡುವ ಮೂಲಕ ಅವರ ಕಾರ್ಯಾಕ್ರಮಗಳ ಆಯೋಜನೆಗೆ ಜಿಲ್ಲಾಡಳಿತ ಮತ್ತು ಸರಕಾರ ಮುಂದಾಗಬೇಕು.ಹಾಗೆಯೇ ಇದುವರೆಗೂ ನೀಡುತ್ತಿರುವ ಮಾಶಾಸನ ಇಂದಿನ ಬೆಲೆ ಹೆಚ್ಚಳದಲ್ಲಿ ಯಾವುದಕ್ಕೂ ಸಾಲದಾಗಿದೆ. ಹಾಗಾಗಿ ಮಾಶಾಸನವನ್ನು ಇಂದಿನ ಬೆಲೆ ಹೆಚ್ಚಳಕ್ಕೆ ಅನುಗುಣವಾಗಿ ಹೆಚ್ಚಳ ಮಾಡಬೇಕು.ಹಾಗೆಯೇ ಸ್ವಾತಂತ್ರಕೋಸ್ಕರ ಬಲಿದಾನ ಗೈದ ಮೂವರ ನೆನಪಿಗಾಗಿ ಇರುವ ತುಮಕೂರಿನ ಸ್ವಾತಂತ್ರ ಚೌಕವನ್ನು ಖಾಸಗಿ ಜಾಹಿರಾತುಗಳಿಂದ ಮುಕ್ತ ಮಾಡಿ,ಅಲ್ಲಿ ಸ್ವಾತಂತ್ರ ಹೋರಾಟಕ್ಕೆ ಸಂಬಂಧಿಸಿದ ಫಲಕಗಳನು ಹಾಕಬೇಕೆಂದು ಮುರುಳೀಧರ ಹಾಲಪ್ಪ ಒತ್ತಾಯಿಸಿದರು.

ಹಿರಿಯ ಸ್ವಾತಂತ್ರ ಹೋರಾಟಗಾರರು, ಹಾವೇರಿ ಜಿಲ್ಲಾ ಸ್ವಾತಂತ್ರ ಹೋರಾಟಗಾರರು ಮತ್ತು ವಾರಸುದಾರರ ಸಂಘದ ಜಿಲ್ಲಾಧ್ಯಕ್ಷರಾದ ರಾಜೇಂದ್ರ ಕಲಘಟಗಿ ಮಾತನಾಡಿ,ಬ್ರಿಟಿಷರಿಂದ ಭಾರತವನ್ನು ಸ್ವಾತಂತ್ರಗೊಳಿಸುವ ನಿಟ್ಟಿನಲ್ಲಿ ನಡೆದ ಹೋರಾಟದಲ್ಲಿ ಲಕ್ಷಾಂತರ ಜನ ತಮ್ಮ ಪ್ರಾಣ ತ್ಯಾಗ ಮಾಡಿದರು, ಅಷ್ಟೆ ಜನರು ಜೈಲು ಸೇರಬೇಕಾಯಿತು.ಇಂತಹ ಹೋರಾಟದಲ್ಲಿ ನಾವು ಭಾಗಿಯಾಗಿದ್ದವು ಎಂಬುದೇ ನಮಗೆ ಹೆಮ್ಮೆಯ ವಿಚಾರ ಎಂದರು.

ತುಮಕೂರು ಜಿಲ್ಲಾ ಸ್ವಾತಂತ್ರ ಹೋರಾಟಗಾರರು ಮತ್ತು ವಾರಸುದಾರರ ಸಂಘದ ಮಹಿಳಾ ಸದಸ್ಯೆ ಟಿ.ಆರ್.ಕಲ್ಪನಾ ಮಾತನಾಡಿ,ತುಮಕೂರು ಜಿಲ್ಲೆಯ ಸ್ವಾತಂತ್ರ ಹೋರಾಟಗಾರರು ಒಗ್ಗೂಡಿ, ಜಿಲ್ಲಾಡಳಿತದಿಂದ ಈ ಜಾಗವನ್ನು ಪಡೆದು, ಸರಕಾರ ಮತ್ತು ದಾನಿಗಳ ಸಹಾಯದಿಂದ ಈ ಕಟ್ಟಡ ನಿರ್ಮಾಣ ಮಾಡಲಾಗಿದೆ.ಆದರೆ ಮಾಜಿ ಸೈನಿಕರ ಕಣ್ಣು ಈ ಕಟ್ಟಡದ ಮೇಲೆ ಬಿದ್ದಿದೆ.ನಮಗೆ ಕಟ್ಟಡ ಬಿಟ್ಟುಕೊಡಿ ಎಂದು ಕಿರಿಕಿರಿ ಮಾಡುತ್ತಿದ್ದಾರೆ.ಪೊಲೀಸರ ರಕ್ಷಣೆಯಲ್ಲಿ ಕಾರ್ಯಕ್ರಮ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ.ಈಗಾಗಲೇ ಊರುಕೆರೆ ಬಳಿ ಸುಮಾರು ಒಂದುವರೆ ಎಕರೆ ಜಾಗವನ್ನು ಮಾಜಿ ಸೈನಿಕರ ಕಲ್ಯಾಣ ವೇದಿಕೆಗೆ ಜಿಲ್ಲಾಡಳಿತ ನೀಡಿದ್ದರೂ, ಸ್ವಾತಂತ್ರ ಹೋರಾಟಗಾರರಿಗೆ ನೀಡಿರುವ ಕಟ್ಟಡದ ವಕ್ರದೃಷ್ಟಿ ಬೀರುವುದನ್ನು ಮಾಜಿ ಸ್ವಾತಂತ್ರ ಹೋರಾಟಗಾರರ ಸಂಘ ಖಂಡಿಸುತ್ತದೆ.ಜಿಲ್ಲಾಡಳಿತ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು, ಈ ಕಟ್ಟಡವನ್ನು ಸ್ವಾತಂತ್ರ ಯೋಧರಿಗೆ ಬಿಟ್ಟುಕೊಡಬೇಕೆಂದು ಒತ್ತಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತುಮಕೂರು ಜಿಲ್ಲಾ ಸ್ವಾತಂತ್ರ ಹೋರಾಟಗಾರರು ಮತ್ತು ವಾರಸುದಾರರ ಸಂಘದ ಜಿಲ್ಲಾಧ್ಯಕ್ಷ ಟಿ.ಆರ್.ರೇವಣ್ಣ ಮಾತನಾಡಿ,ನನಗೆ ಮಹಾತ್ಮಗಾಂಧಿ ಮತ್ತು ಭಗತ್‍ಸಿಂಗ್ ಆದರ್ಶ. ಮಹಾತ್ಮಗಾಂಧಿ ಅವರ ಜೀವನ ಚರಿತ್ರೆಯನ್ನು ಚನ್ನಾಗಿ ಓದಿಕೊಂಡು, ಅದರಂತೆ ನಡೆದುಕೊಳ್ಳುತಿದ್ದೇನೆ.ಯುವಕರು ಮಹಾತ್ಮಗಾಂಧಿ ಅವರ ಸಂದೇಶಗಳನ್ನು ಓದಿ, ಅರ್ಥ ಮಾಡಿಕೊಂಡು, ಅದರಂತೆ ನಡೆದುಕೊಳ್ಳಬೇಕೆಂದು ಕರೆ ನೀಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಆಶಾಪ್ರಸನ್ನಕುಮಾರ್,ನಮ್ಮ ತಂದೆಯು ಸಹ ಸ್ವಾತಂತ್ರ ಹೋರಾಟಗಾರರಾಗಿದ್ದು,ಸ್ವಾತಂತ್ರ ಹೋರಾಟಗಾರರ ಕಷ್ಟ, ಸುಖಃಗಳ ಬಗ್ಗೆ ಅರಿವು ಇದೆ.ಸರಕಾರ ಅವರನ್ನು ಗೌರವದಿಂದ ನೋಡಿಕೊಳ್ಳಬೇಕು ಎಂದರು.

ಕಾರ್ಯಕ್ರಮದ ಅಂಗವಾಗಿ ನಗರದ ಸ್ವಾತಂತ್ರ ಚೌಕದಲ್ಲಿ ಧ್ವಜಾರೋಹಣ ನೇರವೇರಿಸಿ,ಮಂಡಿಪೇಟೆ, ಜೆ.ಸಿ.ರಸ್ತೆಯ ಮೂಲಕ ವೀರಸೌಧದ ವರೆಗೆ ಮೆರವಣಿಗೆ ನಡೆಸಲಾಯಿತು.ಎಸ್.ಬಿ.ಐನ ಹಿರಿಯ ಅಧಿಕಾರಿಗಳು ಪ್ರೊ.ಕೆ.ಪುಟ್ಟರಂಗಪ್ಪ ಅವರು ಬರೆದಿರುವ ತುಮಕೂರು ಜಿಲ್ಲೆಯ ಸ್ವಾತಂತ್ರ ಹೋರಾಟಗಾರರು ಎಂಬ ಕಿರು ಹೊತ್ತಿಗೆಯನ್ನು ಬಿಡುಗಡೆ ಮಾಡಿದರು.79ನೇ ಸ್ವಾತಂತ್ರೋತ್ಸವದ ಅಂಗವಾಗಿ ಶಾಲಾ ಮಕ್ಕಳಿಗೆ ಹಮ್ಮಿಕೊಂಡಿದ್ದ ಪ್ರಭಂಧ, ಚಿತ್ರಕಲೆ,ಆಶುಭಾಷಣ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.

ವೇದಿಕೆಯಲ್ಲಿ ಆಶಾಪ್ರಸನ್ನಕುಮಾರ್,ಬಿ.ಎಸ್.ಮಂಜುನಾಥ್, ಬಸವರಾಜ ಹಟ್ಟಿಗೌಡರ್,ಭಾರತ್ ಸೇವಾದಳದ ಶಿವರಾಜು, ಜಗದೀಶ್, ಶಿವಯೋಗಯ್ಯ, ಪುರುಷೋತ್ತಮ್,ತುಮಕೂರು ಜಿಲ್ಲಾಸ್ವಾತಂತ್ರ ಹೋರಾಟಗಾರರು ಮತ್ತು ವಾರಸುದಾರರ ಸಂಘದ ಕಾರ್ಯದರ್ಶಿ ಟಿ.ಆರ್.ಸುದರ್ಶನ್, ಪ್ರಸನ್ನಕುಮಾರ್, ಚನ್ನಮಲ್ಲೇಗೌಡ, ಚನ್ನಕೇಶವಯ್ಯ, ಸತ್ಯ.ಎಸ್, ಕೆ.ಹೆಚ್.ಚಂದ್ರಶೇಖರ್, ಪ್ರೇಮಲತ, ಜಯಮ್ಮ, ಕಲ್ಪನ ಮತ್ತಿತರರು ವೇದಿಕೆಯಲ್ಲಿದ್ದರು.

Leave a Reply

Your email address will not be published. Required fields are marked *