ಗ್ರಾಮಾಂತರ ಕ್ಷೇತ್ರದಲ್ಲಿ ಅಂತರ್ಜಲ ಅಭಿವೃದ್ಧಿಗೆ ಅನುದಾನಕ್ಕೆ ಮನವಿಜಲಶಕ್ತಿ ಸಚಿವ ಸಿ.ಆರ್.ಪಾಟೀಲರಿಗೆ ಶಾಸಕ ಸುರೇಶ್‍ಗೌಡ ಕೋರಿಕೆ

ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದಲಿ ಅಂತರ್ಜಲ ಅಭಿವೃದ್ಧಿಗೆ ಚೆಕ್ ಡ್ಯಾಂ ನಿರ್ಮಾಣ, ಕೆರೆಗಳ ಅಭಿವೃದ್ಧಿಗೆ 46 ಕೋಟಿ ರೂ. ಅನುದಾನ ಬಿಡುಗಡೆ ಮಾಡುವಂತೆ ಕ್ಷೇತ್ರದ ಶಾಸಕ ಬಿ.ಸುರೇಶ್‍ಗೌಡರು ಬುಧವಾರ ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಖಾತೆ ಸಚಿವ ಸಿ.ಆರ್.ಪಾಟೀಲ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.

ನವದೆಹಲಿಯ ಗೃಹ ಕಚೇರಿಯಲ್ಲಿ ಸಚಿವ ಸಿ.ಆರ್.ಪಾಟೀಲ್ ಅವರನ್ನು ಭೇಟಿ ಮಾಡಿದ ಶಾಸಕ ಸುರೇಶ್‍ಗೌಡರು, ತುಮಕೂರು ಗ್ರಾಮಾಂತರ ಕ್ಷೇತ್ರದ ನೀರಿನ ಬವಣೆ ಬಗ್ಗೆ ಮನವರಿಕೆ ಮಾಡಿಕೊಟ್ಟರು. ಕ್ಷೇತ್ರದಲ್ಲಿ ಯಾವುದೇ ಶಾಶ್ವತ ನೀರಿನ ವ್ಯವಸ್ಥೆಯಿಲ್ಲ, ಮಳೆ ಆಶ್ರಯದ ಕೆರೆಗಳ ನೀರನ್ನು ಅವಲಂಬಿಸಬೇಕಾಗಿದೆ. ಎಲ್ಲಾ ಗ್ರಾಮಗಳಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಮನೆಮನೆಗೆ ಕುಡಿಯುವ ನೀರು ವಿತರಣೆ ಕಾಮಗಾರಿ ಆರಂಭವಾಗಿದೆ. ನೀರಿನ ಅಭಾವ ನಿವಾರಣೆ ಮಾಡಲು ಅಂತರ್ಜಲ ವೃದ್ಧಿ ಮಾಡುವುದು ಅನಿವಾರ್ಯವಾಗಿದೆ. ಈ ಪರಿಸ್ಥಿತಿಯಲ್ಲಿ ಕ್ಷೇತ್ರದಲ್ಲಿ ಅಂತರ್ಜಲ ಸುಧಾರಣಾ ಕಾರ್ಯಕ್ರಮಗಳಿಗೆ ಅನುದಾನ ಬಿಡುಗಡೆ ಮಾಡಿ ನೆರವಾಗಬೇಕು ಎಂದು ಮನವಿ ಮಾಡಿದರು.

ಕ್ಷೇತ್ರದಲ್ಲಿ ಅಂತರ್ಜಲ ಅಭಿವೃದ್ಧಿಗಾಗಿ ಶಿಥಿಲಗೊಂಡಿರುವ ಪುರಾತನ ಕೆರೆಗಳ ಜೀರ್ಣೋದ್ಧಾರ ಮಾಡಿ ಅಭಿವೃದ್ಧಿಪಡಿಸಿ ಮಳೆ ನೀರಿನ ಸಂಗ್ರಹ ಪ್ರಮಾಣ ಹೆಚ್ಚು ಮಾಡಬೇಕಾಗಿದೆ. ವಿವಿಧೆಡೆ ಚೆಕ್ ಡ್ಯಾಂಗಳನ್ನು ನಿರ್ಮಾಣ ಮಾಡಿ ಮಳೆ ನೀರು ಸಂಗ್ರಹಿಸುವ ಅಗತ್ಯವಿದೆ. ಈ ಕಾರ್ಯಕ್ಕಾಗಿ 46 ಕೋಟಿ ರೂ.ಗಳ ಅನುದಾನವನ್ನು ಬಿಡುಗಡೆ ಮಾಡುವಂತೆ ಕೇಂದ್ರ ಜಲಶಕ್ತಿ ಸಚಿವರನ್ನು ಕೋರಿದರು.

ಕ್ಷೇತ್ರದ ಬೆಳ್ಳಾವಿ ಕೆರೆ, ಶೆಟ್ಟಿಹಳ್ಳಿ ಉತ್ತರಘಟ್ಟ ಕೆರೆ, ಹೆಬ್ಬೂರು ಹೋಬಳಿಯ ಹೆಬ್ಬೂರು ಅಮಾನಿಕೆರೆ, ಲಿಂಗಾಪುರ ಕೆರೆ, ನಾಗವಲ್ಲಿ ಅಮಾನಿಕೆರೆ, ನಿಡವಳಲು ಕೆರೆ, ಕೆಂಬಳಲು ಕೆರೆ, ಹೊನಸಿಗೆರೆ ಕೆರೆ, ಬಿದರೆಕಟ್ಟೆ ಕೆರೆ, ಕಸಬಾ ಹೋಬಳಿಯ ಸ್ವಾಂದೇನಹಳ್ಳಿ ಕೆರೆ, ಅರಕೆರೆ ಕೆರೆ, ಊರ್ಡಿಗೆರೆ ಹೋಬಳಿಯ ಕೋಳಿಹಳ್ಳಿ ಕೆರೆ, ಗೂಳೂರು ಹೋಬಳಿಯ ಗೂಳೂರು ಕೆರೆ, ಸಾಸಲು ಕೆರೆ, ಮುಳುಕುಂಟೆ ಕೆರೆ, ಹುಲ್ಲೇನಹಳ್ಳಿ ಕೆರೆ, ವೀರನಾಯಕನಹಳ್ಳಿ ಕೆರೆ, ವಡ್ಡರಹಳ್ಳಿ ಕೆರೆ, ಕುಚ್ಚಂಗಿ ಕೆರೆ, ದೊಡ್ಡಸಾರಂಗಿ ಕೆರೆ, ಮರಳೂರು ಅಮಾನಿಕೆರೆಗಳ ಅಭಿವೃದ್ಧಿ ಮಾಡಬೇಕಾಗಿದೆ ಎಂದು ಶಾಸಕ ಸುರೇಶ್‍ಗೌಡರು ಕೇಂದ್ರ ಸಚಿವ ಸಿ.ಆರ್.ಪಾಟೀಲ್ ಅವರಿಗೆ 46.15 ಕೋಟಿ ರೂ.ಗಳ ಕ್ರಿಯಾ ಯೋಜನೆ ಸಲ್ಲಿಸಿದರು.

ತಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್ ಅವರು ಅನುದಾನ ನೀಡುವ ಭರವಸೆ ನೀಡಿದರು ಎಂದು ಶಾಸಕ ಬಿ.ಸುರೇಶ್‍ಗೌಡರು ಹೇಳಿದ್ದಾರೆ.

ಕೇಂದ್ರ ಸಚಿವರ ಭೇಟಿ ಸಂದರ್ಭದಲ್ಲಿ ನೆಲಮಂಗಲ ಮಾಜಿ ಶಾಸಕ ಶ್ರೀನಿವಾಸ್, ಜಿಲ್ಲಾ ಬಿಜೆಪಿ ಎಸ್.ಸಿ. ಮೋರ್ಚಾ ಅಧ್ಯಕ್ಷ ಹೊಳಕಲ್ ಆಂಜನಪ್ಪ, ಮುಖಂಡರಾದ ಪ್ರಭಾಕರ್, ಗಂಗರಾಜು, ಭೈರೇಗೌಡ ಮೊದಲಾದವರು ಹಾಜರಿದ್ದರು.

Leave a Reply

Your email address will not be published. Required fields are marked *