ಹೇಮಾವತಿ ಲಿಂಕ್ ಕೆನಾಲ್ : ರೈತರಿಗೆ ಆತಂಕ ಬೇಡ – ಡಿ.ಕೆ.ಶಿವಕುಮಾರ್

ತುಮಕೂರು : ಹೇಮಾವತಿ ಲಿಂಕ್ ಕೆನಾಲ್ ಯೋಜನೆಯ ಬಗ್ಗೆ ತುಮಕೂರು ಜಿಲ್ಲೆಯ ಯೋಜನೆ ವ್ಯಾಪ್ತಿ ಪ್ರದೇಶದ ರೈತರು ಗಾಬರಿಪಡುವ ಅಗತ್ಯವಿಲ್ಲ ಎಂದು ಉಪ ಮುಖ್ಯಮಂತ್ರಿ ಹಾಗೂ ಸಣ್ಣ ನೀರಾವರಿ ಸಚಿವ ಡಿ.ಕೆ.ಶಿವಕುಮಾರ್ ರೈತರಿಗೆ ಭರವಸೆ ನೀಡಿದ್ದಾರೆ.

ಶುಕ್ರವಾರ ಗುಬ್ಬಿ ತಾಲೂಕಿನ ಸುಂಕಾಪುರದ ಟಿ.ಬಿ. ಕೆನಾಲ್ 70ನೇ ಕಿ.ಮೀ.ನಲ್ಲಿ ಹೇಮಾವತಿ ಲಿಂಕ್ ಕೆನಾಲ್ ಕಾಮಗಾರಿಯ ಪರಿವೀಕ್ಷಣೆ ನಡೆಸಿದ ನಂತರ ಅವರು ಮಾತನಾಡಿದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ತತ್ವದಲ್ಲಿ ನಮ್ಮ ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ತುಮಕೂರು ಜಿಲ್ಲೆಯಲ್ಲಿ ಕೈಗೆತ್ತಿಳ್ಳಲಾಗಿರುವ ಹೇಮಾವತಿ ಲಿಂಕ್ ಕೆನಾಲ್ ಯೋಜನೆಯಿಂದ ಯಾವ ರೈತರಿಗೂ ಅನ್ಯಾಯವಾಗುವುದಿಲ್ಲ. ಈ ವಿಷಯದಲ್ಲಿ ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಅವರು ಹೇಳಿದರು.

ಕರ್ನಾಟಕ ರಾಜ್ಯದ ನೀರಾವರಿ ಸಚಿವನಾಗಿ ರಾಜ್ಯದ ಎಲ್ಲ ರೈತರಿಗೆ ಅನುಕೂಲವಾಗುವಂತೆ ನೀರಾವರಿ ಯೋಜನೆಗಳನ್ನು ರೂಪಿಸುವುದು ನಮ್ಮ ಜವಾಬ್ದಾರಿಯಾಗಿದೆ. ತುಮಕೂರಿನ ಎಲ್ಲಾ ಕ್ಷೇತ್ರಗಳ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, ತುಮಕೂರು ತಮಗೆ ಅತ್ಯಂತ ಆಪ್ತ ಜಿಲ್ಲೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸರ್ಕಾರವಿದ್ದಾಗ ಈ ಯೋಜನೆಗೆ ಮಂಜೂರಾತಿ ನೀಡಲಾಗಿತ್ತು. ಆದರೆ ನಂತರ ಅಧಿಕಾರಕ್ಕೆ ಬಂದ ಯಡಿಯೂರಪ್ಪ ಅವರ ಸರ್ಕಾರ ಈ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಆಗ ಕೇವಲ 600 ಕೋಟಿ ರೂ.ಗಳಲ್ಲಿ ಮುಗಿಯಬೇಕಿದ್ದ ಈ ಕಾಮಗಾರಿಯ ವೆಚ್ಚ ಈಗ 1000 ಕೋಟಿ ರೂ.ಗಳಿಗೆ ಏರಿಕೆಯಾಗಿದೆ ಎಂದು ಹೇಳಿದರು.

 ಈಗಾಗಲೇ ಈ ಯೋಜನೆಗಾಗಿ 400 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಪೈಪ್‍ಗಳ ಖರೀದಿ ಮಾಡಲಾಗಿದೆ. ಮುಂದಿನ ನಾಲೈದು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.


ಅಭಿವೃದ್ಧಿ ಕೆಲಸಗಳಲ್ಲಿ ರಾಜಕೀಯ ಮಾಡಬಾರದು. ತುಮಕೂರು ಜಿಲ್ಲೆಯ ಅಭಿವೃದ್ಧಿಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಯಾವುದೇ ರೈತರಿಗೆ ನೀರು ಹಂಚಿಕೆಯಲ್ಲಿ ಅನ್ಯಾಯವಾಗುವುದಿಲ್ಲ. ಈ ಯೋಜನೆಯಲ್ಲಿ ಸ್ಕ್ವಾಡ್‍ಗೇಟ್‍ಗಳನ್ನು ಅಳವಡಿಸಲಾಗುತ್ತಿದ್ದು, ಸಾರ್ವಜನಿಕರು ನೀರಿನ ಹರಿವನ್ನು ವೀಕ್ಷಿಸಬಹುದಾಗಿದೆ ಎಂದರು.

ಪ್ರಸಕ್ತ ಯೋಜನೆಯಲ್ಲಿ ಒಂದು ತಾಲ್ಲೂಕಿಗೆ ಎಷ್ಟು ನೀರು ಒದಗಿಸಲಾಗಿದೆಯೋ ಅಷ್ಟನ್ನೇ ಬಳಸಿಕೊಳ್ಳಲು ಅವಕಾಶವಿದೆ. ಯಾವುದೇ ಅನಧಿಕೃತ ಗೇಟ್‍ಗಳನ್ನು ಹಾಕಲು ಅವಕಾಶವಿಲ್ಲ. ಈ ಯೋಜನೆ ಅನುಷ್ಠಾನ ಸಂಬಂಧಿಸಿದಂತೆ ಸದ್ಯದಲ್ಲೇ ಬೆಂಗಳೂರಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಕಾಮಗಾರಿ ಪೂರ್ಣಗೊಳಿಸುವ ಸಂಬಂಧ ಕ್ರಮ ವಹಿಸಲಾಗುವುದು ಎಂದು ಅವರು ತಿಳಿಸಿದರು. 

 ಜಿಲ್ಲೆಯಲ್ಲಿ ನೀರಿನ ಅಭಾವವನ್ನು ತಗ್ಗಿಸಲು ಚಿಕ್ಕನಾಯಕನಹಳ್ಳಿ, ಮಧುಗಿರಿ, ಪಾವಗಡ, ಸಿರಾ ಹಾಗೂ ಕೊರಟಗೆರೆ ತಾಲ್ಲೂಕುಗಳ ಪ್ರಮುಖ ಕೆರೆಗಳಿಗೆ ನೀರು ತುಂಬಿಸಲು ಸರ್ಕಾರ ಮಹತ್ವಾಕಾಂಕ್ಷಿ ಯೋಜನೆ ರೂಪಿಸಿದೆ. ಈ ಯೋಜನೆಗೆ ಸುಮಾರು 20 ಸಾವಿರ ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ ಎಂದು ಇದೇ ಸಂದರ್ಭದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.

ಕರ್ನಾಟಕ ಸರ್ಕಾರದ ನವದೆಹಲಿ  ವಿಶೇಷ ಪ್ರತಿನಿಧಿ  ಟಿ.ಬಿ. ಜಯಚಂದ್ರ,  ಕೆಎಸ್‍ಆರ್‍ಟಿಸಿ ಅಧ್ಯಕ್ಷ ಶ್ರೀನಿವಾಸ್,  ಕುಣಿಗಲ್ ಶಾಸಕ ಡಾ|| ಎಚ್.ಡಿ.ರಂಗನಾಥ್, ಪಂಚ ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಚಂದ್ರಶೇಖರ್ ಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *