ತುಮಕೂರು: ಜಾಗತಿಕವಾಗಿ ಹೊಸ ಹೊಸ ತಂತ್ರಜ್ಞಾನಗಳು ಆವಿಷ್ಕಾರವಾಗುತ್ತಿರುವುದರಿಂದ ಮಾನವನ ಕೆಲಸವನ್ನು ಕಸಿಯುತ್ತಿದೆ. ಇದರಿಂದ ಜಗತ್ತಿನಲ್ಲಿ ಹಲವಾರು ಬದಲಾವಣೆಗಳನ್ನ ಕಂಡಿದೆ. ಇದಕ್ಕೆ ಅನುಗುಣವಾಗಿ ವಿದ್ಯಾರ್ಥಿಗಳು ಪ್ರಸ್ತುತ ಜಾಗತಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವಂತೆ ತಮ್ಮ ಆಲೋಚನ ಶಕ್ತಿಯನ್ನು ಬದಲಾಯಿಸಿಕೊಳ್ಳವ ಅವಶ್ಯಕತೆ ಇದೆ. ಬದಲಾವಣೆ ಜಗತ್ತಿಗೆ ಹೊಂದಿಕೊಳ್ಳುವ ರೀತಿ ಕ್ರಿಯಾಶೀಲಾತ್ಮಕ ಆಲೋಚನಾ ಶಕ್ತಿ ವಿದ್ಯಾರ್ಥಿಗಳಲ್ಲಿ ಬೆಳೆಸಿಕೊಳ್ಳಬೇಕಿದೆ ಎಂದು ಧಾರವಾಡದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಡೀನ್ ಆದ ಪ್ರೊ. ಶಿವಪ್ರಸಾದ್ ಅವರು ಹೇಳಿದರು.
ನಗರದ ಶ್ರೀ ಸಿದ್ದಾರ್ಥ ಇನ್ಸ್ಟಿಟ್ಯೂಟ್ ಆಫ್ ಬಿಸ್ನೆಸ್ ಮ್ಯಾನೇಜ್ಮೆಂಟ್ ವತಿಯಿಂದ ಆಯೋಜಿಸಿದ್ದ ಶೈಕ್ಷಣಿಕ ವರ್ಷ 2025-26 ಸಾಲಿನ ಎಂ ಕಾಮ್ ಮತ್ತು ಎಂಎಸ್ಡಬ್ಲ್ಯೂ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು ‘ಪ್ರಪಂಚದ ಎಲ್ಲಾ ಸಾಧಕರು ಅವರ ಕ್ರಿಯಾತ್ಮಕ ಯೋಚನಾ ಶೈಲಿಯಿಂದ ಸಾಧನೆಗೈದಿದ್ದಾರೆ, ಅಂತಹ ಸಾಧಕರ ಸಾಲಿನಲ್ಲಿ ನಿಲ್ಲಬೇಕಾದರೆ ಕ್ರಿಯಾತ್ಮಕ ಯೋಚನೆ ಶಕ್ತಿ ಅತ್ಯಗತ್ಯ. ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನ ಮಾನವ ಕೆಲಸಗಳನ್ನು ಸುಲಭಗೊಳಿಸಿದೆ. ಇಂತಹ ತಂತ್ರಜ್ಞಾನವನ್ನು ಬಳಸಿಕೊಂಡು ಯಾವೆಲ್ಲಾ ಕ್ಷೇತ್ರದಲ್ಲಿ ಅಭಿವೃದ್ಧಿಯನ್ನು ತರಬಹುದು ಎಂಬುದನ್ನು ತಮ್ಮ ಆಲೋಚನ ಶಕ್ತಿಯಿಂದ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಅತಿಥಿಯಾಗಿದ್ದ ಅನಾಲಿಟಿಕಲ್ ಅಂಡ್ ಕ್ರಿಯೇಟಿವ್ ಸ್ಟುಡಿಯೋ ಪಿವಿಟಿ ಲಿಮಿಟೆಡ್ನ ಪ್ರಮೋದ್ ಚಿನ್ನಪ್ಲ ಅವರು ಮಾತನಾಡಿ ‘ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಮತ್ತು ಅಂಕಗಳಿಗೆ ಸೀಮಿತವಾಗಿ ಹೊರ ಜಗತ್ತಿನ ಹಲವಾರು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ನಿರ್ವಹಣಾ ಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಕೈಗಾರಿಕಾ ವೀಕ್ಷಣೆ ಮಾಡುವುದರ ಮೂಲಕ ಪ್ರಾಯೋಗಿಕ ಜ್ಞಾನವನ್ನು ಪಡೆಯುವುದು ಅತಿ ಮುಖ್ಯವಾಗಿರುತ್ತದೆ. ತರಗತಿಯಲ್ಲಿ ಕಲಿಯುವುದರ ಜೊತೆಗೆ ಪ್ರಾಯೋಗಿಕ ಕಲಿಕೆಯನ್ನು ಪಡೆದುಕೊಂಡರೆ ನೂರಾರು ಅವಕಾಶಗಳು ನಿಮ್ಮದಾಗುತ್ತವೆ’ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಸ್ವಾಗತ ಸಮಾರಂಭದಲ್ಲಿ ಎಸ್ಎಸ್ಐಬಿಎಂನ ಪ್ರಾಂಶುಪಾಲರಾದ ಡಾ. ಮಮತ ಜಿ ಪ್ರಾಸ್ತಾವಿಕ ನುಡಿಗಳನ್ನಾಡಿ ಎಲ್ಲರನ್ನು ಸ್ವಾಗತಿಸಿದರು. ಎಂಕಾಂ ಮತ್ತು ಎಂಎಸ್ಡಬ್ಲ್ಯೂ ವಿಭಾಗದ ಮುಖ್ಯಸ್ಥರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.