ತುಮಕೂರು : ನಗರದಲ್ಲಿ ಅಕ್ಟೋಬರ್ 2ರವರೆಗೆ ದಸರಾ ವೈಭವದ ದೀಪಾಲಂಕಾರವನ್ನು ಸಾರ್ವಜನಿಕರು ವೀಕ್ಷಿಸಲು ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಿರುವ ಅಂಬಾರಿ ಡಬಲ್ ಡೆಕ್ಕರ್ ಬಸ್ಸಿನ ಕಾರ್ಯಾಚರಣೆ ಸಮಯವನ್ನು ಬದಲಾಯಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ಸಾರ್ವಜನಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ಈ ವ್ಯವಸ್ಥೆ ಮಾಡಲಾಗಿದ್ದು, ಇಂದಿನಿಂದ ಡಬಲ್ ಡೆಕ್ಕರ್ ಬಸ್ ಅಕ್ಟೋಬರ್ 2ರವರೆಗೆ ಪ್ರತಿ ದಿನ ಸಂಜೆ 4 ರಿಂದ ರಾತ್ರಿ 10 ಗಂಟೆಯವರೆಗೆ ಬಿ.ಜಿ.ಎಸ್. ವೃತ್ತ, ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದ ರಸ್ತೆ, ಆಂಜನೇಯ ಸ್ಟ್ಯಾಚು, ಅಮಾನಿಕೆರೆ, ಶಿವಕುಮಾರ ಸ್ವಾಮೀಜಿ ಸರ್ಕಲ್ ಮಾರ್ಗವಾಗಿ ಜೂನಿಯರ್ ಕಾಲೇಜು, ಪುನಃ ಬಿ.ಜಿ.ಎಸ್. ವೃತ್ತದವರೆಗೆ ಕಾರ್ಯಾಚರಣೆ ಮಾಡಲಿದೆ. ಉಚಿತ ಅಂಬಾರಿ ಪ್ರಯಾಣ ವ್ಯವಸ್ಥೆಯು ಬೆಳಗಿನ ಸಮಯದಲ್ಲಿ ಕಲ್ಪಿಸಿರುವುದಿಲ್ಲ. ಈ ಪ್ರಯಾಣವು ಸಂಪೂರ್ಣ ಉಚಿತವಾಗಿದ್ದು, ಯಾವುದೇ ಪ್ರಯಾಣ ವೆಚ್ಚ ಇರುವುದಿಲ್ಲ. ಸಾರ್ವಜನಿಕರು ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.