ಮಹಿಳಾ ಬೈಕ್ ರೈಡ್ ನಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ಓಡಿಸಿ ದಸಾರಕ್ಕೆ ಮೆರಗು ತಂದ ಮಹಿಳಾ ಡಿಸಿ, ಎಸಿ.

ತುಮಕೂರು : ಈ ಹಿಂದೆ ಮಹಿಳೆಯರು ಸೈಕಲ್ ಓಡಿಸಿದರೇನೆ ಜನ ಎಂತಹ ಕಾಲ ಬಂತಪ್ಪ ಅನ್ನೋರು, ಆದರೆ ತುಮಕೂರು ದಸರಾದಲ್ಲಿ ಮಹಿಳಾ ಜಿಲ್ಲಾಧಿಕಾರಿ, ಮಹಿಳಾ ಉಪವಿಭಾಧಿಕಾರಿ, ಮಹಿಳಾ ಸಬ್ ಇನ್ಸ್‍ಪೆಕ್ಟರ್ ಅವರುಗಳು ರಾಯಲ್ ಎನ್‍ಫೀಲ್ಡ್ ಬೈಕ್ ಓಡಿಸುವ ಮೂಲಕ ದಸರಕ್ಕೆ ಮೆರಗನ್ನು ತಂದು ಕೊಟ್ಟರು.

ತುಮಕೂರು ದಸರಾ ಉತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಮಹಿಳಾ ಬೈಕ್ ರೈಡ್‍ಗೆ ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ: ಜಿ. ಪರಮೇಶ್ವರ ಅವರು ಶನಿವಾರ ನಗರದ ಬಟವಾಡಿ ಬಳಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ  ಬೈಕ್ ರೈಡಿನ ಮುಂದಿನ ಸಾಲಿನಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು ಕಣ್ಣಿಗೆ ಗಾಗಲ್, ತಲೆಗೆ ಹೆಲ್ಮೆಟ್ ಧರಿಸಿ ರಾಯಲ್ ಎನ್‍ಫೀಲ್ಡ್ ಭಾರಿ ಬೈಕನ್ನು ಚಲಾಯಿಸಿದ್ದು ನೋಡುಗರಿಗೆ ಅಚ್ಚರಿ ಮೂಡಿಸಿತು.  ಉಪವಿಭಾಗಾಧಿಕಾರಿ ನಾಹಿದಾ ಜûಮ್ ಜûಮ್ ಅವರೂ ಸಹ ರಾಯಲ್ ಎನ್‍ಫೀಲ್ಡ್ ಚಾಲನೆ ಮಾಡುವ ಮೂಲಕ ಜಿಲ್ಲಾಧಿಕಾರಿಗಳಿಗೆ ಸಾತ್ ನೀಡಿದರು. ಸುಮಾರು 300 ದ್ವಿಚಕ್ರ ವಾಹನಗಳ ಮಹಿಳಾ ಸವಾರರು ಈ ರೈಡ್‍ನಲ್ಲಿ ಭಾಗವಹಿಸಿದ್ದರು. 


ಮಹಿಳೆಯರು ಮನೆಯಲ್ಲಿ “ಸೌಟು ಹಿಡಿದು ಅಡುಗೆ ಮಾಡಲು ಸೈ-ಹ್ಯಾಂಡಲ್ ಹಿಡಿದು ಬೈಕ್ ಓಡಿಸಲು ಸೈ” ಎಂದು ಹೊಂಡಾ ಆಕ್ಟಿವಾ, ಜುಪಿಟರ್, ಡಿಯೋ, ಆ್ಯಕ್ಸೆಸ್, ಫ್ಯಾಸಿನೋ ಬೈಕ್ ಸವಾರಿ ಮಾಡುತ್ತಾ ಬಟವಾಡಿ ವೃತ್ತದಿಂದ ಎಸ್‍ಐಟಿ ಬ್ಯಾಕ್ ಗೇಟ್-ಶೆಟ್ಟಿಹಳ್ಳಿ ಅಂಡರ್ ಪಾಸ್-ಉಪ್ಪಾರಹಳ್ಳಿ ಅಂಡರ್ ಪಾಸ್-ಭದ್ರಮ್ಮ ವೃತ್ತ-ಬಿ.ಜಿ.ಎಸ್. ವೃತ್ತ-ಕಾಲ್ಟೆಕ್ಸ್ ವೃತ್ತ-ಕುಣಿಗಲ್ ವೃತ್ತ-ಡಾ: ಗಂಗಾಧರಯ್ಯ ವೃತ್ತ-ಗುಬ್ಬಿಗೇಟ್-ಕಾಲ್ಟೆಕ್ಸ್ ವೃತ್ತ-ಮಂಡಿಪೇಟೆ ವೃತ್ತ-ಚರ್ಚ್ ವೃತ್ತ-ಬಿ.ಜಿ.ಎಸ್.ವೃತ್ತ-ಎಂ.ಜಿ.ರಸ್ತೆ-ಗುಂಚಿವೃತ್ತ-ಡೀಸಿ ಕಚೇರಿ ವೃತ್ತ-ಕೋತಿತೋಪು ವೃತ್ತ-ತಮ್ಮಯ್ಯ ಆಸ್ಪತ್ರೆ ವೃತ್ತ-ಎಸ್.ಎಸ್.ವೃತ್ತ-ಭದ್ರಮ್ಮ ವೃತ್ತ ಮಾರ್ಗದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದವರೆಗೂ ಸಾಗಿದರು.
 

ವಿಕಲಚೇತನ ಮಹಿಳೆಯರಾದ ಲಲಿತಾ, ನಾಗರತ್ನ, ಪವಿತ್ರ, ವೀಣಾ, ನಿವೇದಿತಾ, ಉಮತ್ ಖಾನಂ ಬೈಕ್ ರೈಡ್‍ನಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. 

ಸಚಿವರಿಂದ ಗಜಪಡೆಗೆ ಪೂಜೆ :-

 ವಿಜಯದಶಮಿಯಂದು ಜರುಗುವ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಶ್ರೀರಾಮ, ನೊಣವಿನಕೆರೆಯ ಲಕ್ಷ್ಮಿ ಹಾಗೂ ಕರಿಬಸವೇಶ್ವರ ಮಠದ ಲಕ್ಷ್ಮಿ ಸೇರಿದಂತೆ 3 ಆನೆಗಳಿಗೆ ನಗರದ ಬಿ.ಜಿ.ಎಸ್. ವೃತ್ತದ ಬಳಿ ಸಚಿವರು ಪೂಜೆ ಸಲ್ಲಿಸಿದರು. 

 ನಂತರ ಗಜಪಡೆಯು ಬಿ.ಜಿ.ಎಸ್. ವೃತ್ತದಿಂದ ಚರ್ಚ್ ಸರ್ಕಲ್ ಮಾರ್ಗವಾಗಿ ಮತ್ತೆ ಬಿ.ಜಿ.ಎಸ್. ವೃತ್ತದವರೆಗೂ ಮೆರವಣಿಗೆಯ ತಾಲೀಮು ನಡೆಸಿತು.

ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಅಪರ ಜಿಲ್ಲಾಧಿಕಾರಿ ಡಾ: ಎನ್. ತಿಪ್ಪೇಸ್ವಾಮಿ, ಅರಣ್ಯ ಸಂರಕ್ಷಣಾಧಿಕಾರಿ ಶಶಿಧರ್, ಸಚಿವರ ವಿಶೇಷ ಕರ್ತವ್ಯಾಧಿಕಾರಿ ನಾಗಣ್ಣ, ಮತ್ತಿತರ ಅಧಿಕಾರಿ, ಸಾರ್ವಜನಿಕರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *