ತುಮಕೂರು : ಭಾನುವಾರ ರಾತ್ರಿ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂಜಿನ ಕವಾಯತು ಮತ್ತು ಸಿಡಿ ಮಂದಿನ ಬಾಣ ಬಿರಿಸು ತುಮಕೂರಿನ ಜನರನ್ನು ಮಂತ್ರಮುಗ್ದರನ್ನಾಗಿಸಿ, ನಿಬ್ಬೆರಗುಗೊಳಿಸಿತು.

250ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಪಂಜನ್ನು (ಬೆಂಕಿಯ ದೀವಟಿಗೆ) ಹಿಡಿದು ಬಾಂಡ್‍ನ ವಾದ್ಯದ ಶಬ್ದಕ್ಕೆ ತಕ್ಕಂತೆ ಪಂಜನ್ನು ವಿವಿಧ ಕೋನಗಳಲ್ಲಿ ಹಿಡಿದು ನೃತ್ಯ ಮಾಡಿದ್ದು ಇಡೀ ಕ್ರೀಡಾಂಣದಲ್ಲಿ ತುಂಬಿದ್ದ ಜನರು ರೋಮಾಂಜನಗೊಂಡು ಸಿಳ್ಳೆ, ಚಪ್ಪಾಳೆ ಸುರಿಮಳೆಗೈದರು.
ತುಮಕೂರು ದಸರಾ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಪಂಜಿನ ಕವಾಯತು ದಸರಾಕ್ಕೆ ಹೊಸ ಮೆರಗನ್ನು ತಂದು ಕೊಟ್ಟಿತು. ಇನ್ನೂರೈವತ್ತಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಂಕಿಯ ದೀವಟಿಗೆಯನ್ನು ವಿವಿಧ ಭಂಗಿಗಳಲ್ಲಿ ಹಲವಾರು ಆಕರ್ಷಕ ಕಲಾಕೃತಿಗಳನ್ನು ನಿರ್ಮಿಸಿ ಜನರಿಗೆ ಮನಮೋಹಕ ಮನರಂಜನೆಯನ್ನು ನೀಡಿದರು.
ಬೆಂಕಿಯ ದೀವಟಿಗೆ (ಪಂಜು) ಬಳಸಿ ‘ತುಮಕೂರು ದಸರಾ-2025, ವೆಲ್‍ಕಮ್ ಟು ಆಲ್, ಥ್ಯಾಂಕ್ಯೂ, ಎಂಬ ಕಲಾಕೃತಿಗಳನ್ನು ಮಾಡುವುದರ ಮೂಲಕ ಒಂದು ಬೆಳಕಿನ ಲೋಕವನ್ನು ಸೃಷ್ಠಿಸಿ ಜನತೆಯನ್ನು ಬೆಳಕಿನ ಮಳೆಯಲ್ಲಿ ಮಿಂದೇಳುವಂತೆ ಮಾಡಿದರು.

ಸುಮಾರು 25 ನಿಮಿಷಗಳ ಕಾಲ ನಡೆದ ಈ ಪಂಜಿನ ಕವಾಯತಿನಲ್ಲಿ ಎನ್‍ಸಿಸಿ, ಎನ್‍ಎಸ್‍ಎಸ್, ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಭಾಗವಹಿಸಿದ್ದರು, ವಿಶೇಷವೆಂದರೆ 160 ವಿದ್ಯಾರ್ಥಿನಿಯರು ಇದರಲ್ಲಿ ಭಾಗವಹಿಸಿದ್ದರು. ಅಲ್ಲದೆ ವಿವಿಧ ಸಾಹಸ ದೃಶ್ಯಗಳನ್ನು ಸಹ ಪ್ರದರ್ಶಿಸಲಾಯಿತು, ಸುಮಾರು ಎರಡು ತಿಂಗಳ ಕಾಲ ನಿರಂತರ ತರಬೇತಿಯನ್ನು ನೀಡಿದ್ದರಿಂದ ಭಾನುವಾರ ನಡೆದ ಈ ಪಂಜಿನ ಕವಾಯತು ಜನರ ಪ್ರೀತಿ, ಮೆಚ್ಚಿಗೆಯನ್ನು ಗಳಿಸಿತು.
ಪಂಜಿನ ಕವಾಯತು ಮತ್ತು ಕಂಬದ ರಂಗಯ್ಯ ತಂಡದ ರಸಸಂಜೆ ಕಾರ್ಯಕ್ರಮಕ್ಕೆ ಉಚಿತ ಪಾಸ್ ವ್ಯವಸ್ಥೆಯನ್ನು ಮಾಡಲಾಗಿತ್ತು, ತುಮಕೂರಿನ ನಾಗರಿಕರು ಕುಟುಂಬ ಸಮೇತರಾಗಿ ಬಂದು ಕ್ರೀಡಾಂಗಣಕ್ಕೆ ಮೆರಗು ತಂದಿದ್ದರು. ಇಡೀ ಕ್ರೀಡಾಂಗಣ ಮಕ್ಕಳು, ಮಹಿಳೆಯರಿಂದ ತುಂಬಿತ್ತು.
ಕಂಬದ ರಂಗಯ್ಯ ತಂಡ ಹಾಡಿದ ಗೊಂಬೆ ಹೇಳುತೈತೆ, ಮತ್ತೆ ಹೇಳುತೈತೆ ನೀನೆ ರಾಜಕುಮಾರ ಎಂಬ ಹಾಡಿಗೆ ಮೊಬೈಲ್ ಟಾರ್ಜ್ ಬೆಳಕಿನ ಮೂಲಕ ಪುನೀತ್‍ರಾಜಕುಮಾರ್ ಅವರನ್ನು ಸ್ಮರಿಸಲಾಯಿತು. ಪಂಜಿನ ಕವಾಯತಿನ ನಂತರ ನಡೆದ ಡ್ರೋನ್ ಶೋ ಮತ್ತು ಹಸಿರು ಸಿಡಿಮದ್ದುಗಳ ಬಾಣ-ಬಿರಿಸು ಪ್ರದರ್ಶನ ಆಕಾಶದಲ್ಲಿ ಬೆಳಕಿನ ಚಿತ್ತಾರವನ್ನೇ ಮೂಡಿಸಿತು.
ಈ ಬಾರಿಯು ಸೇರಿದಂತೆ ತುಮಕೂರಿನಲ್ಲಿ ಎರಡನೇ ವರ್ಷದ ದಸರಾವನ್ನು ಆಚರಿಸುತ್ತಿದ್ದು, ಮೈಸೂರು ಮಾದರಿಯಲ್ಲೇ ಪಂಜಿನ ಕವಾಯತು ವಿದ್ಯಾರ್ಥಿಗಳಿಂದ ನಡೆದದ್ದು ಮೆಚ್ಚಿಗೆಗೆ ಕಾರಣವಾಯಿತು.
ಪಂಜಿನ ಕವಾಯತು, ಸಿಡಿಮದ್ದು ಪ್ರದರ್ಶನವನ್ನು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸಂಸಾರ ಸಮೇತ ವೀಕ್ಷಿಸಿದರು, ಈ ಸಂದರ್ಭದಲ್ಲಿ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕ ಜಿ.ಬಿ.ಜ್ಯೋತಿಗಣೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ವರಿಷ್ಠಾಧಿಕಾರಿ ಕೆ.ವಿ.ಅಶೋಕ್,ಜಿ.ಪಂ. ಸಿಇಓ ಜಿ.ಪ್ರಭು ಉಪಸ್ಥಿತರಿದ್ದರು.
ಮುಂಜಾಗ್ರತ ಕ್ರಮವಾಗಿ ಬಿಗಿಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.