ತುಮಕೂರು:ಇಂದು ಸಮಾಜದಲ್ಲಿ ಕಂಟಕಗಳು ಹೆಚ್ಚುತ್ತಿವೆ.ಶೇ20 ರಷ್ಟು ಜನ ಪ್ರಾಮಾಣಿಕರಿದ್ದರೆ, ಶೇ80ರಷ್ಟು ಜನ ಭ್ರಷ್ಟಾಚಾರಿಗಳು,ಸ್ವಜನ ಪಕ್ಷಪಾತಿಗಳು,ಮೋಸಗಾರರೇ ತುಂಬಿ ತುಳುಕುತಿದ್ದಾರೆ.ಇದೇ ರೀತಿಯಲ್ಲಿ ಮುಂದುವರೆದರೆ ನಮ್ಮ ದೇಶಕ್ಕೆ ಹಿರಿಯರು ಹಾಕಿಕೊಟ್ಟ ಭದ್ರ ಬುನಾದಿ ಮುರಿದು ಬೀಳಲಿದೆ ಎಂದು ಕರ್ನಾಟಕ ಹೈಕೋರ್ಟಿನ ನಿವೃತ್ತ ನ್ಯಾಯಾಧೀಶರು ಹಾಗೂ ಉಪಲೋಕಾಯುಕ್ತರಾದ ಕೆ.ಎನ್.ಫಣೀಂದ್ರ ಎಚ್ಚರಿಕೆ ನೀಡಿದರು.
ಸ್ವಾತಂತ್ರ ಪೂರ್ವದಲ್ಲಿ ಮತ್ತು ಸ್ವಾತಂತ್ರ ನಂತರದಲ್ಲಿ ಈ ದೇಶವನ್ನು ಕಟ್ಟಿದವರು ವಕೀಲರುಗಳು,ಗಾಂಧಿ, ನೆಹರು, ಸರದಾರ್ ವಲ್ಲಭಾಯಿ ಪಟೇಲ್ ಇವರುಗಳು, ದೇಶದ ಆಗು, ಹೋಗುಗಳನ್ನು ಅರ್ಥ ಮಾಡಿಕೊಂಡು ಎಲ್ಲರನ್ನು ಒಳಗೊಂಡ ಸ್ವಾತಂತ್ರ ನಂತರದ ಭಾರತಕ್ಕೆ ಭದ್ರ ಬುನಾದಿ ಹಾಕಿದರು.ಇಂದಿಗೂ ಜನಪ್ರತಿ ನಿಧಿಗಳಲ್ಲಿ ಹೆಚ್ಚಿನವರು ವಕೀಲರೇ ಆಗಿದ್ದಾರೆ.ಶೇ20ರಷ್ಟು ಪ್ರಾಮಾಣಿಕರು, ಶೇ80ರಷ್ಟು ಜನರ ಮನಸ್ಸನ್ನು ಪರಿವರ್ತಿಸುವ ಕೆಲಸ ಮಾಡಬೇಕೆಂದರು.
ಕಾನೂನು ಪದವಿ ಓದಿದವರು ವಕೀಲರಾಗಲೇಬೇಕು ಎಂದೇನಿಲ್ಲ. ನೀವು ಯಾವುದೇ ವೃತ್ತಿ ಕೈಗೊಳ್ಳಿ, ಅದರಲ್ಲಿ ಪ್ರಾಮಾಣಿಕತೆ, ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡರೆ ನೀವು ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ.ಜೀವನದ ಪ್ರತಿ ಹಂತದಲ್ಲಿಯೂ ಸಮಾಜ ನಮಗೆ ಪಾಠ ಕಲಿಸುತ್ತದೆ.ಒಳ್ಳೆಯದನ್ನು ನಮ್ಮೊಳಗೆ ತೆಗೆದುಕೊಂಡು ಮುನ್ನಡೆದಾಗ ಮಾತ್ರ ಎಲ್ಲರಿಂದಲು ಮಾನ್ಯತೆಗೆ ಒಳಗಾಗಲು ಸಾಧ್ಯ.ವಕೀಲರು ಮೊದಲು ಎಲ್ಲವನ್ನು ಗ್ರಹಿಸುವ ಮತ್ತು ಅದನ್ನು ಅರ್ಥೈಸಿ ಕೊಳ್ಳುವುದನ್ನು ಕಲಿಯಬೇಕು.ಆಗ ಮಾತ್ರ ಸಮಾಜವನ್ನು ಸಮರ್ಥವಾಗಿ ಎದುರಿಸಲು ಸಾಧ್ಯವೆಂದು ನ್ಯಾ.ಕೆ.ಎನ್.ಫಣೀಂದ್ರ ನುಡಿದರು.
ಕಲೆ, ಸಾಹಿತ್ಯ, ಸಂಗೀತ ಇವುಗಳು ಮನುಷ್ಯನ ಮಾನಸಿಕ ಮತ್ತು ಶಾರೀರಿಕ ಬೆಳವಣಿಗೆಗೆ ಸಹಕಾರಿಯಾಗಿವೆ.ಕಾಲೇಜು ದಿನಗಳಲ್ಲಿ,ವೃತ್ತಿ ಜೀವನದಲ್ಲಿ ದೊರೆಯುವ ಪ್ರತಿಯೊಂದು ಅವಕಾಶಗಳನ್ನು ತಪ್ಪಿಸಿಕೊಳ್ಳಬಾರದು.ಜಾತಿ,ಧರ್ಮ,ಲಿಂಗ, ವರ್ಣ, ವರ್ಗ ಮೀರಿ ನಾವೆಲ್ಲರೂ ಒಂದೇ ಎಂಬ ಭಾವನೆಯನ್ನು ಬೆಳೆಸಿಕೊಂಡಾಗ ಮಾತ್ರ,ನಾವು ಬೆಳೆಯುವುದರ ಜೊತೆಗೆ, ಇತರರು ಬೆಳೆಯಲು ಸಾಧ್ಯವಾಗುತ್ತದೆ.ಜಾತಿ, ಪೂಜೆ, ಪುನಸ್ಕಾರ ಇವೆಲ್ಲರೂ ನಮ್ಮ ಮನೆಯೊಳಗೆ ಇರಬೇಕೆ ಹೊರತು, ಸಮಾಜದ ನಡುವೆ ಅಲ್ಲ. ಶಾಲಾ ಶಿಕ್ಷಕಿಯಾಗಿದ್ದ ನಮ್ಮ ತಾಯಿ ನನಗೆ ಶಾಲಾ ದಿನಗಳಲ್ಲಿ ಜಾತಿ ಭೇಧ ಮಾಡದಂತೆ ಬುದ್ದಿವಾದ ಹೇಳಿದ್ದರು,ಇದುವರೆಗೂ ಅದನ್ನು ಅನುಸರಿಸಿಕೊಂಡು ಬಂದಿದ್ದೇನೆ ಎಂದು ನ್ಯಾ.ಕೆ.ಎನ್.ಫಣೀಂದ್ರ ತಿಳಿಸಿದರು.
ಮನುಷ್ಯನ ಮಾನ, ಪ್ರಾಣ, ಆಸ್ತಿ ರಕ್ಷಣೆಯೇ ಲೋಕಾಯುಕ್ತ ಸ್ಥಾಪನೆಯ ಹಿಂದಿನ ಉದ್ದೇಶವಾಗಿದೆ.ಕಾರ್ಯಾಂಗ, ಶಾಸಕಾಂಗಗಳಲ್ಲಿ ಕರ್ತವ್ಯ ಲೋಪ ಎಸಗಿ,ಸರಕಾರಗಳ ಉದ್ದೇಶಗಳಿಗೆ ವಿರುದ್ದವಾಗಿ ನಡೆದುಕೊಂಡಾಗ ಲೋಕಾಯುಕ್ತದ ಅಡಿಯಲ್ಲಿ ನ್ಯಾಯ ಪಡೆಯಬಹುದಾಗಿದೆ.ಪ್ರಾಮಾಣಿಕರಾಗಿ ಇರುವುದೇ ತಪ್ಪು ಎನ್ನುವ ಕಾಲದಲ್ಲಿ, ಮನುಷ್ಯನ ಘನತೆ, ಗೌರವದ ಬದುಕಿಗೆ ಪ್ರತಿಯೊಬ್ಬರು ಲೋಕಾಯುಕ್ತರಾಗಬೇಕಾಗುತ್ತದೆ ಎಂದು ನ್ಯಾ.ಫಣೀಂದ್ರ ನುಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್,ಕೆ.ವಿ. ಮಾತನಾಡಿ,ಭ್ರಷ್ಟಾಚಾರ ನಿಮೂರ್ಲನೆಗೆ ಕರ್ನಾಟಕ ಲೋಕಾಯುಕ್ತದಂತಹ ಸಂಸ್ಥೆ ಇಡೀ ವಿಶ್ವದಲ್ಲಿಯೇ ಮತ್ತೊಂದು ಇಲ್ಲ.ಹಾಗಾಗಿಯೇ ಕರ್ನಾಟಕದ ಬಗ್ಗೆ ಜನರಿಗೆ ನಂಬಿಕೆ ಹೆಚ್ಚು.ಲೋಕಾಯುಕ್ತ ಎಸ್ಪಿಯಾಗಿ ಕೆಲಸ ಮಾಡಿದ ದಿನಗಳನ್ನು ಮರೆಯಲು ಸಾಧ್ಯವಿಲ್ಲ.ಪೊಲೀಸರು ಮತ್ತು ವಕೀಲರು ಒಂದೇ ದೊಣಿಯ ಪಯಣಿಗರು,ಸಮಾಜವನ್ನು ತಿದ್ದುವ ನಿಟ್ಟಿನಲ್ಲಿ ನಮ್ಮದೇ ಆದ ರೀತಿಯಲ್ಲಿ ಕೆಲಸ ಮಾಡುತ್ತೇವೆ.ಇಬ್ಬರು ಕೂಡಿದರೆ ಒಳ್ಳೆಯ ಸಮಾಜ ಕಟ್ಟಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿದ್ಯೋದಯ ಪೌಂಢೇಷನ್ನ ಅಧ್ಯಕ್ಷರಾದ ನಿವೃತ್ತ ನ್ಯಾಯಾಧೀಶರಾದ ಹೆಚ್.ಎಸ್.ಕೆಂಪಣ್ಣ ಮಾತನಾಡಿ,ನ್ಯಾಯವಾದಿಯಾಗಿದ್ದ ಕೆ.ವಿ.ಸುಬ್ರಮಣ್ಯಸ್ವಾಮಿ ಅವರು ಬಡ ಮಕ್ಕಳ ಅನುಕೂಲಕ್ಕಾಗಿ ಸ್ಥಾಪಿಸಿದ ವಿದ್ಯೋದಯ ಕಾನೂನು ಕಾಲೇಜು, ಸಾವಿರಾರು ಕಾನೂನು ಪದವಿಧರರನ್ನು ಈ ನಾಡಿಗೆ ಕೊಟ್ಟಿದೆ ಅದರಲ್ಲಿ ನಾನು ಒಬ್ಬ.1975ರಲ್ಲಿ ಕಾನೂನು ಪದವಿ ಮುಗಿಸಿ ಬೆಂಗಳೂರಿಗೆ ವಕೀಲ ವೃತ್ತಿಯ ಕೈಗೊಳ್ಳಲು ತೆರಳಿ, ನಿವೃತ್ತಿ ನಂತರ ಈ ಸಂಸ್ಥೆಯ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದೇನೆ. ಅಂದು ಸುಬ್ರಮಣ್ಯಸ್ವಾಮಿ ಅವರು ಬಡವರಿಗೆ ಎಂದು ಸ್ಥಾಪಿಸಿದ ಈ ಸಂಸ್ಥೆ ಅವರಿಗೆ ಹೆಚ್ಚು ಸಲ್ಲಬೇಕು ಎಂಬ ಕಾರಣಕ್ಕೆ, ಇಡೀ ರಾಜ್ಯದಲ್ಲಿಯೇ ಅತಿ ಕಡಿಮೆ ಶುಲ್ಕು ಪಡೆದು ಕಾನೂನು ಪದವಿ ಬೋಧಿಸುತಿದ್ದೇವೆ.ವಕೀಲ ವೃತ್ತಿ ಎಂಬುದು ಕತ್ತಿಯ ಮೇಲಿನ ನೆಡಿಗೆ, ಪ್ರತಿ ಹೆಜ್ಜೆಯನ್ನು ಎಚ್ಚರಿಕೆಯಿಂದ ಇಡಬೇಕೆಂದು ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯೋದಯ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಟಿ ಹೆಚ್,ಎಸ.ರಾಜು, ವಿದ್ಯೋದಯ ಶಿಒಕ್ಷಣ ಸಂಸ್ಥೆಯ ಸಿಇಓ ಪ್ರೊ,ಕೆ.ಚಂದ್ರಣ್ಣ, ವಿದ್ಯೋದ್ಯಯ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಶಮ ಸೈಯದಿ,ಉಪನ್ಯಾಸಕರು ಉಪಸ್ಥಿತರಿದ್ದರು.