ತುಮಕೂರು: ತುಮಕೂರು ಗ್ರಾಮಾಂತರ ಕ್ಷೇತ್ರದ ಶಾಸಕ ಬಿ.ಸುರೇಶ್‍ಗೌಡರ 60ನೇ ಹುಟ್ಟುಹಬ್ಬವನ್ನು ಶುಕ್ರವಾರ ಬಿಜೆಪಿ ಕಾರ್ಯಕರ್ತರು, ಶಾಸಕರ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿ ತಮ್ಮ ನಾಯಕನಿಗೆ ಜನ್ಮದಿನದ ಶುಭಾಶಯ ಸಲ್ಲಿಸಿದರು. ಸುರೇಶ್‍ಗೌಡರು ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಮಠಗಳಿಗೆ ಭೇಟಿ ನೀಡಿ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಪಕ್ಷದ ಕಾರ್ಯಕರ್ತರು, ಅಭಿಮಾನಿಗಳ ಪ್ರೀತಿಗೆ ಮಾರುಹೋದ ಸುರೇಶ್‍ಗೌಡರು, ಇವರ ಪ್ರೀತಿಯ ಋಣ ದೊಡ್ಡದು. ಪ್ರೀತಿಯಿಂದ ಜಗತ್ತನ್ನೇ ಗೆಲ್ಲಬಹುದು, ಪ್ರೀತಿ ಇರುವ ಕಡೆ ಅಧಿಕಾರ, ಐಶ್ವರ್ಯ ಸೇರಿದಂತೆ ಎಲ್ಲವೂ ದೊರೆಯುತ್ತದೆ ಎಂದು ಈ ವೇಳೆ ಭಾವುಕರಾಗಿ ನುಡಿದರು.

ತಾವು ಯಾವತ್ತೂ ಹಟ್ಟುಹಬ್ಬ ಆಚರಿಸಿಕೊಂಡಿಲ್ಲ, ಈ ದಿನ ಆಭಿಮಾನಿಗಳು ಪ್ರೀತಿಯಿಂದ ನನ್ನ ಜನ್ಮದಿನ ಆಚರಣೆ ಮಾಡುತ್ತಿದ್ದಾರೆ, ಇದು ನನ್ನ ಕಾರ್ಯಕ್ರಮವಲ್ಲ, ಕಾರ್ಯಕರ್ತರ ಕಾರ್ಯಕ್ರಮ. ಇಷ್ಟೆಲ್ಲಾ ಪ್ರೀತಿಯ ಮಹಾಪೂರ ತಮ್ಮ ಮೇಲೆ ಹರಿದುಬಂದಿರುವ ಸಂದರ್ಭದಲ್ಲಿ, ತಾವು ಇನ್ನುಮುಂದೆ ಯಾರ ಮೇಲೂ ಕೋಪ ಮಾಡಿಕೊಳ್ಳಬಾರದು, ಪ್ರೀತಿ, ಶಾಂತಿ, ಸಹನೆಯಿಂದಲೇ ನಡೆದುಕೊಳ್ಳಬೇಕು ಎಂದು ನಿರ್ಧರಿಸಿದ್ದೇನೆ ಎಂದು ಹೇಳಿದರು.
ಬೆಳಿಗ್ಗೆ ಅಭಿಮಾನಿಗಳೊಂದಿಗೆ ಶಿವಗಂಗೆಗೆ ತೆರಳಿದ ಶಾಸಕರು, ಅಲ್ಲಿ ಗವಿ ಗಂಗಾಧರೇಶ್ವರ ಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಿದ್ಧಗಂಗಾ ಮಠಕ್ಕೆ ಆಗಮಿಸಿ ಡಾ.ಶಿವಕುಮಾರ ಸ್ವಾಮೀಜಿಗಳ ಗದ್ದಿಗೆಗೆ ಪೂಜೆ ಸಲ್ಲಿಸಿ, ಆಮೇಲೆ ಶ್ರೀಮಠದ ಅಧ್ಯಕ್ಷರಾದ ಸಿದ್ಧಲಿಂಗ ಸ್ವಾಮೀಜಿಗಳನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದರು.
ಆನಂತರ ಕಾರ್ಯಕರ್ತರೊಂದಿಗೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಹೋಗಿ ಅಲ್ಲಿ ರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಿದರು. ನಂತರ ಗೂಳೂರಿನಲ್ಲಿ ಅಭಿಮಾನಿಗಳು ಶಾಸಕರನ್ನು ಬೆಳ್ಳಿರಥದಲ್ಲಿ ಕೂರಿಸಿ ಪ್ರಮುಖ ರಸ್ತೆಗಳಲ್ಲಿ ಅದ್ದೂರಿಯಾಗಿ ಮೆರವಣಿಗೆ ಮಾಡಿ ಸಂಭ್ರಮಿಸಿದರು. ಈ ವೇಳೆ ಸುರೇಶ್‍ಗೌಡರು ಗೂಳೂರು ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು. ಹೊನ್ನುಡಿಕೆ ಹ್ಯಾಂಡ್‍ಪೋಸ್ಟ್ ಸೇರಿದಂತೆ ದಾರಿಯುದ್ದಕ್ಕೂ ಅಭಿಮಾನಿಗಳು ಗುಂಪುಸೇರಿ ಶಾಸಕರಿಗೆ ಮಾಲಾರ್ಪಣೆ ಮಾಡಿ ಜನ್ಮದಿನದ ಶುಭಾ ಕೋರಿದರು.
ಶಾಸಕರ ಹುಟ್ಟುಹಬ್ಬದ ಕಾರಣ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಕಚೇರಿ ಬಾಣಾವರದ ಶಕ್ತಿಸೌಧದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಜಿಲ್ಲೆಯಾದ್ಯಂತ ಸಾವಿರಾರು ಮಂದಿ ಅಭಿಮಾನಿಗಳು, ಕಾರ್ಯಕರ್ತರು ಸೇರಿದ್ದರು. ಅಭಿಮಾನಿಗಳು ಕೇಕ್ ಕತ್ತರಿಸಿ, ಸಿಹಿ ವಿತರಣೆ ಮಾಡಿ ತಮ್ಮ ನಾಯಕನ ಜನ್ಮದಿನವನ್ನು ಸಡಗರದಿಂದ ಆಚರಿಸಿದರು. ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್‍ನ ಹಲವಾರು ನಾಯಕರು ಆಗಮಿಸಿ ಸುರೇಶ್‍ಗೌಡರಿಗೆ ಹುಟ್ಟುಹಬ್ಬದ ಶುಭಾಶಯ ಕೋರಿದರು.
ನಂತರ ಸುರೇಶ್‍ಗೌಡರು ಬೆಳ್ಳಾವಿಯ ಕಾರದೇಶ್ವರ ಮಠಕ್ಕೆ ತೆರಳಿ ಕಾರದ ವೀರಬಸವ ಸ್ವಾಮೀಜಿಗಳ ಆರ್ಶೀವಾದ ಪಡೆದರು. ಆಮೇಲೆ ದೇವರಾಯನದುರ್ಗಕ್ಕೆ ಹೋಗಿ ನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಿದರು.
ಹುಟ್ಟುಹಬ್ಬದ ಅಂಗವಾಗಿ ಹೆಬ್ಬೂರಿನ ಸರ್ಕಾರಿ ಶಾಲೆ ಮೈದಾನದಲ್ಲಿ ಹೆಸರಾಂತ ಗಾಯಕ ರಾಜೇಶ್‍ಕೃಷ್ಣನ್ ನೇತೃತ್ವದ ತಂಡದಿಂದ ನಡೆದ ಸಂಗೀತ ಸಂಜೆ ಕಾರ್ಯಕ್ರಮದಲ್ಲಿ ಸಾವಿರಾರು ಜನ ಪಾಲ್ಗೊಂಡು ಸಂಭ್ರಮಿಸಿದರು.
ಮಾಜಿ ಸಚಿವ ಸೊಗಡು ಶಿವಣ್ಣ ಅವರು ಸಹ ಶಾಸಕ ಬಿ.ಸುರೇಶಗೌಡ ಅವರನ್ನು ಭೇಟಿ ಮಾಡಿ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ಶಾಸಕರ ಹುಟ್ಟುಹಬ್ಬದ ಸ್ಮರಣಾರ್ಥ ಗ್ರಾಮಾಂತರ ಕ್ಷೇತ್ರದ ಹಲವು ಗ್ರಾಮಗಳಲ್ಲಿ ಕಾರ್ಯಕರ್ತರು ಶಾಸಕರ ಹೆಸರಿನಲ್ಲಿ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಗಿಡಗಳನ್ನು ನೆಟ್ಟು ಶಾಸಕರ ಜನ್ಮದಿನವನ್ನು ಸ್ಮರಣೀಯವಾಗಿಸಿದರು.