ತುಮಕೂರು:ರಾಜಧಾನಿ ಬೆಂಗಳೂರು ಕೇಂದ್ರಿತ ಯೋಜನೆಯ ಲಾಭಕ್ಕಾಗಿ ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಬೈಪಾಸ್‍ರಸ್ತೆ ನಿರ್ಮಾಣ ಭೂಸ್ವಾಧೀನ ಅಧಿಸೂಚನೆ ವಾಪಸ್ ಪಡೆದು ಹಾಲಿ ಇರುವ ರಸ್ತೆಗಳನ್ನೆ ಆಧುನೀಕರಿಸಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿ ಇಂದು ವಿವಿಧ ರೈತಪರ ಸಂಘಟನೆಗಳು ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ನಂದಿಹಳ್ಳಿ, ಮಲ್ಲಸಂದ್ರ, ವಸಂತನರಸಾಪುರ ಬೈಪಾಸ್‍ರಸ್ತೆ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿಯಯೊಂದಿಗೆ ಸಂಯುಕ್ತ ಹೋರಾಟ-ಕರ್ನಾಟಕ,ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ಪ್ರಾಂತರೈತ ಸಂಘ, ಅಖಿಲ ಭಾರತರೈತ ಕೃಷಿ ಕೂಲಿ ಕಾರ್ಮಿಕರ ಸಂಘ,ಅಖಿಲ ಭಾರತಕಿಸಾನ್ ಸಭಾ ಹಾಗೂ ಇನ್ನಿತರರೈತಪರ ಸಂಘಟನೆಗಳ ಮುಖಂಡರು, ಭೂಸ್ವಾಧೀನದಿಂದ ಸಂಕಷ್ಟಕ್ಕೀಡಾಗುವ ರೈತರು ನಗರದ ಟೌನಹಾಲ್‍ನ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆುಯ ಮುಂಭಾಗದಿಂದ ಅಶೋಕ ರಸ್ತೆಯ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಔಟರ್ ರಿಂಗ್ ರಸ್ತೆಗೆ ತಮ್ಮ ಜಮೀನಿನ ಭೂಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ಸಾರುವ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ರಾಜ್ಯರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ತುಮಕೂರು ಜಿಲ್ಲಾಧ್ಯಕ್ಷ ಎ.ಗೋವಿಂದರಾಜು, ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಔಟರ್‍ರಿಂಗ್ ರಸ್ತೆಗೆ ಸುಮಾರು 46 ಹಳ್ಳಿಗಳ 750ಎಕರೆಗೆ ಫಲವತ್ತಾದ ಭೂಮಿ ರೈತರ ಕೈ ತಪ್ಪಿ ಹೋಗಲಿದೆ. ನೂರಾರು ಎಕರೆಗಳಲ್ಲಿನ ತೆಂಗು, ಅಡಿಕೆ, ಮಾವು, ಹಲಸು, ಬಾಳೆಯ ತೋಟ,ಮನೆ-ಮಠ ಬದುಕನ್ನು ನಾಶ ಮಾಡಿ ರೈತರನ್ನು ಬೀದಿಗೆ ತಳ್ಳಿ ನಿರುದ್ಯೋಗ ಹೆಚ್ಚಿಸುವ, ಪರಿಸರ, ಅಂತರಜಲ ಮಲೀನಗೊಳಿಸಿ, ರೋಗ-ರುಜಿನ ಹೆಚ್ಚಿಸಿ ಆಹಾರ ಭದ್ರತೆಗೆ ಧಕ್ಕೆ ತರುವ ಭ್ರಷ್ಟಾಚಾರದ ರಿಯಲ್ ಎಸ್ಟೇಟ್ ದಂದೆಗೆ ಮಣಿದು ರೈತರ ಭೂಮಿಯನ್ನು ಕಸಿಯುವ ನಂದಿಹಳ್ಳಿ-ಮಲ್ಲಸಂದ್ರ-ವಸಂತನರಸಾಪುರ ಬೈಪಾಸ್‍ರಸ್ತೆ ನಿರ್ಮಾಣ ಭೂಸ್ವಾಧೀನ ಅಧಿಸೂಚನೆಯನ್ನು ವಾಪಸಾತಿ ಮಾಡಬೇಕೆಂದು ಆಗ್ರಹಿಸಿದರು.
ಕರ್ನಾಟಕ ರಾಜ್ಯರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ,ಉದ್ದೇಶಿತ ಕ್ಯಾತಸಂದ್ರ ಬಳಿಯಿರುವ ನಂದಿಹಳ್ಳಿಯಿಂದ ಮಲ್ಲಸಂದ್ರ ಮಾರ್ಗವಾಗಿ ವಸಂತನರಸಾಪುರದವರೆಗೆ ನಾಲ್ಕು ಪಥಗಳ ಬೈಪಾಸ್‍ರಸ್ತೆ ನಿರ್ಮಾಣಕ್ಕೆ ರೈತರನ್ನು ಕತ್ತಲಲ್ಲಿ ಇಟ್ಟು ಭೂಸ್ವಾಧೀನದ ಅಧಿಸೂಚನೆ ಹೊರಡಿಸಲಾಗಿದೆ.ಇದು ಮತ್ತೊಂದು ದೇವನಹಳ್ಳಿ ಹೋರಾಟವಾಗಲಿದೆ. ಸಂಯುಕ್ತ ಕಿಸಾನ್ ಮೋರ್ಚಾದಿಂದ ದೇಶದಾದ್ಯಂತ ಇಂತಹ ಹಲವಾರು ರೈತ ವಿರೋಧಿ ಭೂಸ್ವಾಧೀನದ ವಿರುದ್ದ ಹೋರಾಟ ನಡೆಸಿ, ಸಾವಿರಾರು ಎಕರೆ ಭೂಮಿಯನ್ನು ರೈತರಿಗೆ ಹಿಂದಿರುಗಿಸಿದ್ದೇವೆ. ನಿಮ್ಮ ಅನುಮತಿಯಿಲ್ಲದೆ ಅಧಿಕಾರಿಗಳು ಭೂಮಿ ಅಳತೆಗೆ ಬಂದರೆ ಹೆಣ್ಣು ಮಕ್ಕಳು ಪೊರಕೆ, ಗಂಡು ಮಕ್ಕಳು ಚಾವಟಿ ಹಿಡಿದು ಹೋರಾಟಕ್ಕೆ ಸಿದ್ದರಾಗಬೇಕಾಗಿದೆ ಎಂದರು.

ಮಾಜಿ ಶಾಸಕ ಹೆಚ್.ನಿಂಗಪ್ಪ ಮಾತನಾಡಿ, ನಾನು ಇಂದು ಜೆಡಿಎಸ್ ಮುಖಂಡನಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ. ಬದಲಾಗಿ ಓರ್ವ ರೈತನಾಗಿ ಭಾಗಿಯಾಗಿದ್ದೇನೆ. ಈ ವರ್ತುಲ ರಸ್ತೆಗೆ 46 ಹಳ್ಳಿಗಳ ರೈತರ, ಬಡಜನರ ನೂರಾರು ಎಕರೆ ಫಲವತ್ತಾದ ಭೂಮಿ ಮತ್ತು ಬೆಳೆ ಬೆಳೆದಿರುವ ತೆಂಗು, ಅಡಿಕೆ ತೋಟಗಳು, ಮಾವು, ಹಲಸು, ಬಾಳೆಯ ತೋಟಗಳು ಬಲಿಯಾಗುತ್ತವೆ. ಜೊತೆಗೆ ಸಿರಿಧಾನ್ಯಗಳನ್ನು ಬೆಳೆಯುವ ಖುಷಿ ಜಮೀನು, ತೆರೆದ ಬಾವಿ, ಬೋರ್‍ವೆಲ್ ಬಾವಿಗಳು, ಕುರಿ-ಕೋಳಿ ಸಾಕಾಣಿಕೆ ಘಟಕಗಳು,ತೆಂಗಿನಕಾಯಿ ಶೆಡ್‍ಗಳು ರಸ್ತೆಯ ತಳ ಸೇರುತ್ತದೆ. ಇಲ್ಲಿನಜನರ ಬದುಕು ಇವುಗಳ ಮೇಲೆ ಅವಲಂಬಿತವಾಗಿದೆ.ಅಲ್ಲದೆ ಔಟರ್ ರಿಂಗ್ ರಸ್ತೆಯ ಒಳಗೆ ಬರುವ ಎಲ್ಲಾ ಭೂಮಿಯೂ ಮುಂದಿನ ದಿನಗಳಲ್ಲಿ ರೈತರ ಕೈ ತಪ್ಪಿ ಭೂ ಮಾಫಿಯದವರ ಕೈ ಸೇರಲಿದೆ. ಹಾಗಾಗಿ ನಾವು ಈಗಲೇ ಎಚ್ಚೆತ್ತು ನಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಮುಂದಾಗಬೇಕಾಗಿದೆ ಎಂದರು.
ಕರ್ನಾಟಕ ಪ್ರಾಂತರೈತ ಸಂಘದ ಪ್ರಧಾನ ಕಾರ್ಯದರ್ಶಿ ಯಶವಂತ್ ಮಾತನಾಡಿ, ಪ್ರಸ್ತಾಪಿತಔಟರ್‍ರಿಂಗ್‍ರಸ್ತೆ ಹಾದಿಯುದ್ದಕ್ಕೂ ತೋಟಗಳು ನಳನಳಿಸುತ್ತವೆ.ಬೆಳೆಗಳ ಹಸಿರು ಕಣ್ಣಿಗೆ ಆನಂದವಾಗಿದೆ. ಇದು ತುಮಕೂರಿನ ಶ್ವಾಸಕೋಶವಾಗಿದೆ. ಈ ಬೈಪಾಸ್‍ರಸ್ತೆ ನಿರ್ಮಾಣದಿಂದ ಸುತ್ತಮುತ್ತಲ ಜಮೀನು ವಾಣಿಜ್ಯ ಉದ್ದೇಶಗಳಿಗೆ, ಕಟ್ಟಡಗಳಿಗೆ ಬಲಿಯಾಗುವುದು ಖಚಿತ. ಏಕೆಂದರೆ ಬೈಪಾಸ್ ರಸ್ತೆಯ ವಾಸನೆ ಹಿಡಿದ ರಿಯಲ್ ಎಸ್ಟೇಟ್ ವ್ಯಾಪಾರಿಗಳು ಈಗಾಗಲೇ ಜಮೀನುಗಳನ್ನು ಖರೀದಿಸಿ. ರಿಯಲ್ ಎಸ್ಟೇಟ್ ದಂಧೆ ನಡೆಸುವ ಕೆಲಸ ಆರಂಭಿಸಿದ್ದಾರೆ. ಇದಕ್ಕೆ ನಾವುಗಳು ಅವಕಾಶ ನೀಡಬಾರದು ಎಂದರು.
ಪ್ರತಿಭಟನಾ ನಿರತ ರೈತರಿಂದ ಮನವಿ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಶುಭಕಲ್ಯಾಣ್,ರೈತರ ಕೋರಿಕೆಯಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಹೋರಾಟಗಾರರಿಗೆ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಂಕರಪ್ಪ, ಕೆಪಿಆರ್‍ಎಸ್‍ನಅಜ್ಜಪ್ಪ, ಎಐಕೆಕೆಎಂಎಸ್‍ನ ಅಧ್ಯಕ್ಷರಾದ ಎನ್.ಸ್ವಾಮಿ, ಎಐಕೆಎಸ್‍ನ ಕಂಬೇಗೌಡ, ಸಂಯೋಜಕರಾದ ಬಿ.ಉಮೇಶ್, ರಮೇಶ್ ಭೈರಸಂದ್ರ, ಸಿದ್ದಗಂಗಯ್ಯ, ನಿಂಗರಾಜು, ಉದಯಕುಮಾರ್, ಮೋಹನ್‍ಕುಮಾರ್, ಸಿಐಟಿಯುನ ಸೈಯದ್ ಮುಜೀಬ್, ಎಐಟಿಯುಸಿಯ ಗಿರೀಶ್, ರೈತ ಸಂಘ ಯುವ ಘಟಕದ ಚಿರತೆ ಚಿಕ್ಕಣ್ಣ, ಆರೋಹಳ್ಳಿ ಮಂಜುನಾಥ್, ಶ್ರೀನಿವಾಸ್, ಕೆ.ಎಂ.ವೆಂಕಟೇಗೌಡ, ಲಕ್ಷ್ಮಣಗೌಡ, ರಂಗಹನುಮಯ್ಯ, ಆರ್.ಎಸ್.ಚನ್ನಬಸವಣ್ಣ, ದೊಡ್ಡನಂಜಪ್ಪ, ಷಬ್ಬೀರ್‍ಅಹಮದ್, ರಂಗಧಾಮಯ್ಯ ಸೇರಿದಂತೆ ನೂರಾರು ರೈತರುಗಳು ಪಾಲ್ಗೊಂಡಿದ್ದರು.