ಶ್ರೀದೇವಿ ಶಿಕ್ಷಣ ಸಂಸ್ಥೆ ವಿಶ್ವವಿದ್ಯಾಲಯವಾಗಬೇಕು-ಗೃಹ ಸಚಿವ ಡಾ.ಜಿ.ಪರಮೇಶ್ವರ್

ತುಮಕೂರು:ಶಿಕ್ಷಣದಿಂದ ಈ ದೇಶದಲ್ಲಿ ದೊಡ್ಡ ಬದಲಾವಣೆಯೇ ಆಗಿದೆ.1947ರಲ್ಲಿ ಶೇ3ರಷ್ಟಿದ್ದ ಸಾಕ್ಷರತೆ,ಪ್ರಸ್ತುತ ಶೇ80ರಷ್ಟಿದೆ. ಇದರ ಫಲವಾಗಿ ಇಂದು ಇಡೀ ವಿಶ್ವದಲ್ಲಿಯೇ ದೊಡ್ಡ ತಾಂತ್ರಿಕ ಮಾನವ ಸಂಪನ್ಮೂಲವನ್ನು ಉತ್ಪಾಧಿಸುವ ದೊಡ್ಡ ರಾಷ್ಟ್ರವಾಗಿದೆ.ಮೆಡಿಕಲ್, ಇಂಜಿನಿಯರಿಂಗ್ ಹಾಗೂ ಜನರಲ್ ಡಿಗ್ರಿ ಪಡೆದ ಲಕ್ಷಾಂತರ ಜನ ಯುವಜನರು ನಮ್ಮ ದೇಶದಲ್ಲಿ ಇದ್ದಾರೆ ಇದಕ್ಕೆ ಕಾರಣ ಶಿಕ್ಷಣ ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್ ತಿಳಿಸಿದರು.

ನಗರದ ಶ್ರೀದೇವಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಶ್ರೀದೇವಿ ಶಿಕ್ಷಣ ಸಂಸ್ಥೆ ಹಾಗೂ ಶ್ರೀದೇವಿ ಚಾರಿಟಬಲ್ ಟ್ರಸ್ಟ್‍ನ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ ಅವರ ಆತ್ಮಕಥೆ ಆಂತರಂಗದ ಆವಲೋಕನದ ಇಂಗ್ಲಿಷ್ ಅನುವಾದ ನೆನಪುಗಳು ಮತ್ತು ಪ್ರತಿಬಿಂಬಗಳು ಕೃತಿ ಬಿಡುಗಡೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು,ಶಿಕ್ಷಣ ಪಡೆದ ಯುವಜನತೆಗೆ ಅವಕಾಶಗಳನ್ನು ಸೃಷ್ಟಿಸಲು ನಾವೆಲ್ಲರೂ ಮುಂದಾಗಬೇಕಿದೆ ಎಂದರು.

ತುಮಕೂರಿನಲ್ಲಿ ಸಾಧನೆ ಮಾಡುವುದು ತುಂಬ ಕಷ್ಟ ಅಂತಹದರಲ್ಲಿ ಒಂದು ತಳಸಮುದಾಯದಲ್ಲಿ ಹುಟ್ಟಿದ ವ್ಯಕ್ತಿ ಶಿಕ್ಷಣ ಪಡೆಯುವುದು ಕಷ್ಟ.ಇಂತಹ ಹೊತ್ತಿನಲ್ಲಿ ಡಾ.ಎಂ.ಆರ್.ಹುಲಿನಾಯ್ಕರ್ ತನಗಿದ್ದ ಸರಕಾರಿ ಹುದ್ದೆಯನ್ನು ಬಿಟ್ಟು, ಏಕಾಂಗಿಯಾಗಿ ಶ್ರೀದೇವಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸಿ,ಇತರರಿಗೆ ಮಾದರಿಯಾಗಿದ್ದಾರೆ. ಶ್ರೀದೇವಿ ಶಿಕ್ಷಣ ಸಂಸ್ಥೆ ವಿಶ್ವವಿದ್ಯಾಲಯವಾಗಬೇಕು. ಆ ಮೂಲಕ ಮತ್ತಷ್ಟು ಜನರಿಗೆ ಅವಕಾಶದ ಬಾಗಿಲುಗಳನ್ನು ತೆರೆಯುವಂತಾಗಬೇಕು. ಹಣಬಲ, ಜಾತಿ ಬಲವಿಲ್ಲದೆ ಇಂತಹ ಸಂಸ್ಥೆ ಕಟ್ಟಿ ಬೆಳೆಸಿ, ಸಾವಿರಾರು ಯುವಜನರ ಜ್ಞಾನಕೇಂದ್ರವಾಗಿಸಿದ ಹುಲಿನಾಯ್ಕರ್ ಅವರಿಗೆ ತುಮಕೂರು ಜನತೆಯ ಪರವಾಗಿ ತುಂಬು ಹೃದಯದ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಡಾ.ಜಿ.ಪರಮೇಶ್ವರ್ ತಿಳಿಸಿದರು.

ಡಾ.ಎಂ.ಆರ್.ಹುಲಿನಾಯ್ಕರ್ ಅವರ ಆತ್ಮಕಥನ ಅಂತರಂಗದ ಆವಲೋಕನ ಇಂಗ್ಲೀಷ್ ಕೃತಿ ರೆಮಿನ್‍ರೆಷನ್ ಅಂಡ್ ರಿಪ್ಲೇಕ್ಷನ್(ನೆನಪುಗಳು ಮತ್ತು ಪ್ರತಿಬಿಂಬಿಗಳು) ಎಂಬ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಹೆಚ್.ಕೆ.ಪಾಟೀಲ್,ಬಾಂಬೆ ಕರ್ನಾಟಕದ ಸಣ್ಣ ಹಳ್ಳಿ ತುಪ್ಪದ ಕುರಿಹಟ್ಟಿ ಗ್ರಾಮದಿಂದ ಬಂದು, ಇಲ್ಲಿ ತನ್ನ ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಒಂದು ಸಾಮ್ರಾಜ್ಯವನ್ನೇ ಕಟ್ಟಿದ್ದಾರೆ.ಇಂದು ಬಿಡುಗಡೆಯಾಗಿರುವ ಅವರ ಅಂತರಂಗದ ಆವಲೋಕನ ಕನ್ನಡ ಮತ್ತು ಇಂಗ್ಲಿಷ್ ಕೃತಿ,ಕೇವಲ ಹುಲಿನಾಯ್ಕರ್ ಅವರ ಅಂತರಂಗವನ್ನು ಬಿಂಬಿಸದೆ ಇಡೀ ನಾಡಿನ ಸಾಂಸ್ಕøತಿಕ ಚರಿತ್ರೆಯನ್ನು ಅನಾವರಣಗೊಳಿಸಿದೆ ಎಂದರು.

ಸೂಲಗಿತ್ತಿಯಾಗಿ ಸೇವೆ ಮಾಡುತ್ತಿದ್ದ ತಾಯಿಯಿಂದ ಬಂದ ಸಾಮಾಜಿಕ ಸೇವೆಯನ್ನು ಮೈಗೂಡಿಸಿಕೊಂಡು ಇಂದಿಗೂ ಅದೇ ರೀತಿಯಲ್ಲಿ ಬದುಕುತ್ತಿರುವ ಡಾ.ಎಂ.ಆರ್.ಹುಲಿನಾಯ್ಕರ್ ಮಿತ ಭಾಷಿ.ವಿಧಾನಪರಿಷತ್ ಸದಸ್ಯರಾಗಿದ್ದಾಗಲೂ ಯಾರೊಂದಿಗೂ ವೈಮನಸ್ಸು ಕಟ್ಟಿಕೊಳ್ಳದೆ,ಎಲ್ಲರೊಂದಿಗೆ ಸ್ನೇಹಮಯಿಯಾಗಿದ್ದರು. ಇಂದಿಗೂ ಅದನ್ನೇ ಮುಂದುವರೆಸಿ ಕೊಂಡು ಹೋಗುತ್ತಿರುವುದು ಸಂತೋಷದ ವಿಚಾರ.ಅವರ ವಿನಮ್ರ ಸೇವೆ ಮತ್ತಷ್ಟು ವಿಸ್ತಾರಗೊಳ್ಳಲಿ ಎಂದು ಹೆಚ್.ಕೆ.ಪಾಟೀಲ್ ಶುಭ ಹಾರೈಸಿದರು.

ಶ್ರೀದೇವಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಎಂ.ಆರ್.ಹುಲಿನಾಯ್ಕರ್ ಮಾತನಾಡಿ,ಕಾಯಕವಿಲ್ಲದೆ ಬೇರೆ ಲೋಕವಿಲ್ಲ ಎಂದು ನಂಬಿದವನು ನಾನು. ವೈದ್ಯಕೀಯ ಕ್ಷೇತ್ರಕ್ಕೆ ನಾನು ಬಂದಿದ್ದು ಆಕಸ್ಮಿಕ.ಹೈಸ್ಕೂಲು ಮತ್ತು ಕಾಲೇಜು ದಿನಗಳಲ್ಲಿ ಆಶು ಭಾಷಣ,ಪ್ರಬಂಧ ಸ್ಪರ್ಧೆಗಳಲ್ಲಿ ಭಾಗಿಯಾಗಿ, ಬರೆಯವಣಿಯನ್ನು ಕಲಿತಿದ್ದ ನನಗೆ ವೈದ್ಯಕೀಯ ಕಾಲೇಜು ಸೇರ್ಪಡೆ ನಂತರ ಬರವಣಿಗೆಯಿಂದ ದೂರ ಉಳಿದಿದ್ದೆ. ಆದರೆ ಗೆಳೆಯ ಕಮಲೇಶ್ ಅವರ ಒತ್ತಾಸೆಯ ಮೇರೆಗೆ ನನಗೆ ತಿಳಿದಿದ್ದನ್ನು ಪೋನಿನ ಮೂಲಕ ಹೇಳಿದೆ.ಅದನ್ನು ಕಮಲೇಶ್ ಬಹಳ ಅಚ್ಚುಕಟ್ಟಾಗಿ ನಿರೂಪಿಸಿ, ಪುಸ್ತಕ ರೂಪಕ್ಕೆ ತಂದರು. ಅದು ನನ್ನ ಜೀವನಕ್ಕೆ ಹತ್ತಿರವಾಗಿತ್ತು ಎಂದರು.

ನನ್ನ ಪ್ರತಿ ಹಂತದ ಬೆಳೆವಣಿಗೆ ಕುರಿತ ಆಂತರರಂಗದ ಅವಲೋಕನ ಎಂಬ ಕೃತಿಯ ಮೂಲಕ ನನ್ನ ಆತ್ಮಕಥನವಾಗಿ 2023ರ ನವೆಂಬರನಲ್ಲಿ ಪುಸ್ತಕ ರೂಪದಲ್ಲಿ ಹೊರಬಂದಿತ್ತು.ಅದರ ಇಂಗ್ಲಿಷ್ ತರ್ಜುಮೆ ಪ್ರತಿ ನೆನಪುಗಳು ಮತ್ತು ಪ್ರತಿಬಿಂಬಿಗಳು ಎಂಬ ಹೆಸರಿನಲ್ಲಿ ಇಂಗ್ಲಿಷ್‍ನಲ್ಲಿ ಕೃಷ್ಣ ಅವರ ಅನುವಾದದಲ್ಲಿ ಮೂಡಿಬಂದಿದೆ. ತುಮಕೂರು ಸೇರಿದಂತೆ ಕರ್ನಾಟಕದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಸಿದ್ದಗಂಗೆ ಮತ್ತು ಸಿದ್ದಾರ್ಥ ಸಂಸ್ಥೆಗಳ ಕೊಡುಗೆ ಅಪಾರ. ಅದೇ ದಾರಿಯಲ್ಲಿ ಶ್ರೀದೇವಿ ಶಿಕ್ಷಣ ಸಂಸ್ಥೆಯೂ ಸಾಗುತ್ತಿದೆ. ಎಲ್.ಕೆ.ಜಿ.ಯಿಂದ ಮೆಡಿಕಲ್ ಕಾಲೇಜುವರೆಗೆ ಶಿಕ್ಷಣ ನೀಡುತ್ತಿದೆ. ಇದಕ್ಕೆ ಹತ್ತಾರು ಜನರು ಕೈಜೋಡಿಸಿದ್ದಾರೆ. ಕುಟುಂಬದ ಎಲ್ಲರೂ ನನ್ನ ಸಾಧನೆಯ ಹಿಂದಿದ್ದಾರೆ ಎಂದು ಡಾ.ಎಂ.ಆರ್.ಹುಲಿನಾಯ್ಕರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಅಂತರಂಗದ ಅವಲೋಕನ ಕೃತಿಯ ಮೊದಲ ಪ್ರತಿಯನ್ನು ಏಮ್ಸ್ ಅಧ್ಯಕ್ಷರಾದ ಡಾ.ಪದ್ಮಶ್ರೀ ವಿಕಾಸ ಮಹಾತ್ಮೆ ಸ್ವಿಕರಿಸಿ ಮಾತನಾಡಿದರು. ಶಿಕ್ಷಣ ತಜ್ಞರಾದ ಡಾ.ಸಿ.ನಾಗಣ್ಣ, ಮಾಜಿ ಸಂಸದ ಜಿ.ಎಸ್.ಬಸವರಾಜು, ಅಂತರಂಗದ ಅವಲೋಕನ ಕೃತಿಯ ಇಂಗ್ಲೀಷ್ ಅನುವಾದಕ ವಿ.ಕೃಷ್ಣ, ವಿಧಾನಪರಿಷತ್ ಸದಸ್ಯರಾದ ಎಫ್.ಹೆಚ್.ಜಕ್ಕಪ್ಪ, ಶಿಕ್ಷಣ ತಜ್ಞರು ಮಾಜಿ ಉಪಕುಲಪತಿ ಡಾ.ತಿಮ್ಮೇಗೌಡ, ಡಾ.ಎಂ.ಆರ್.ಹುಲಿನಾಯ್ಕರ್‍ರವರ ಶ್ರೀಮತಿ ಶಾಂತಾದುರ್ಗಾದೇವಿ, ಡಾ.ರಮಣ್ ಹುಲಿನಾಯ್ಕರ್,ಅಂಬಿಕಾ ಹುಲಿನಾಯ್ಕರ್,ಎಂ.ಎಸ್.ಪಾಟೀಲ್, ಡಾ. ಲಾವಣ್ಯ ಹುಲಿನಾಯ್ಕರ್, ಪತ್ರಕರ್ತ ಎಸ್.ನಾಗಣ್ಣ, ಟಿ.ಎನ್.ಮಧುಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *